Advertisement

ಓದು ಯಾವುದೇ ವರ್ಗಕ್ಕೆ ಸೀಮಿತವಲ್ಲ: ಬೆಳಗಲ್‌

07:13 PM Nov 22, 2019 | Naveen |

ಹರಿಹರ: ಓದುವ ಸಂಸ್ಕೃತಿ ಕೇವಲ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಬಾರದು ಎಂದು ದಾವಣಗೆರೆ ನಗರ ಕೇಂದ್ರ ಗ್ರಂಥಾಲಯ ಸಹಾಯಕ ಸಂಗಣ್ಣ ಬೆಳಗಲ್‌ ಹೇಳಿದರು.

Advertisement

ಇಲ್ಲಿನ ಸಾರ್ವಜನಿಕ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿದ ಅವರು, ಓದು, ಅಧ್ಯಯನ ಎಂಬುದು ತಮಗೆ ಸಂಬಂಧಿಸಿದ್ದಲ್ಲ
ಎಂಬ ಧೋರಣೆ ಕೆಲವರ್ಗದ ಜನರಲ್ಲಿದೆ. ಇದು ಬದಲಾಗಬೇಕು ಎಂದರು.

ಓದು ವ್ಯಕ್ತಿಯ ಆಲೋಚನಾ ಶಕ್ತಿ, ವಿಚಾರ ಲಹರಿ ವೃದ್ಧಿಸುವುದಲ್ಲದೆ ತಾಳ್ಮೆಯನ್ನೂ ಹೆಚ್ಚಿಸುತ್ತದೆ. ದೇಶ ಸುತ್ತಲು ಆರ್ಥಿಕವಾಗಿ ಸಮರ್ಥರಲ್ಲದವರು ಪುಸ್ತಕಗಳನ್ನು ಓದಿ ತಮ್ಮ ಅರಿವು ಹೆಚ್ಚಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಧಿಕಾರಿ ಸುಮಾ ಕೋಡಿಹಳ್ಳಿ ಮಾತನಾಡಿ, ಗ್ರಂಥಗಳು ಅಮೂಲ್ಯ ಆಸ್ತಿ. ಗ್ರಂಥಗಳಿಂದ ಪಡೆದ ಜ್ಞಾನ ಯಾರೂ ಕದಿಯಲಾಗದು. ಮಹಿಳೆಯರು ಟಿವಿ ಮುಂದೆ ಕುಳಿತು ಧಾರಾವಾಹಿ ನೋಡುವುದನ್ನು ಬಿಟ್ಟು ಪತ್ರಿಕೆ, ಪುಸ್ತಕ ಓದಬೇಕು. ಬಿಡುವಿನ ಸಮಯದಲ್ಲಿ ಸಮೀಪದ ಗ್ರಂಥಾಲಯಕ್ಕೆ ಬಂದು ಸದಪಯೋಗಪಡಿಸಿಕೊಳ್ಳಬೇಕು ಎಂದರು.

ಓದುಗಾರರಾದ ಹನುಮಂತಪ್ಪ ಮಾತನಾಡಿ, ಗ್ರಂಥಾಲಯವೇ ದೇವಾಲಯ. ಇಲ್ಲಿನ ಪುಸ್ತಕಗಳೇ ದೇವರು. ಶ್ರದ್ಧಾ-ಭಕ್ತಿಯಿಂದ ಓದಿದರೆ ಎಲ್ಲರೂ ಜ್ಞಾನಿಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಹುಳುಗಳಾಗದೆ ಪತ್ರಿಕೆ, ಸಾಹಿತ್ಯಾಧ್ಯಯನಕ್ಕೆ ಸಮಯ ಮೀಸಲಿರಿಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮಾತ್ರವಲ್ಲದೆ ಎಲ್ಲಾ ನಾಗರಿಕರೂ ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

ಗ್ರಂಥಾಲಯದ ಶಾಖಾಧಿ ಕಾರಿ ರವಿಕುಮಾರ ಮಾತನಾಡಿ, ಸಾರ್ವಜನಿಕ ಗ್ರಂಥಾಲಯಗಳು ಸಾಂಸ್ಕೃತಿಕವಾಗಿ ಉನ್ನತ ಬದುಕನ್ನು ರೂಪಿಸುವಲ್ಲಿ ಸಹಾಯಕವಾಗಿವೆ. ಜ್ಞಾನಾರ್ಜನೆಗೆ ಗ್ರಂಥಾಲಯ ಅತ್ಯವಶ್ಯ. ಇಲ್ಲಿ ಜಾತಿ-ಮತ, ಅಂತಸ್ತು-ಲಿಂಗಭೇದಕ್ಕೆ ಅವಕಾಶವಿಲ್ಲ. ಯಾರೇ ಆಗಲಿ ಮುಕ್ತವಾಗಿ ಗ್ರಂಥಾಲಯ ಸೌಲಭ್ಯ ಪಡೆಯಬಹುದು ಎಂದರು. ಹಾಜರಿದ್ದ ಓದುಗರಾದ ಸುರೇಶ, ರಮೇಶ, ಆರುಂಧತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಶಾಖಾ ಗ್ರಂಥಾಲಯದ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವೈವಿಧ್ಯಮಯ ಪುಸ್ತಕಗಳು ಹಾಗೂ ಇನ್ನು ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕೆಂದು ಕೋರಿದರು.

ಸಪ್ತಾಹದ ನಿಮಿತ್ತ ಏರ್ಪಡಿಸಿದ್ದ ರಂಗೋಲಿ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ನಗರದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಂಥಾಲಯ ಪಿತಾಮಹ ಡಾ| ಎಸ್‌.ಆರ್‌. ರಂಗನಾಥನ್‌ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಕೆ.ಎಂ.ವಿಶ್ವನಾಥ, ಸಿಬ್ಬಂದಿಗಳಾದ ಮಂಜುನಾಥ, ರಾಘವೇಂದ್ರ, ಹರೀಶ, ಮೀನಾಕ್ಷಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next