ಹರಿಹರ: ದೇಶದಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ, ಸಾಮರಸ್ಯಕ್ಕೆ ಹೆಚ್ಚು ಒತ್ತು ಕೊಡಬೇಕಿದೆ. ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನ ಯಥಾವತ್ ಅನುಷ್ಠಾನಗೊಳ್ಳಬೇಕಿದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 73ನೇ ಸ್ವಾಂತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಹಿಂಸೆಯೇ ಪರಮೋಧರ್ಮ ಎಂದು ಹೇಳಿ, ರಕ್ತಪಾತವಿಲ್ಲದೆ ಅಂಹಿಸೆಯಿಂದ ಸ್ವಾತಂತ್ರ್ಯ ತಂದುಕೊಟ್ಟಿರುವ ಮಹಾತ್ಮ ಗಾಂಧಿ ಎಲ್ಲರಿಗೂ ಆದರ್ಶ. ಅಹಿಂಸೆಯಿಂದ ಮಾತ್ರ ದೇಶ ಮತ್ತು ಜಗತ್ತಿನ ಪ್ರಗತಿ ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.
ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನ ಬಲಿದಾನ ನೀಡಿದ್ದಾರೆ. ಅವರ ಸ್ಮರಣೆ, ಕೃತಜ್ಞತೆ ಸಲ್ಲಿಸುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸೋಣ ಎಂದರು.
ರಾಜ್ಯದಲ್ಲಿ ನೆರೆಯಿಂದ ಅನೇಕ ಜಿಲ್ಲೆಗಳು ಜಲಾವೃತವಾಗಿವೆ. ಸಾವಿರಾರು ಜನ-ಜಾನುವಾರುಗಳು ಪ್ರವಾಹದಿಂದ ಕಾಣೆಯಾಗಿದ್ದಾರೆ. ಸಂತ್ರಸ್ತರು ತಮ್ಮ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಂತಹ ಸಂತ್ರಸ್ತರ ಹೋರಾಟ ಹಾಗೂ ನೋವಿಗೆ ಸ್ಪಂದಿಸುವ ಜತೆಗೆ ಅಗತ್ಯ ನೆರವಿಗೆ ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ರೆಹಾನ್ ಪಾಷ ಮಾತನಾಡಿ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ವಿಶ್ವದಲ್ಲಿ ಬಿಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮತ್ತಿದೆ. ಪ್ರಸ್ತುತ ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ, ಕಲೆ ಮತ್ತು ಕ್ರೀಡೆಯಲ್ಲಿ ಗಣನೀಯ ಸಾಧನೆ ಮೂಲಕ ಜಗತ್ತಿನ ಗಮನ ಸೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ, ಎನ್‌ಎಸ್‌ಎಸ್, ವಿವಿಧ ಶಾಲಾ ಮಕ್ಕಳು ಕವಾಯತು ಪ್ರದರ್ಶಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ ಜಯಮ್ಮ, ಎಪಿಎಂಸಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಎಂ. ನರೇಂದ್ರ, ಇಒ ಜಿ.ಡಿ. ಗಂಗಾಧರನ್, ಬಿಇಒ ಯು. ಬಸವರಾಜಪ್ಪ, ಸಿಪಿಐ ಐ.ಎಸ್. ಗುರುನಾಥ್, ಪೌರಾಯುಕ್ತೆ ಎಸ್. ಲಕ್ಷ್ಮೀ ಮತ್ತಿತರರಿದ್ದರು.