Advertisement

ಹರಿಪ್ರಿಯಾ ಈಗ D/o ಪಾರ್ವತಮ್ಮ

11:00 AM Apr 29, 2018 | |

ನಟಿ ಹರಿಪ್ರಿಯಾ ಅವರು ಕನ್ನಡದಲ್ಲಿ 24ನೇ ಸಿನಿಮಾಗಳನ್ನು ಪೂರೈಸಿದ್ದಾರೆ. ಈಗ 25ನೇ ಸಿನಿಮಾದ ಹೊಸ್ತಿಲಿನಲ್ಲಿರುವ ಅವರು, ಸದ್ದಿಲ್ಲದೇ 25ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಎಲ್ಲಾ ಓಕೆ, ಹರಿಪ್ರಿಯಾ ಅವರ 25ನೇ ಸಿನಿಮಾದ ಟೈಟಲ್‌ ಏನು ಎಂಬ ಕುತೂಹಲ ಸಹಜ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅದು “ಡಾಟರ್‌ ಆಫ್ ಪಾರ್ವತಮ್ಮ’. ಹೌದು, ಹೀಗೊಂದು ಚಿತ್ರದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ.

Advertisement

ಚಿತ್ರದಲ್ಲಿ ಸುಮಲತಾ ಅಂಬರೀಶ್‌, ಪಾರ್ವತಿ ಎಂಬ ಪಾತ್ರ ಮಾಡುತ್ತಿದ್ದು, ಅವರ ಮಗಳಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಇದು ತನಿಖಾಧಾರಿತ ಕಥೆಯಾಗಿದ್ದು, ಹರಿಪ್ರಿಯಾ ಇಲ್ಲಿ ತನಿಖಾಧಿಕಾರಿ. ಹಾಗಂತ ಹೊಡೆದಾಟ, ಬಡಿದಾಟವಿಲ್ಲ. ಥ್ರಿಲ್ಲರ್‌ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಹರಿಪ್ರಿಯಾ ಅವರ ಪಾತ್ರ ಪ್ರಮುಖವಾಗಿದ್ದು, ಕಥೆಗೆ ಹೆಚ್ಚು ಪ್ರಾಮುಖ್ಯತೆ ಇದೆಯಂತೆ.

ಕೇಸ್‌ವೊಂದರ ಬೆನ್ನತ್ತಿ ಹೋಗುವ ಹರಿಪ್ರಿಯಾ ಅದನ್ನು ಹೇಗೆ ಬಗೆಹರಿಸುತ್ತಾರೆಂಬುದು ಸಿನಿಮಾದ ಹೈಲೈಟ್‌. ಚಿತ್ರದಲ್ಲಿ ಥ್ರಿಲ್ಲರ್‌ ಜೊತೆಗೆ ಲವ್‌, ತಾಯಿ-ಮಗಳ ಬಾಂಧವ್ಯಕ್ಕೂ ಹೆಚ್ಚು ಒತ್ತುಕೊಡಲಾಗಿದೆಯಂತೆ. ಇಲ್ಲಿ ಹರಿಪ್ರಿಯಾ ಅವರ ಗೆಟಪ್‌ ಕೂಡಾ ಭಿನ್ನವಾಗಿರಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇನ್ನು, ಸುಮಲತಾ ಅಂಬರೀಶ್‌ ಅವರ ಈಗಾಗಲೇ “ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಅಜೇಯ್‌ ತಾಯಿಯಾಗಿ ನಟಿಸುತ್ತಿದ್ದಾರೆ.

ಈ ಚಿತ್ರ ತಾಯಿ-ಮಗನ ಸುತ್ತವೇ ಸಾಗುತ್ತದೆ. ಈಗ “ಡಾಟರ್‌ ಆಫ್ ಪಾರ್ವತಮ್ಮ’ದಲ್ಲಿ ತಾಯಿ-ಮಗಳ ಬಾಂಧವ್ಯದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಶಂಕರ್‌ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ಶಶಿಧರ್‌, ವಿಜಯಲಕ್ಷ್ಮೀ ಕೃಷ್ಣೇಗೌಡ, ಸಂದೀಪ್‌, ಶ್ವೇತಾ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಿಧುನ್‌ ಮುಕುಂದನ್‌ ಸಂಗೀತ, ಅರುಳ್‌ ಅವರ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next