ಸಿದ್ದಾಪುರ: ದೇಶದ ಜನತೆಗೆ ಸುಳ್ಳು ಹೇಳುವ ಮೂಲಕ ಬಿಜೆಪಿ ಅಧಿಕಾರ ನಡೆಸುತ್ತಿದೆ. ಕರ್ನಾಟಕದಲ್ಲಿ ಶಾಸಕರನ್ನು ಖರಿದಿಸಿದ ಅನೈತಿಕ ಸರಕಾರ ಇದ್ದು, ಜಾತಿ ಮತ್ತು ಧರ್ಮದ ಆಧಾರದಲ್ಲಿ ಅಧಿಕಾರ ನಡೆಸುತ್ತಿದೆ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸುಳ್ಳು ಮತ್ತು ಸಾವಿನ ರಾಜಕಾರಣ. ಸುಳ್ಳು ಎನ್ನುವುದು ಅವರ ಮನೆ ದೇವರಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಕಾಂಗ್ರೆಸ್ ಪಕ್ಷದ ಕರಾವಳಿ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶವನ್ನು ಶುಕ್ರವಾರ ಸಿದ್ದಾಪುರ ಪೇಟೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಬ್ಬರೇ ಶಾಸಕ ಅಭ್ಯರ್ಥಿ ಇರುವುದು. ಆದರೆ ಬಿಜೆಪಿಯಲ್ಲಿ ಶಾಸಕರು ಇರುವಾಗಲೇ 8 ಮಂದಿ ನಾನು ಅಭ್ಯರ್ಥಿ ಎಂದು ತಿರುಗಾಡುತ್ತಿದ್ದಾರೆ ಎಂದರೆ ಶಾಸಕರು ಜನಾಭಿಪ್ರಾಯ ಕಳೆದುಕೊಂಡಿದ್ದಾರೆ ಎಂದರ್ಥ. ಯಡಮೊಗೆಯಲ್ಲಿ ಬಿಜೆಪಿಯವರಿಂದಲೇ ಹತ್ಯೆಗೀಡಾದ ಉದಯ ಗಾಣಿಗ ಅವರಿಗೆ ಸರಕಾರ 5 ಲಕ್ಷ ರೂ. ಕೊಡುತ್ತೇನೆ ಎಂದು ಹೇಳಿ ಇಂದಿಗೂ ನೀಡಿಲ್ಲ. ಬಿಜೆಪಿಯವರಿಗೆ ಅಧಿಕಾರಕ್ಕೆ ಬರಲು ಬಡವರ, ಹಿಂದುಳಿದವರ ಮಕ್ಕಳ ಬಲಿಯಾಗಬೇಕು. ರಾಜ್ಯಕ್ಕೆ ಗುಜರಾತ್ ಮಾದರಿ ಬೇಡ ಎಂದರು.
ಪರ್ಸಂಟೇಜ್ ಅಭಿವೃದ್ಧಿ ಕೆಲಸ
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಬೈಂದೂರು ಕ್ಷೇತ್ರದಲ್ಲಿ ಸುಳ್ಳಿನ ಸರಮಾಲೆಯ ಮೂಲಕ ಜನರಿಗೆ ದ್ರೋಹ ಬಗೆದು ಗೆದ್ದು ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ನಾನು ಗುದ್ದಲಿ ಪೂಜೆ ಮಾಡಿದ್ದನ್ನು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪುನಃ ಗುದ್ದಲಿ ಪೂಜೆ ಮಾಡಿದ್ದಾರೆ. ಅವರು ಮಾಡಿದ ಕೆಲಸಗಳು ಕೇವಲ ಪರ್ಸಂಟೇಜ್ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ ಸೊರಕೆ, ಕೆಪಿಸಿಸಿ ವಕ್ತಾರ ಸುಧೀರ ಕುಮಾರ್ ಮುರಳಿ, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ದಿನೇಶ ಹೆಗ್ಡೆ ಮೊಳಹಳ್ಳಿ, ಹರಿಪ್ರಸಾದ್ ಬಿದ್ಕಲ್‌ಕಟ್ಟೆ, ವಿಕಾಸ ಹೆಗ್ಡೆ ಬಸ್ರೂರು, ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ ಬೈಂದೂರು, ರಘುರಾಮ ಶೆಟ್ಟಿ, ಎಸ್. ಸಂಜೀವ ಶೆಟ್ಟಿ ಸಂಪಿಗೇಡಿ, ವಂಡವಳ್ಳಿ ಜಯರಾಮ ಶೆಟ್ಟಿ, ದೇವಾನಂದ ಶೆಟ್ಟಿ ಹನ್ನಾಡು, ವಾಸುದೇವ ಯಡಿಯಾಳ, ಎಚ್. ಸುಧಾಕರ ಶೆಟ್ಟಿ ಹರ್ಕೆಬಾಳು, ನಾಗಪ್ಪ ಕೊಠಾರಿ, ಜಯರಾಮ ನಾಯ್ಕ, ಸತೀಶಕುಮಾರ ಶೆಟ್ಟಿ ಕಡ್ರಿ, ಶಂಕರನಾರಾಯಣ ಯಡಿಯಾಳ ಹಳ್ಳಿಹೊಳೆ, ಶ್ರವಣ್ ಶೆಟ್ಟಿ ಸಂಪಿಗೇಡಿ, ಶರತ್ ಕುಮಾರ ಶೆಟ್ಟಿ, ಮಾಧವ ಪೂಜಾರಿ, ಕಿರಣ್ ಹೆಗ್ಡೆ ಅಂಪಾರು, ಸದಾಶಿವ ಶೆಟ್ಟಿ ಶಂಕರನಾರಾಯಣ, ಜಿಲ್ಲಾ ಮಟ್ಟದ ಅನೇಕ ಕಾಂಗ್ರೆಸ್ ಮುಖಂಡರರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
10 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು. ಎಂಎಲ್‌ಸಿ ಮಂಜುನಾಥ ಭಂಡಾರಿ ಪ್ರಸ್ತಾವನೆಗೈದರು. ಪ್ರಸನ್ನಕುಮಾರ ಶೆಟ್ಟಿ ಕೆರಾಡಿ ಕಾರ್ಯಕ್ರಮ ನಿರೂಪಿಸಿದರು. ವಂಡ್ಸೆ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ ವಂದಿಸಿದರು.