ಹರಿಹರ: ಕೋವಿಡ್ ರೋಗಾಣು ಹರಡುವಿಕೆ ನಿಯಂತ್ರಿಸಲು ಕಳೆದ 15 ದಿನಗಳ ಲಾಕ್‌ಡೌನ್ ನಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜೀವನದಿ ತುಂಗಭದ್ರೆಯೂ ಸಹ ಬಹುತೇಕ ಮಾಲಿನ್ಯ ಮುಕ್ತವಾಗಿ ಶುಭ್ರವಾಗಿ ಹರಿಯುತ್ತಿದೆ. ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿ ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ರಾಯಚೂರು ನಂತರ ಆಂಧ್ರದ ಮಂತ್ರಾಲಯ, ಕರ್ನೂಲಲ್ಲಿ ಕೃಷ್ಣ ನದಿ ಸೇರಿ ತೆಲಂಗಾಣ ಪ್ರವೇಶಿಸುವ ತುಂಗಭದ್ರೆ ಅಂದಾಜು 700 ಕಿ.ಮೀ. ಸಾಗಿ ಬಂಗಾಳ ಕೊಲ್ಲಿ ಸೇರುತ್ತದೆ.
ರಾಜ್ಯದ ಆರು ಜಿಲ್ಲೆಗಳ ನೂರಾರು ಕಾರ್ಖಾನೆ, ಉದ್ಯಮಗಳ ಲಕ್ಷಾಂತರ ಲೀ. ಕಲುಷಿತ ನೀರು ದಿನವಿಡೀ ಈ ನದಿಗೆ ಸೇರುತ್ತಿತ್ತು. ತಾಲೂಕಿನ ಮಟ್ಟಿಗೆ ಹೇಳುವುದಾದರೆ ಕಾರ್ಖಾನೆಗಳ ಕಲುಷಿತ ನೀರು ನಿತ್ಯ ಈ ನದಿಯ ಒಡಲು ತುಂಬುತ್ತಿತ್ತು. ಆದರೆ ಲಾಕ್‌ಡೌನ್‌ನಿಂದ ಎಲ್ಲಾ ಕಾರ್ಖಾನೆಗಳು ಮಾ.25ರಿಂದ ಬಂದ್ ಆಗಿದ್ದು, ರಾಸಾಯನಿಕ ಯುಕ್ತ, ಕಲುಷಿತ ನೀರು ನದಿಗೆ ಸೇರುವುದು ನಿಂತಿದೆ. ಪರಿಣಾಮ ನಗರದಲ್ಲಿ ಹರಿಯುತ್ತಿರುವ ತುಂಗಭದ್ರೆ ದಿನೇ ದಿನೇ ಶುದ್ಧಗೊಳ್ಳುತ್ತಿದೆ.
ಕಲುಷಿತ ನೀರು ಸೇರಿ ಸದಾ ಕೊಚ್ಚೆಯಂತೆ ಕಾಣುತ್ತಿದ್ದ ನದಿಯ ಸ್ಥಳದಲ್ಲೀಗ ನೀರನ್ನು ಬೊಗಸೆಯಲ್ಲಿ ಹಿಡಿದು ನೋಡಿದರೆ ಅದರ ಶುಭ್ರತೆ ಕಂಡು ಆನಂದವಾಗುತ್ತದೆ. ನದಿ ದಡದಲ್ಲಿ ನಿಂತರೆ 2-3 ಅಡಿಗಳ ಆಳದವರೆಗೂ ನೀರಡಿಯ ನೆಲಹಾಸು, ಅಲ್ಲಿ ಆಡವಾಡುತ್ತಿರುವ ಚಿಕ್ಕ ಚಿಕ್ಕ ಮೀನುಗಳ ಲವಲವಿಕೆ ಕಾಣಿಸುವುದು ಅಪ್ಯಾಯಮಾನವಾಗಿದೆ. ಕಾರ್ಖಾನೆಗಳ ಹತ್ತಾರು ಚಿಮಣಿಗಳಿಂದ ಹೊರಚಿಮ್ಮುತ್ತಿದ್ದ ವಿಷಕಾರಿ, ಗೊಮ್ಮೆನ್ನುವ ಅನಿಲಕ್ಕೂ ಈಗ ಬ್ರೇಕ್ ಬಿದ್ದಿದ್ದು, ನೂರಾರು ಕಿ.ಮೀ ವ್ಯಾಪ್ತಿಯ ನಾಗರಿಕರು ದುರ್ವಾಸನೆಯಿಲ್ಲದ ಗಾಳಿಯಲ್ಲಿ ಮೂಗರಳಿಸಿ ಉಸಿರಾಡುವಂತಾಗಿದೆ. ಜೊತೆಗೆ ಹಗಲು-ರಾತ್ರಿ ಎನ್ನದೆ ಹೊರಹೊಮ್ಮುತ್ತಿದ್ದ ಕಿವಿಗಡಚಿಕ್ಕುವ, ಕೆಲವೊಮ್ಮೆ ಬೆಚ್ಚಿಬೀಳಿಸುತ್ತಿದ್ದ ಕರ್ಕಶ ಶಬ್ದವೂ ಇಲ್ಲದೆ ಸುತ್ತಮುತ್ತಲ ವಸತಿ ಪ್ರದೇಶಗಳ ಜನರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ. ಒಟ್ಟಾರೆ ಲಾಕ್ ಡೌನ್‌ನ ಆರ್ಥಿಕ ಪರಿಣಾಮಗಳೇನೆ ಇರಲಿ, ಪರಿಸರದ ದೃಷ್ಟಿಯಿಂದ ಮಾತ್ರ ಇದೊಂದು ಅತ್ಯುತ್ತಮ, ಅದ್ಬುತ ಸನ್ನಿವೇಶವಾಗಿದೆ ಎಂದು ಪರಿಸರ ಪ್ರೇಮಿಗಳು ಹರ್ಷಪಡುತ್ತಿರುವುದು ಸುಳ್ಳಲ್ಲ.
ಕಾರ್ಖಾನೆಗಳು ಶುರು ಇದ್ದಾಗ ಈ ಭಾಗದ ಜನ ದುರ್ವಾಸನೆಯಿಂದ ಮೂಗು ಮುಚ್ಚಿಕೊಳ್ಳಬೇಕಿತ್ತು. ಈಗ ಸಹಜವಾದ ಗಾಳಿ ಸೇವನೆ ಮಾಡುತ್ತಿದ್ದೇವೆ. ಶಬ್ದ ಮಾಲಿನ್ಯವೂ ಇಲ್ಲದ್ದರಿಂದ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡುತ್ತೇವೆ.
ಅಬ್ದುಲ್ ರಹೀಂ,
ಕೊಡಿಯಾಲ ಗ್ರಾಮ ವಾಸಿ.
ಐವತ್ತು ವರ್ಷಗಳ ಹಿಂದೆ ಈ ನದಿ ನೀರು ಹೀಗೆಯ ಶುಭ್ರವಾಗಿತ್ತು. ಈಗ ನದಿ ಯಲ್ಲಿನ ಶುಭ್ರ ಹಾಗೂ ತಿಳಿ ನೀರನ್ನು ನೋಡಿ ನನ್ನ ಬಾಲ್ಯದ ದಿನಗಳ ನೆನಪಾಗುತ್ತಿದೆ. ಈ ಪರಿಸರದಲ್ಲಿ ಹಕ್ಕಿಗಳ ಕಲರವವೂ ಹೆಚ್ಚಾಗಿದೆ.
ಕೊಟ್ರೇಶಪ್ಪ,
ಕುಮಾರಪಟ್ಟಣಂ ವಾಸಿ