Advertisement

ಸಮಾಜ ಮುಖ್ಯ ಹೊರತು ವ್ಯಕ್ತಿ-ಪಕ್ಷವಲ್ಲ

11:43 AM Nov 04, 2019 | |

ಹರಿಹರ: ಶ್ರೀಗಳಿಗಾಲಿ, ನಮಗಾಗಲಿ ಸಮಾಜ ಮುಖ್ಯವೇ ಹೊರತು ರಾಜಕೀಯ ಪಕ್ಷವಲ್ಲ ಎಂದು ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಫೆ. 8, 9ರಂದು ನಡೆಯುವ 2ನೇ ವಾಲ್ಮೀಕಿ ಜಾತ್ರಾ ಮಹೋತ್ಸವ, ಮಠದ 22ನೇ ವಾರ್ಷಿಕೋತ್ಸವ, ಲಿಂ|
ಪುಣ್ಯಾನಂದಪುರಿ ಶ್ರೀಗಳ 12ನೇ ಪುಣ್ಯಾರಾಧನೆ, ಪ್ರಸನ್ನಾನಂದ ಶ್ರೀಗಳ 12ನೇ ವರ್ಷದ ಪಟ್ಟಾಧಿಕಾರ ಕಾರ್ಯಕ್ರಮದ ನಿಮಿತ್ತ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಬಾರಿ ಕಾಂಗ್ರೆಸ್‌ ಸರ್ಕಾರ ಇದ್ದುದ್ದರಿಂದ ಆಗಿನ ಸಚಿವರು ಹಾಗೂ ಸಮಾಜದ ಮುಖಂಡರಾದ ಸತೀಶ್‌ ಜಾರಕಿಹೊಳಿ ಉತ್ಸವ ಸಮಿತಿ ಅಧ್ಯಕ್ಷರಾದರು. ಈ ಬಾರಿ ಬಿಜೆಪಿ ಸರ್ಕಾರವಿದ್ದು ನನ್ನನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಆಯಾ ಸರಕಾರದಿಂದ ಅಗತ್ಯ ಸಹಕಾರ ಪಡೆಯುವುದು ಇದರ ಉದ್ದೇಶವಾಗಿದೆ.

ಇಲ್ಲಿ ಸಮಾಜ ಮುಖ್ಯವೇ ಹೊರತು ರಾಜಕೀಯ ಪಕ್ಷವಲ್ಲ ಎಂದರು. ಕಳೆದ ವರ್ಷ ನಡೆದ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಸಮಾಜ ಸಂಘಟನೆಯಲ್ಲಿ ಸಂಚಲನ ಮೂಡಿಸಿತ್ತು. ಶ್ರೀಗಳು ರಾಜ್ಯಾದ್ಯಂತ ಪಾದರಸದಂತೆ ಸಂಚರಿಸಿದ ಫಲವಾಗಿ ಎಲ್ಲೆಡೆಯಿಂದ ಜನ ಹಾಗೂ ದೇಣಿಗೆ ಮಠಕ್ಕೆ ಹರಿದು ಬಂತು. ನಾನು ದೇಣಿಗೆ ನೀಡಲು ಮುಂದಾದರೂ ಶ್ರೀಗಳು ಈಗ ಬೇಡ, ಬೇಡ ಎಂದರು.

ಇದು ಸಮಾಜದ ಜನರಿಂದ ಹರಿದು ಬಂದ ದೇಣಿಗೆ ಪ್ರಮಾಣವನ್ನು ಸೂಚಿಸುತ್ತದೆ. ಆಗ ಶ್ರೀಗಳ ಜೋಳಿಗೆ ದೇಣಿಗೆಯಿಂದ ತುಂಬಿತ್ತು ಎಂದರು. ಸಚಿವ ಸ್ಥಾನದ ಒತ್ತಡದ ನಡುವೆಯೂ ರಾಜ್ಯಾದ್ಯಂತ ಸಂಚರಿಸಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತೇನೆ. ಈ ಉತ್ಸವವು ವಾಲ್ಮೀಕಿ ಸಮಾಜದ ಸಂಘಟನೆಯ ದಿಕ್ಸೂಚಿಯಾಗಿ ಬೆಳೆಯಲಿದ್ದು ನಿರಂತರವಾಗಿ ಆಚರಿಸಲಾಗುವುದು.

Advertisement

ಈ ಮಠ ಹಾಗೂ ಸಮಾಜ ಅಭಿವೃದ್ಧಿಯ ಹಾದಿಯಲ್ಲಿದ್ದು ಎಲ್ಲರ ಸಹಕಾರ ಬೇಕು. ಕುಟಂಬ ಸಮೇತ ಈ ಮಠದ ದರ್ಶನಕ್ಕೆ ಬಂದು ಇದನ್ನು ತೀರ್ಥ ಕ್ಷೇತ್ರವಾಗಿ ರೂಪಿಸುವ ಜವಾಬ್ದಾರಿ ಸಮಾಜ ಬಾಂಧವರ ಮೇಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪ್ರಸನ್ನಾನಂದ ಶ್ರೀಗಳು ಮಾತನಾಡಿ, ಈಗಾಗಲೇ ಅನೇಕ ಸಮಾಜದವರು ಅವರವರ ಸಾಂಸ್ಕೃತಿಕ ನಾಯಕರ ಹೆಸರಲ್ಲಿ ಸಂಘಟಿತರಾಗುತ್ತಿದ್ದಾರೆ. ದೇಶದಲ್ಲಿ ವಾಲ್ಮೀಕಿ ಸಮಾಜವು ವಿವಿಧ ಹೆಸರುಗಳಲ್ಲಿ ಕರೆಯಲ್ಪಡುತ್ತಿದೆ. ಇವನ್ನೆಲ್ಲಾ ಸಮೀಕರಿಸಿ ಒಂದು ವೇದಿಕೆಗೆ ತರುವ ಸವಾಲು ನಮ್ಮ ಮುಂದಿದೆ. ಆ ದಿಸೆಯಲ್ಲಿ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ ಎಂದರು.

1998ರ ಫೆ.8ರಂದು ಈ ಮಠ ಸ್ಥಾಪನೆಯಾಯಿತು. ಪ್ರಥಮ ಪೀಠಾಧಿ ಪತಿ ಪುಣ್ಯಾನಂದಪುರಿ ಶ್ರೀಗಳಿಗೆ ರಾಜ್ಯಾದ್ಯಂತ 8 ವರ್ಷಗಳ ಕಾಲ ನಿರಂತರವಾಗಿ ಸಂಚರಿಸಿ ಸಮಾಜ ಸಂಘಟನೆ ಮಾಡಿದ ಕೀರ್ತಿ ಸಲ್ಲುತ್ತದೆ ಎಂದು ಸ್ಮರಿಸಿದರು.

ತಾವು ಪೀಠಾ ಧಿಪತಿಯಾದ ನಂತರ ಸಮಾಜಕ್ಕೆ ಸಾಮಾಜಿಕ, ರಾಜಕೀಯ ಶಕ್ತಿ ತುಂಬುವ, ಮೀಸಲಾತಿ ಹೋರಾಟ, ಮಠದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಹಿಂದುಳಿದ ವಾಲ್ಮೀಕಿ ಸಮಾಜವನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.

ಸಮಾಜದ ಮುಖಂಡ ಟಿ.ಈಶ್ವರ್‌ ಮಾತನಾಡಿ, ಜಾತ್ರಾ ಮಹೋತ್ಸವಕ್ಕಾಗಿ ಒಂದೂವರೆ ಕೋಟಿ ರೂ. ಗಳ ತೇರನ್ನು ಯಲ್ಲಾಪುರದಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಇದು ದೇಶದಲ್ಲೇ ವಿಶಿಷ್ಠ ಎನಿಸಲಿದ್ದು ಇದರಲ್ಲಿ ಶ್ರೀ ವಾಲ್ಮೀಕಿ ಹಾಗೂ ಶ್ರೀರಾಮನ ಚಿತ್ರಗಳಿವೆ. ಕಳೆದ ವರ್ಷದ ಉತ್ಸವದ ಆಯವ್ಯಯವನ್ನು ಶ್ರೀಗಳು ಜಿಲ್ಲಾವಾರು ಸಂಚರಿಸಿ ಸಮಾಜದವರ ಗಮನಕ್ಕೆ ತಂದಿದ್ದಾರೆ ಎಂದರು.

ಸಭೆಯಲ್ಲಿ ವೀರೇಂದ್ರಸಿಂಹ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಡಾ| ಬಿ.ರಂಗಯ್ಯ, ಡಾ| ಪಾಟೀಲ್‌, ಪ್ರೊ| ಪೊನ್ನದ್‌, ಶಾಂತಲಾ ರಾಜಣ್ಣ, ಮಠದ ಆಡಳಿತಾ ಧಿಕಾರಿ ಟಿ.ಓಬಳಪ್ಪ, ಕೆ.ಬಿ. ಮಂಜಣ್ಣ, ಮಹಾಲಕ್ಷ್ಮೀ, ವಿಜಯಶ್ರೀ, ಆನಂದಪ್ಪ, ರಂಗಪ್ಪ ಕೆ., ಕೊಕ್ಕನೂರು ಸೋಮಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next