ಹರಿಹರ: ಮಾಸ್ಕ್ ದಿನಾಚರಣೆ ನಿಮಿತ್ತ ಗುರುವಾರ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಮಾಸ್ಕ್ ಧರಿಸದೆ ವ್ಯವಹಾರದಲ್ಲಿ ತೊಡಗಿದ್ದ ಹಲವಾರು ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಚುರುಕು ಮುಟ್ಟಿಸಿದರು.
ಅಂಗಡಿ ಮಾಲೀಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದಲ್ಲದೆ ಬರುವ ಎಲ್ಲಾ ಗ್ರಾಹಕರಿಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಆದರೆ ನೀವೇ ಮಾಸ್ಕ್ ಹಾಕದಿದ್ದಾಗ ಬಂದಂತಹ ಗ್ರಾಹಕರಲ್ಲಿ ನೀವು ಏನು ಜಾಗೃತಿ ಮೂಡಿಸಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ತಲಾ 200 ರೂ. ದಂಡ ಕಟ್ಟಿಸಿಕೊಂಡು ರಸೀದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಾಸ್ಕ್ ಇಲ್ಲದೆ ಬಂದು ಅಂಗಡಿಗಳಲ್ಲಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು, ರಸ್ತೆಗಳಲ್ಲಿ ಓಡಾಡುತ್ತಿದ್ದ ಜನರಿಗೆ ತಡೆದು ಮಾಸ್ಕ್ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದರು. ನಿಮಗೆ, ನಿಮ್ಮ ಕುಟುಂಬದವರಿಗೆ ಮನೆಯಲ್ಲೆ ಮಾಸ್ಕ್ ತಯಾರಿಸಿಕೊಳ್ಳಿ ಇಲ್ಲವೇ ಹೊರಗೆ ಖರೀದಿಸಿ, ಇನ್ನೊಮ್ಮೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕೆಂದು ತಾಕೀತು ಮಾಡಿದರು. ನಂತರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಶಿಲಿಸಿದ ಜಿಲ್ಲಾಧಿಕಾರಿ, “ಡಿ’ ಗ್ರೂಪ್ ನೌಕರರಿಗೆ ಮಾಸ್ಕ್ ಹಾಗು ಚ್ಯವನ್‌ಪ್ರಾಶ್ ವಿತರಿಸಿದರು. ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ನಗರಸಭೆ ಅವರಣದಲ್ಲಿ ಶ್ರೀನಿವಾಸ್ ಸ್ನೇಹ ಬಳಗದಿಂದ ಪೌರಕಾರ್ಮಿಕರಿಗೆ ಚ್ಯವನ್‌ಪ್ರಾಶ್ ವಿತರಿಸಿದರು. ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಇ ಬಿರಾದಾರ್, ನಗರಸಭಾ ಸದಸ್ಯರಾದ ನೀತಾ ಮೆಹರ್ವಾಡೆ, ಆಶ್ವಿನಿ ಕೃಷ್ಣ ಇದ್ದರು.