ಹರಿಹರ: ತುಂಗಭದ್ರಾ ನದಿಯಲ್ಲಿನ ನೀರಿನ ಹರಿವು ಕ್ಷೀಣಿಸಿದ್ದರಿಂದ ಮಂಗಳವಾರ ಜಾಕ್‌ವೆಲ್ಗೆ ನೀರು ಸಿಗದೆ ಹರಿಹರ ಮತ್ತು ದಾವಣಗೆರೆಗೆ ನೀರೆತ್ತುವ ಕಾರ್ಯ ಸ್ಥಗಿತಗೊಳಿಸಿದ್ದ ಪಂಪ್‌ಸೆಟ್‌ಗಳು ಅಲ್ಪಸ್ವಲ್ಪ ನೀರು ಬಂದಿದ್ದರಿಂದ ಬುಧವಾರ ಮತ್ತೆ ಕಾರ್ಯಾರಂಭಿಸಿವೆ.
ಕವಲೆತ್ತು ಗ್ರಾಮದ ಮೇಲ್ಭಾಗದಲ್ಲಿ ಇತ್ತೀಚಿಗೆ ನಿರ್ಮಿಸಿರುವ ಹೊಸ ಸೇತುವೆ ಕಾಮಗಾರಿ ನಡೆಯುವಾಗ ಸಾಕಷ್ಟು ಅವಶೇಷಗಳು ಅಡ್ಡಲಾಗಿ ಬಿದ್ದಿದ್ದರಿಂದ ಕೆಳಕ್ಕೆ ಹರಿಯದೆ ನಿಂತಿದ್ದ ನೀರನ್ನು ಬುಧವಾರ ನಗರಸಭೆ ಜೆಸಿಬಿಯಿಂದ ದಾರಿ ಮಾಡಿ ಕೆಳಕ್ಕೆ ಹರಿಸಲಾಯಿತು.
ಇದಲ್ಲದೆ ಅಲ್ಲಲ್ಲಿ ಗುಂಡಿಗಳಲ್ಲಿ ನಿಂತಿದ್ದ ನೀರನ್ನು ಕಾಲುವೆ ತೋಡಿ ಕೆಳಕ್ಕೆ ಹರಿಯುವಂತೆ ಮಾಡಿದ್ದರಿಂದ ನಗರಕ್ಕೆ ನೀರು ಸರಬರಾಜು ಮಾಡುವ ಕವಲೆತ್ತು ಗ್ರಾಮದ ಜಾಕ್‌ವೆಲ್ಗೆ ಬುಧವಾರ ಬೆಳಿಗ್ಗೆಯಿಂದ ನೀರು ದೊರೆಯುತ್ತಿದೆ. ಈಗ ಬರುವ ನೀರು ಇನ್ನೂ 3 ದಿನ ನಗರಕ್ಕೆ ಪೂರೈಸಲು ಸಾಕಾಗುತ್ತದೆ. ಅಷ್ಟರಲ್ಲಿ ಡ್ಯಾಂ ನೀರು ಬರುವ ಸಾಧ್ಯತೆಯಿದೆ. ನಗರಕ್ಕೆ ಕುಡಿಯುವ ನೀರು ಪೂರೈಸಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದು, ಯಾರೂ ಆತಂಕಪಡಬೇಕಾಗಿಲ್ಲ ಎಂದು ನಗರಸಭೆ ಎಇಇ ಬಿರಾದಾರ್ ತಿಳಿಸಿದ್ದಾರೆ.
ಇದೆ ರೀತಿ ದಾವಣಗೆರೆ ನಗರಕ್ಕೆ ನೀರು ಪೂರೈಸುವ ರಾಜನಹಳ್ಳಿ ಜಾಕ್‌ವೆಲ್ ಸಮೀಪದ ಗುಂಡಿಗಳಿಂದ ಪ್ರತ್ಯೇಕವಾಗಿ ಮೋಟರ್ ಇಟ್ಟು ಜಾಕ್‌ವೆಲ್ನ ಗುಂಡಿಗೆ ನೀರು ಪಂಪ್ ಮಾಡಲಾಗುತ್ತಿದ್ದು, ಅಲ್ಲೂ ಅಲ್ಪಸ್ವಲ್ಪ ನೀರು ಸಿಗುತ್ತಿದೆ. ಇಲ್ಲಿ ಹೇರಳವಾಗಿ ಮರಳು ಇರುವುದರಿಂದ ವರ್ತಿ ನೀರು ಸಹ ಬರುತ್ತಿದ್ದು, ಮಧ್ಯೆ ಮಧ್ಯೆ ಬಿಡುವು ಮಾಡಿ ಗುಂಡಿ ಭರ್ತಿಯಾದ ಕೂಡಲೇ ನೀರೆತ್ತಲಾಗುತ್ತಿದೆ.
ಡ್ಯಾಂ ನೀರು ಇನ್ನೂ ಬಂದಿಲ್ಲ: ಜಲಾಶಯದಿಂದ ಈಗಾಗಲೇ ನೀರು ಬಿಡಲಾಗಿದ್ದು, ಬುಧವಾರ ಸಂಜೆ ಹರಿಹರ ತಲುಪುತ್ತದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದ್ದರಾದರೂ ಇನ್ನೂ ನೀರು ಬಂದಿಲ್ಲ. ನದಿ ಪಾತ್ರದುದ್ದಕ್ಕೂ ಬೃಹತ್ ಗುಂಡಿಗಳಿದ್ದು, ಅವೆಲ್ಲಾ ತುಂಬಿಕೊಳ್ಳಬೇಕಿರುವುದು ಮಾತ್ರವಲ್ಲದೇ ಇದುವರೆಗೂ ಸರಿಯಾಗಿ ಮಳೆಯಾಗದ ಕಾರಣ ಸಾವಿರಾರು ರೈತರು ಪಂಪ್‌ಸೆಟ್‌ಗಳ ಮೂಲಕ ನೀರೆತ್ತುವುದರಿಂದ ನೀರು ಮುಂದೆ ಬರುವುದು ಸುಲಭವಲ್ಲ ಎನ್ನಲಾಗುತ್ತಿದೆ.
ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ನದಿಗೆ ಮಿತ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಅದು ಮೇಲ್ಭಾಗದಲ್ಲೇ ಬಳಕೆಯಾಗುತ್ತಿದ್ದು, ಹರಿಹರದವರೆಗೆ ಬರುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಗುರುವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇಲಾಖೆ ಕಾರ್ಯದರ್ಶಿಗಳನ್ನು ಭೇಟಿಯಾಗಿ ಹೆಚ್ಚಿನ ಪ್ರಮಾಣದ ನೀರು ಹರಿಸಲು ಮನವಿ ಮಾಡಲಾಗುವುದು.
•
ಎಸ್.ರಾಮಪ್ಪ, ಶಾಸಕ
ನದಿಯಲ್ಲಿ ಸಾಕಷ್ಟು ನೀರಿಲ್ಲದ ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು. ನೀರನ್ನು ಹಿತಮಿತವಾಗಿ ಬಳಸಬೇಕು.
•
ಬಿರಾದಾರ್,
ಎಇಇ, ನಗರಸಭೆ