ಕನ್ನಡದಲ್ಲೀಗ ಐತಿಹಾಸಿಕ ಚಿತ್ರಗಳ ಕಲರವ. ಈಗಾಗಲೇ “ಗಂಡುಗಲಿ ಮದಕರಿ ನಾಯಕ’ ಕುರಿತು ಚಿತ್ರ ಸೆಟ್ಟೇರಲಿದೆ ಎಂಬ ವಿಷಯ ಎಲ್ಲರಿಗೂ ಗೊತ್ತು. ಆ ಸಾಲಿಗೆ ಈಗ “ಬಿಚ್ಚುಗತ್ತಿ’ ಎಂಬ ಚಿತ್ರವೂ ಸೇರ್ಪಡೆಯಾಗಿದೆ. ಇಂದು “ಬಿಚ್ಚುಗತ್ತಿ’ ಚಿತ್ರಕ್ಕೂ ಚಾಲನೆ ಸಿಗುತ್ತಿದೆ. ವಿಶೇಷವೆಂದರೆ, “ಬಿಚ್ಚುಗತ್ತಿ’ ಚಿತ್ರದ ಮುಹೂರ್ತಕ್ಕೆ ದರ್ಶನ್ ಆಗಮಿಸುತ್ತಿದ್ದು, ಚಿತ್ರತಂಡಕ್ಕೆ ಇನ್ನಷ್ಟು ಖುಷಿ ಹೆಚ್ಚಿಸಿದೆ. ಹರಿಪ್ರಿಯಾ “ಬಿಚ್ಚುಗತ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹರಿಪ್ರಿಯಾ ಅವರು ಐತಿಹಾಸಿಕ ಚಿತ್ರದಲ್ಲಿ ಪೂರ್ಣಪ್ರಮಾಣದ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಹರಿಪ್ರಿಯಾ ಅವರು ದರ್ಶನ್ ಅಭಿನಯದ “ಕುರುಕ್ಷೇತ್ರ’ ಚಿತ್ರದಲ್ಲೂ ನಟಿಸಿದ್ದಾರೆ. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅಂದಹಾಗೆ, ಸಾಹಿತಿ ಬಿ.ಎಲ್.ವೇಣು ಅವರ ಕಾದಂಬರಿ ಆಧರಿತ “ಬಿಚ್ಚುಗತ್ತಿ’ ಚಿತ್ರಕ್ಕೆ ರಾಜವರ್ಧನ್ ಹೀರೋ. ಈ ಚಿತ್ರವನ್ನು ಹರಿಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ.
“ವಿಕ್ಟರಿ 2′ ಬಳಿಕ ಹರಿ ಸಂತೋಷ್ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ “ಬಿಚ್ಚುಗತ್ತಿ’ ಉತ್ತರವಾಗಿದೆ. ಇನ್ನು, ಚಿತ್ರದ ಶೀರ್ಷಿಕೆಗೆ “ಚಾಪ್ಟರ್ 1 ದಳವಾಯಿ ದಂಗೆ’ ಎಂಬ ಅಡಿಬರಹವೂ ಇದೆ. ಗಂಡು ಮೆಟ್ಟಿದ ನಾಡು ಚಿತ್ರದುರ್ಗವನ್ನು ಆಳಿದ ಹದಿಮೂರು ಮಂದಿ ಪಾಳೆಗಾರರಲ್ಲಿ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕೂಡ ಒಬ್ಬರು. 1675 ರಿಂದ 1685ರ ಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣ ಇಡೀ ಸೇನೆಯನ್ನೇ ತನ್ನ ವಶದಲ್ಲಿರಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು ಸಿಂಹಾಸನದಲ್ಲಿ ಕೂರಿಸಿ, ದೊರೆಯನ್ನು, ದುರ್ಗದ ಪ್ರಜೆಗಳನ್ನು ದರ್ಪ ದೌರ್ಜನ್ಯಗಳಿಂದ ತಾನೇ ಆಡಳಿತ ನಡೆಸಲಾರಂಭಿಸಿದ್ದ. 1686ರಲ್ಲಿ ಪಟ್ಟವನ್ನೇರಿದ ದೊರೆ ಲಿಂಗಣ್ಣ ನಾಯಕ ಮುದ್ದಣ್ಣನನ್ನು ವಿರೋಧಿಸಿದ್ದರಿಂದಾಗಿ ದಳವಾಯಿ ದಂಗೆಗೆ ಕಾರಣವಾಯಿತು. ಆ ಕಾಲಘಟ್ಟದ ಕಥೆಯೇ “ಬಿಚ್ಚುಗತ್ತಿ’ ಚಿತ್ರದಲ್ಲಿ ಮೂಡಿಬರಲಿದೆ.
ಈ ಚಿತ್ರದಲ್ಲಿ ನಟಿಸುತ್ತಿರುವ ಹರಿಪ್ರಿಯಾ ತಮ್ಮ ಪಾತ್ರದ ಬಗ್ಗೆ ತುಂಬಾನೇ ಎಕ್ಸೈಟ್ ಆಗಿದ್ದಾರೆ. ಈ ಚಿತ್ರಕ್ಕೆ ಹಂಸಲೇಖ ಅವರು ಸಂಗೀತ ನೀಡುತ್ತಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಅಂದಹಾಗೆ, ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.