Advertisement

ರಾಜ್ಯದ ಸಮೃದ್ಧಿಗೆ ಎಲ್ಲರೂ ಶ್ರಮಿಸೋಣ

11:35 AM Jan 16, 2020 | Naveen |

ದಾವಣಗೆರೆ: ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕ ರಾಜ್ಯವನ್ನು ಇನ್ನಷ್ಟು ಸುಂದರ, ಸಮೃದ್ಧಗೊಳಿಸಲು ಎಲ್ಲರೂ ಪ್ರಯತ್ನಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

Advertisement

ಬುಧವಾರ, ಹರಿಹರದಲ್ಲಿ ಆರೋಗ್ಯ ಮಾತೆಯ ಕಿರು ಬಸಿಲಿಕ ಸಾಂಭ್ರಮಿಕ ಘೋಷಣೆ ಹಾಗೂ ಸಮರ್ಪಣ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಕಿರು ಬಸಿಲಿಕ ಉದ್ಘೋಷಣಾ ಫಲಕ ಅನಾವರಣಗೊಳಿಸಿ, ಮಾತನಾಡಿದ ಅವರು, ಕರ್ನಾಟಕದಲ್ಲಿ ಸಹನೆ ಮತ್ತು ಶಾಂತಿಗೆ ಯಾವತ್ತೂ ಮನ್ನಣೆ ಹಾಗೂ ಪ್ರಾತಿನಿಧ್ಯ ದೊರೆತಿದೆ. ಜಾತಿ, ಧರ್ಮ ಎನ್ನದೇ ಎಲ್ಲರೂ ಕೂಡಿ ಸಾಮರಸ್ಯದ ಜೀವನ ಸಾಗಿಸುತ್ತಿದ್ದಾರೆ. ಸ್ವಧರ್ಮ ಪಾಲನೆ, ಪರಧರ್ಮ ಸಹಿಷ್ಣುತೆ ಭಾರತೀಯರಿಗೆ ರಕ್ತಗತವಾಗಿದೆ. ಮಹಾತ್ಮಾ ಗಾಂಧೀಜಿಯವರು ಎಲ್ಲ ಧರ್ಮಗಳನ್ನು ಪ್ರೀತಿಸು, ನಿನ್ನ ಧರ್ಮದಲ್ಲಿ ಜೀವಿಸು ಎಂದಿರುವುದು ಉಲ್ಲೇಖಾರ್ಹವಾಗಿದ್ದು, ಅದೇ ರೀತಿ ನಾವು ಜೀವಿಸುತ್ತಿದ್ದೇವೆ ಎಂದರು.

ಹರಿಹರದ ಆರೋಗ್ಯಮಾತೆ ಮಹಾದೇವಾಲಯವು ಪೋಪ್‌ ಫ್ರಾನ್ಸಿಸ್‌ರಿಂದ ಮನ್ನಣೆ ಪಡೆದಿರುವುದು ಸಂತಸ ತಂದಿದೆ. ಧರ್ಮ, ಜಾತಿ, ಮತದ ಎಲ್ಲೆಗಳನ್ನು ಮೀರಿದ ಭಕ್ತ ಗಣ ಹೊಂದಿರುವ ಈ ಮಹಾ ದೇವಾಲಯದ ಉತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಿದ್ದಾರೆ. ಇಂತಹ ಶ್ರದ್ಧಾ ಕೇಂದ್ರ ಈಗ ಮಹಾ ದೇವಾಲಯ ಆಗಿ ಘೋಷಣೆ ಆಗಿರುವಂತಹದ್ದು ನಿಜಕ್ಕೂ ಹೆಮ್ಮೆಯ ವಿಷಯ. ಈ ಮಹಾ ದೇವಾಲಯದ ಮಾನ್ಯತೆಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದ ಸಿಎಂ, ಭಾರತದ 25ನೇ ಮತ್ತು ಕರ್ನಾಟಕದ 3ನೇ ಮಹಾ ದೇವಾಲಯ ಇದಾಗಿದ್ದು, ಶಾಂತಿ, ಸಹನೆ, ಸೌಹಾರ್ದತೆ, ಸಾಮರಸ್ಯಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎಂದು ಆಶಿಸಿದರು.

ಆಶ್ರಯ ಬಯಸಿ ಬರುವವರು, ಅಭಯ ನೀಡಿದವರಿಗೆ ಅಭ್ಯುದಯದ ಮಾರ್ಗ ತೋರುವ ಔದಾರ್ಯ ಗುಣ ಭಾರತೀಯರಿಗೆ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿದೆ. ಧರ್ಮದ ಕಾರಣಕ್ಕೆ ಪಾಶ್ಚಾತ್ಯದಲ್ಲಿ ದೌರ್ಜನ್ಯಕ್ಕೊಳಗಾದ ಪಾರಸಿ ಜನರು ಸಹಸ್ರಾರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಗೊಂಡು ಇದೇ ಮಣ್ಣಿನಲ್ಲಿ ಧಾರ್ಮಿಕ, ಸಾಮಾಜಿಕ ಔನ್ನತ್ಯಕ್ಕೆ ತಲುಪಿರುವುದು ಇತಿಹಾಸ ದಾಖಲಿಸಿದೆ. ತಮ್ಮದೇ ಆದ ಮಾತೃ ಭೂಮಿ ತೊರೆದು ಮತ್ತೂಂದು ನೆಲೆ ರೂಪಿಸಿಕೊಂಡ ಪಾರಸಿಕರು ತಮ್ಮ ಸಾಧನೆಗಾಗಿ ಪ್ರಸಿದ್ಧರಾಗಿದ್ದಾರೆ. ಇದೇ ರೀತಿ ಕ್ರೈಸ್ತರು ಜೀಸಸ್‌ ಕ್ರಿಸ್ತರ ತರುವಾಯ ಭಾರತಕ್ಕೆ ಬಂದು ನೆಲೆಗೊಂಡರು.

ಅವರನ್ನು ಭಾರತೀಯರು ಔದಾರ್ಯದಿಂದ ಬರ ಮಾಡಿ ಕೊಂಡು ಅಭ್ಯುದಯಕ್ಕೆ ಸಹಕರಿಸಿದರು ಎಂದರು. ಭಾರತ ಸರ್ವಧರ್ಮಗಳ ಪಾಲನೆಯ
ತಾಣವಾಗಿದೆ. ಎಲ್ಲ ಧರ್ಮವನ್ನು ಪ್ರೀತಿಸಿ, ನಮ್ಮ ಧರ್ಮದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲ ಸಂಸ್ಕೃತಿಗಳನ್ನು ಆದರಿಸುತ್ತೇವೆ ಹಾಗೂ ನಮ್ಮ ಸಂಸ್ಕೃತಿ ಅನುಸರಿಸುತ್ತೇವೆ. ರಾಷ್ಟ್ರಕವಿ ಕುವೆಂಪು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂಬುದಾಗಿ ಬಣ್ಣಿಸಿದ್ದಾರೆ. ಬಹುತ್ವಕ್ಕೆ ಉದಾಹರಣೆ ಎಂಬಂತೆ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಸಮುದಾಯ ತಾವು ನೆಲೆ ನಿಂತ ಕಡೆ ಸ್ಥಳೀಯರ ಜೊತೆ ಹೊಂದಿಕೊಂಡು ಸಹಬಾಳ್ವೆ ನಡೆಸಿದಾಗ ಶಾಂತಿ, ಸಹನೆ ಮತ್ತು ನೆಮ್ಮದಿ ನೆಲೆಗೊಳ್ಳಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

Advertisement

ಕ್ರೈಸ್ತ ಅನುಯಾಯಿಗಳು ಸಹಬಾಳ್ವೆ, ಶಾಂತಿ, ಸೌಹಾರ್ದತೆಯಂತಹ ತತ್ವ ಅನುಸರಿಸುತ್ತಿರುವುದು ಶ್ಲಾಘನೀಯ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆ ಈ ಮೂರು ಕ್ಷೇತ್ರಗಳಲ್ಲಿ ಈ ಸಮುದಾಯದ ಕೊಡುಗೆ ಅನುಪಮ ಹಾಗೂ ಅಭಿನಂದನಾರ್ಹವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ಆರ್ಚ್‌ಬಿಷಪ್‌ ಡಾ| ಪೀಟರ್‌ ಮಜಾದೊ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಮುರಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ದಾವಣಗೆರೆ ಇಸ್ಲಾಂ ಧರ್ಮ ಗುರು ಮೌಲನಾ ಬಿ.ಎ. ಇಬ್ರಾಹಿಂ ಸಖಾಫಿ ಮಾತನಾಡಿದರು. ಶಿವಮೊಗ್ಗ ಧರ್ಮಾಧ್ಯಕ್ಷ ಡಾ| ಫ್ರಾನ್ಸಿಸ್‌ ಸೆರೋವೊ ಸ್ವಾಗತಿಸಿದರು. ಫಾದರ್‌ ನ್ಯಾನ್ಸಿ ಡಿಸೋಜ ಕಿರು ಬಿಸಿಲಿಕ ಉದ್ಘೋಷಣೆ ಕನ್ನಡಾನುವಾದ ವಾಚಿಸಿದರು.

ಬಿಷಪ್‌ ಆಂಟನಿ ಪೀಟರ್‌ ಆರೋಗ್ಯ ಮಾತೆ ದೇವಾಲಯದ ಇತಿಹಾಸ, ನಡೆದು ಬಂದ ದಾರಿ ಕುರಿತು ಮಾಹಿತಿ ನೀಡಿದರು. ಆರ್ಚ್‌ ಬಿಷಪ್‌ ಆಫ್‌ ಗೋವಾ ಮತ್ತು ದಮನ್‌ ಮತ್ತು ಸಿಸಿಬಿಐ ಅಧ್ಯಕ್ಷ ಡಾ| ಫಿಲಿಪ್‌ ನೆರಿ ಫೆರಾಒ, ಮಂಗಳೂರಿನ ಬಿಷಪ್‌ ಎಮಿರೈಟಸ್‌ ಆಲೋಷಿಯಸ್‌ ಪೌಲ್‌ ಡಿಸೋಜ, ಬಿಷಪ್‌ ಎಮಿರೈಟಸ್‌ ಥಾಮಸ್‌ ಆ್ಯಂಟನಿ ವಾಝಪಿಲ್ಲಿ, ಬಳ್ಳಾರಿಯ ಬಿಷಪ್‌ ಹೆನ್ರಿ ಡಿಸೋಜ, ಉಡುಪಿಯ ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೊಬೊ, ಚಿಕ್ಕಮಗಳೂರಿನ ಬಿಷಪ್‌ ಟಿ ಆ್ಯಂತೋನಿ ಸ್ವಾಮಿ, ಗುಲ್ಬರ್ಗದ ಬಿಷಪ್‌ ರಾಬರ್ಟ್‌ ಎಂ. ಮಿರಂಡ, ಬೆಳಗಾವಿಯ ಬಿಷಪ್‌ ಡೆರೆಕ್‌ ಫರ್ನಾಂಡಿಸ್‌, ಪುತ್ತೂರಿನ ಜೇವರ್ಗಿಸ್‌ ಮಾರ್‌ ಮಕಾರಿಯಸ್‌ ಕಲಾಯಲ್‌, ಮೈಸೂರಿನ ಬಿಷಪ್‌ ಕೆ.ಎ ವಿಲಿಯಂ, ಬರೇಲಿಯ ಬಿಷಪ್‌ ಇಗ್ನೀಷಿಯಸ್‌ ಡಿಸೋಜ,
ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್‌, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಹರಿಹರ ಕ್ಷೇತ್ರದ ಶಾಸಕ ಎಸ್‌. ರಾಮಪ್ಪ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next