ಹರಿಹರ: ಪ್ರಸಕ್ತ ಸ್ಥಳೀಯ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಲಿದ್ದು, ಕನಿಷ್ಟ 25 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಮತ್ತು ಸ್ಪರ್ಧಾಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಭ್ರಷ್ಟ ರಹಿತ, ಪಾರದರ್ಶಕ ಆಡಳಿತದ ಹೆಸರಿನಲ್ಲಿ ಮತಯಾಚಿಸಿ ಬಹುಮತ ಪಡೆಯಲಿದೆ ಎಂದರು.
ದೇಶಕ್ಕೆ ಗಂಡಾಂತರ ತಂದೊಡ್ಡಿರುವ ಕೋಮುವಾದಿ ಹಿಮ್ಮೆಟ್ಟಿಸಿ, ಜಾತ್ಯತೀತ ಶಕ್ತಿಗಳನ್ನು ಗೆಲ್ಲಿಸಲು ಹಾಗೂ ಭ್ರಷ್ಟಾಚಾರಿಗಳನ್ನು ಅಧಿಕಾರದಿಂದ ದೂರವಿಡಲು ಎಲ್ಲ ವರ್ಗದ ಜನರು ನಿಶ್ಚಯಿಸಿರುವುದರಿಂದ ಜೆಡಿಎಸ್ ಸಂಪೂರ್ಣ ಬಹುಮತದಿಂದ ಗೆದ್ದು ನಗರಸಭೆ ಚುಕ್ಕಾಣಿ ಹಿಡಿಯಲಿದೆ ಎಂದರು.
ಎಲ್ಲಾ 31 ವಾರ್ಡ್‌ಗಳಲ್ಲೂ ಅನೇಕ ಆಕಾಂಕ್ಷಿಗಳಿದ್ದಾರೆ. ಎಲ್ಲರ ಮನವೊಲಿಸಿ ಒಬ್ಬ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಇತ್ತೀಚಿನ ದಿನಗಳಲ್ಲಿ ಜನ ಬಲ, ಹಣ ಬಲ ಹಾಗೂ ಮತದಾರರ ವಿಶ್ವಾಸವನ್ನು ಹೊಂದುವುದು ಮುಖ್ಯವಾಗಿದ್ದು, ಈ ಎಲ್ಲಾ ಅಂಶಗಳನ್ನು ಗಮನಿಸಿ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಹೆಚ್ಚಾಗಿ ಯುವಕರಿಗೆ ಆದ್ಯತೆ ನೀಡಲಾಗುವುದು. ಟಿಕೆಟ್ ವಂಚಿತರು ಹತಾಶರಾಗದೆ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯಬೇಕು ಎಂದರು.
ಕಳೆದ ಬಾರಿ ಪಕ್ಷದ ಹೆಸರಿನಲ್ಲಿ ಗೆಲುವು ಸಾಧಿಸಿದ ಕೆಲವರು ನಮ್ಮಿಂದ ಅಧಿಕಾರವನ್ನು ಪಡೆದು ತಮ್ಮ ಸ್ವಾರ್ಥ ಸಾಧನೆಗೆ ಪಕ್ಷ ತ್ಯಜಿಸಿದ್ದು ಇನ್ನೂ ಮಾಸಿಲ್ಲ. ಆದ್ದರಿಂದ ಈ ಸಲ ಗೆದ್ದ ಮೇಲೆ ಪಕ್ಷಾಂತರ ಮಾಡದಂತಹ ಸಚ್ಛಾರಿತ್ರ್ಯದವರಿಗೆ ಟಿಕೆಟ್ ನೀಡಲಾಗುವುದು. ಪಕ್ಷ ಬಿಟ್ಟು ಹೋಗುವವರಿಗೆ ಯಾವುದೇ ನಿರ್ಬಂಧವಿಲ್ಲ. ಹೊರ ಹೋಗುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಹೋಗುವವರು ಈಗಲೇ ಹೊರಹೋಗಬೇಕು ಎಂದ ಅವರು, ಜೆಡಿಎಸ್‌ನಿಂದ ಕೆಲವರು ಹೊರ ಹೋಗಿರಬಹುದು. ಆದರೆ ಚುನಾವಣೆ ಸಮೀಪಿಸಿದಂತೆ ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಸೇರಿಕೊಂಡಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ವಕೀಲರಾದ ವಾಮನ ಮೂರ್ತಿ, ಎಚ್.ಕೆ.ಕೊಟ್ರಪ್ಪ, ಮುಜಾಮಿಲ್, ಎಸ್.ಕೆ.ಸಮೀವುಲ್ಲಾ, ಕೆ.ಜಿ.ಎಸ್.ಪಾಟೀಲ್, ರಮೇಶ್ ಮಾನೆ, ಹಾಲೇಶ್ ಗೌಡ, ಏ.ಕೆ. ನಾಗಪ್ಪ, ಜಂಬಣ್ಣ, ಎಚ್.ಸುಧಾಕರ್, ಸಿರಿಗೇರಿ ಪರಮೇಶ್ ಗೌಡ್ರು ಮುಂತಾದವರು ಮಾತನಾಡಿದರು.
ಮಾಜಿ ನಗರಸಭೆ ಅಧ್ಯಕ್ಷೆ ಪ್ರತಿಭಾ ಕುಲಕರ್ಣಿ, ಹೊನ್ನಮ್ಮ ವಿಜಯ್ ಕುಮಾರ್, ಮಲೇಬೆನ್ನೂರು ಪುರಸಭೆ ಅಧ್ಯಕ್ಷೆ ಹೇಮಾವತಿ ವಿಜಯ್ ಕುಮಾರ್, ಮುಖಂಡರಾದ ಅತಾವುಲ್ಲಾ, ಅಲ್ತಾಫ್, ಹಾಜಿ ಅಲಿ, ಎಚ್.ನಿಜಗುಣ, ಲಕ್ಷ್ಮಿ ಆಚಾರ್, ಪಿ.ಎನ್. ವಿರೂಪಾಕ್ಷ, ಜಿ.ನಂಜಪ್ಪ, ಪ್ರೇಮ್ ಕುಮಾರ್ ಅಡಿಕೆೆ, ಸುರೇಶ್ ಚಂದಾಪುರ ಸೇರಿದಂತೆ ವಿವಿಧ ವಾರ್ಡ್‌ಗಳ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಸಭೆಯಲ್ಲಿದ್ದರು.