Advertisement

ವರುಣನ ಮುನಿಸು; ಬತ್ತಿದ ತುಂಗಭದ್ರೆ

10:01 AM Jun 12, 2019 | Team Udayavani |

ಹರಿಹರ: ಮಳೆ ಕೊರತೆಯಿಂದಾಗಿ ಜಿಲ್ಲೆಯ ಜನರ ಜೀವನದಿ ತುಂಗಭದ್ರೆ ಒಡಲು ಖಾಲಿಯಾಗುತ್ತಿದ್ದು, ಈ ಸಲ ಜೂನ್‌ ತಿಂಗಳಲ್ಲೂ ಹರಿಹರ, ದಾವಣಗೆರೆ ಸೇರಿದಂತೆ ನಡು ಕರ್ನಾಟಕದ ಜನರು ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.

Advertisement

ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ-ದಿನಕ್ಕೆ ಇಳಿಮುಖವಾಗುತ್ತಿದ್ದು, ನಗರಕ್ಕೆ ನೀರು ಸರಬರಾಜು ಮಾಡುವ ಕವಲೆತ್ತು ಗ್ರಾಮದ ಜಾಕ್‌ವೆಲ್ ಹಾಗೂ ದಾವಣಗೆರೆ ನಗರಕ್ಕೆ ನೀರು ಪೂರೈಸುವ ರಾಜನಹಳ್ಳಿ ಜಾಕ್‌ವೆಲ್ಗೆ ನೀರು ಸಿಗದಂತಾಗಿದೆ.

ಹೊಲ-ಗದ್ದೆಗಳ ಬಸಿ ನೀರು ಹಳ್ಳ, ಕೊಳ್ಳಗಳ ಮೂಲಕ ಹರಿದು ನೀರಿನ ತೆಳುವಾದ ಹರಿವು ಇದ್ದಿದ್ದರಿಂದ ಕಳೆದ ಒಂದು ತಿಂಗಳಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಮಂಗಳವಾರ ಬೆಳಿಗ್ಗೆ 10ರಿಂದ ಕವಲೆತ್ತು ಜಾಕ್‌ವೆಲ್ಗೆ, ಸಂಜೆ 4ರಿಂದ ರಾಜನಹಳ್ಳಿ ಜಾಕ್‌ವೆಲ್ಗೆ ನೀರು ಹರಿಯುವುದು ಸಂಪೂರ್ಣ ಬಂದ್‌ ಆಗಿದ್ದರಿಂದ ನೀರನ್ನು ಪಂಪ್‌ ಮಾಡುವ ಮೋಟಾರುಗಳನ್ನು ಸ್ಥಗಿತಗೊಳಿಸಲಾಗಿದೆ.

ದಾವಣಗೆರೆಗೆ ಕುಂದುವಾಡ, ಟಿವಿ ಸ್ಟೇಷನ್‌ ಕೆರೆಗಳಿಂದ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಹರಿಹರಕ್ಕೆ ನದಿ ಮೂಲ ಮಾತ್ರ ಇರುವುದರಿಂದ ಇಡಿ ನಗರದ ಜನತೆ ಈಗ ಕೊಳವೆಬಾವಿ ಸಪ್ಪೆ ನೀರಿನ್ನೆ ಆಶ್ರಯಿಸಬೇಕಿದೆ. ಮಂಗಳವಾರ ಓವರ್‌ಹೆಡ್‌ ಟ್ಯಾಂಕ್‌ಗಳಲ್ಲಿದ್ದ ನೀರನ್ನು ನಗರದ ಕೆಲ ಬಡಾವಣೆಗಳಿಗೆ ಸರಬರಾಜು ಮಾಡಲಾಗಿದ್ದು, ಬುಧವಾರದಿಂದ ನೀರಿನ ಬವಣೆ ತೀವ್ರಗೊಳ್ಳಲಿದೆ.

ಟ್ಯಾಂಕರ್‌ ಸೇವೆ: ಸದ್ಯಕ್ಕೆ ನಗರದಲ್ಲಿ ಹ್ಯಾಂಡ್‌ಪಂಪ್‌, ಕಿರು ನೀರು ಸರಬರಾಜು ಸೇರಿ ಒಟ್ಟು 300 ಕೊಳವೆಬಾವಿಗಳಿವೆ. ನಗರದ ವಿವಿಧ ವಾರ್ಡ್‌ ಗಳಲ್ಲಿ 9 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಹಲವೆಡೆ ಈಗಾಗಲೇ ಐದು ಟ್ಯಾಂಕರ್‌ಗಳ ಮೂಲಕ ಕೊಳವೆಬಾವಿ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಇನ್ನೂ ಐದು ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಗರದ ಜೈಭೀಮ ನಗರ, ಕಾಳಿದಾಸ ನಗರ, ಬೆಂಕಿ ನಗರ, ವಿಜಯ ನಗರ, ಕೆ.ಆರ್‌.ನಗರ, ಕೇಶವ ನಗರ, ಆಶ್ರಯ ಕಾಲೋನಿ, ಟಿಪ್ಪು ನಗರ, ಹರ್ಲಾಪುರ ಭಾಗದ ಕೆಲವು ಪ್ರದೇಶಗಳಲ್ಲಿ ಕೊಳವೆಬಾವಿ ನೀರಿನ ಲಭ್ಯತೆ ಇಲ್ಲದ್ದರಿಂದ ಈ ಭಾಗದಲ್ಲಿ ಟ್ಯಾಂಕರ್‌ ಮೂಲಕ ನೀರು ಹರಿಸಲು ನಗರಸಭೆ ಸಿದ್ಧತೆ ನಡೆಸಿದೆ.

ಕಾರಣವೇನು?: ಮಳೆಗಾಲದಲ್ಲೂ ನದಿ ಇಳಿಮುಖವಾಗಲು ಈ ಸಲ ಮಳೆ ಕೊರತೆಯಾಗಿರುವುದು ನೈಸರ್ಗಿಕ ಕಾರಣವಾಗಿದೆ. ತಾಲ್ಲೂಕಿನಲ್ಲಿ ವಾಡಿಕೆಯಂತೆ ಏಪ್ರಿಲ್, ಮೇ, ಜೂನ್‌ ತಿಂಗಳಲ್ಲಿ ಸರಾಸರಿ 187.6 ಮಿ.ಮೀ. ಮಳೆಯಾಗಬೇಕು. ಆದರೆ ಇದುವರೆಗೆ ಕೇವಲ 42.68 ಮಿ.ಮೀ. ಮಾತ್ರ ಮಳೆಯಾಗಿದೆ. ಇನ್ನು ನದಿ ದಡದ ರೈತರು ಪಂಪ್‌ಗ್ಳ ಮೂಲಕ ತಮ್ಮ ಜಮೀನುಗಳಿಗೆ ನೀರೆತ್ತಲಾರಂಭಿಸಿದ್ದಾರೆ. ಇದಲ್ಲದೆ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿ ವೃದ್ಧಿ, ನದಿ ನೀರು ಆಶ್ರಿತ ಕೈಗಾರಿಕೆಗಳ ಹೆಚ್ಚಳ ಸೇರಿದಂತೆ ಮುಂತಾದ ಕಾರಣಗಳಿಂದ ನದಿ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಮುಖವಾಗಿದೆ.

ಡ್ಯಾಂ ನೀರು ಬಿಡಬೇಕು: ದಿನೇ-ದಿನೇ ಮುಂಗಾರು ವಿಳಂಬವಾಗುತ್ತಿದ್ದು, ಸದ್ಯಕ್ಕೆ ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಅದೃಷ್ಟವಶಾತ್‌ ಭದ್ರಾ ಜಲಾಶಯದಲ್ಲಿ ಇನ್ನೂ ನೀರಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನೀರು ಹರಿಸಲು ಮುಂದಾಗಬೇಕಿದೆ.

ಡ್ಯಾಂ ನೀರು ಬರುತ್ತಿದೆ
ಭದ್ರಾ ಜಲಾಶಯದಿಂದ ನೀರು ಬಿಡಲಾಗಿದ್ದು, ಬುಧವಾರ ಸಂಜೆಯೊಳಗೆ ನೀರು ಹರಿಹರ ತಲುಪಲಿದೆ. ಕಾಡಾ ಸಮಿತಿಯವರಿಗೆ ತಾವು ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಮಾಡಿಕೊಂಡ ಮನವಿ ಮೇರೆಗೆ ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ. ಬುಧವಾರ ಸಂಜೆ ಅಥವಾ ರಾತ್ರಿಯಿಂದ ಎರಡೂ ಜಾಕ್‌ವೆಲ್ಗಳು ಕಾರ್ಯರಂಭ ಮಾಡಲಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದು.
• ಎಸ್‌.ರಾಮಪ್ಪ, ಶಾಸಕ

ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ನಗರಕ್ಕೆ ಮಂಗಳವಾರದಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಕೊಳವೆಬಾವಿ ನೀರು ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. •ಎಸ್‌.ಎಸ್‌.ಬಿರಾದರ್‌,
ಎಇಇ, ನಗರಸಭೆ, ಹರಿಹರ

Advertisement

Udayavani is now on Telegram. Click here to join our channel and stay updated with the latest news.

Next