ಹರಿಹರ: ಇಲ್ಲಿನ ತಾಪಂ ಅಧ್ಯಕ್ಷೆ ಎಚ್.ಎಸ್. ಶ್ರೀದೇವಿ ಮಂಜಪ್ಪ ವಿರುದ್ಧ ತಾಪಂನ 10 ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದು, ತಾಪಂನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಕುತ್ತು ಬಂದಿದೆ. ಬಿಜೆಪಿ ಬದಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದೆ.
ಕಾಂಗ್ರೆಸ್ ಸದಸ್ಯ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕುಂಬಳೂರು ಕ್ಷೇತ್ರದ ಆದಾಪುರ ವೀರಭದ್ರಪ್ಪ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ತಾಪಂ ಕಚೇರಿ ವ್ಯವಸ್ಥಾಪಕರ ಕೊಠಡಿಗೆ ತೆರಳಿದ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಎಲ್ಲಾ 10 ಸದಸ್ಯರು, ಅವಿಶ್ವಾಸ ವ್ಯಕ್ತಪಡಿಸಿ ಸಹಿ ಮಾಡಿದ್ದ ಮನವಿ ಸಲ್ಲಿಸಿ, ಮುಂದಿನ ಕ್ರಮ ಜರುಗಿಸಲು ಕೋರಿದರು.
ತಾಪಂನಲ್ಲಿ ಜೆಡಿಎಸ್‌ನ 6, ಬಿಜೆಪಿಯ 5 ಹಾಗೂ ಕಾಂಗ್ರೆಸ್‌ನ 4 ಸದಸ್ಯರು ಸೇರಿ ಒಟ್ಟು 15 ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಕುಂಬಳೂರು ಕ್ಷೇತ್ರದ ಆದಾಪುರ ವೀರಭದ್ರಪ್ಪ, ಕುಣಿಬೆಳಕೆರೆ ಕ್ಷೇತ್ರದ ಎನ್.ಪಿ.ಬಸವಲಿಂಗಪ್ಪ, ರಾಜನಹಳ್ಳಿ ಕ್ಷೇತ್ರದ ಲಕ್ಷ್ಮೀ ಮಹಾಂತೇಶ್, ಕೊಂಡಜ್ಜಿ ಕ್ಷೇತ್ರದ ಪ್ರೇಮಾ ಪರಮೇಶ್ವರಪ್ಪ, ಜೆಡಿಎಸ್ ಸದಸ್ಯರಾದ ಸಿರಿಗೆರೆ ಕ್ಷೇತ್ರದ ಕೊಟ್ರಪ್ಪಗೌಡ, ವಾಸನದ ಜಿ.ಸಿ.ಬಸವರಾಜ್, ಕೊಕ್ಕನೂರು ಕ್ಷೇತ್ರದ ಬಸವನಗೌಡ ಬಿ., ಗುತ್ತೂರು ಕ್ಷೇತ್ರದ ಸದಸ್ಯೆ, ಹಾಲಿ ಉಪಾಧ್ಯಕ್ಷೆ ಜಯ್ಯಮ್ಮ ಬಸವಲಿಂಗಪ್ಪ, ಜಿಗಳಿ ಕ್ಷೇತ್ರದ ರತ್ನಮ್ಮ ಕೆ.ಆರ್.ರಂಗಪ್ಪ, ಎಳೆಹೊಳೆ ಕ್ಷೇತ್ರದ ಶಾಂತಮ್ಮ ಗದಿಗೆಪ್ಪ ಅವಿಶ್ವಾಸ ನಿರ್ಣಯ ಕೋರಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿಗೆ ಕುತ್ತು: ಮೂರು ವರ್ಷದ ಹಿಂದೆಯೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ಅಧ್ಯಕ್ಷರಾಗಿ ಬನ್ನಿಕೋಡು ಕ್ಷೇತ್ರದ ಬಿಜೆಪಿ ಸದಸ್ಯೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷರಾಗಿ ಗುತ್ತೂರು ಕ್ಷೇತ್ರದ ಜೆಡಿಎಸ್ ಸದಸ್ಯೆ ಬಸವಲಿಂಗಮ್ಮ ಆಯ್ಕೆಯಾಗಿದ್ದರು.
ಸದ್ಯ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವಿದೆ. ಲೋಕಸಭಾ ಚುನಾವಣೆಯನ್ನೂ ಇವೆರಡೂ ಪಕ್ಷಗಳು ಜೊತೆಯಾಗಿ ಎದುರಿಸಿವೆ. ಹೀಗಿದ್ದಾಗ ತಾಪಂನಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ತಮಗೆ ಆಡಳಿತ ನಡೆಸುವ ಅವಕಾಶ ಸಿಗುತ್ತದೆ ಎಂಬುದು ಕಾಂಗ್ರೆಸ್ ಸದಸ್ಯರ ಲೆಕ್ಕಾಚಾರವಾಗಿತ್ತು. ಅದರಂತೆ ಈಗ ಜೆಡಿಎಸ್-ಕಾಂಗ್ರೆಸ್ ಹೊಸ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಗೆ ಕುತ್ತು ಬಂದಂತಾಗಿದೆ.
ಅವಿಶ್ವಾಸ ನಿರ್ಣಯ ಕೋರಿ ಅರ್ಜಿ ಸಲ್ಲಿಸಿದ 15 ದಿನದೊಳಗೆ ಅಧ್ಯಕ್ಷರು ತಾಪಂ ಸದಸ್ಯರ ಸಭೆ ಕರೆದು ಅವಿಶ್ವಾಸ ನಿರ್ಣಯಕ್ಕೆ ಅನುವು ಮಾಡಿಕೊಡಬೇಕಿದೆ. ಅವರು ಅಷ್ಟರಲ್ಲಿ ಸಭೆ ಕರೆಯದಿದ್ದರೆ 16ನೇ ದಿನದಿಂದ 30 ದಿನಗಳವರೆಗೆ ತಾಪಂ ಉಪಾಧ್ಯಕ್ಷರು ಸಭೆ ಕರೆಯಬಹುದು. ಅವರೂ ಸಭೆ ಕರೆಯದಿದ್ದರೆ 30 ದಿನಗಳ ನಂತರ ತಾಪಂ ಇಒ ಅವರಿಗೆ ಸಭೆ ನಡೆಸುವ ಅಧಿಕಾರ ಲಭಿಸುತ್ತದೆ.
ನಗರಸಭೆ, ಪುರಸಭೆಯಲ್ಲೂ ಮೈತ್ರಿ: ನಿರೀಕ್ಷೆಯಂತೆ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ತಾಪಂ ಮಾತ್ರವಲ್ಲದೆ ಹರಿಹರ ನಗರಸಭೆ, ಮಲೆಬೆನ್ನೂರು ಪುರಸಭೆಯಲ್ಲೂ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗುತ್ತಿದೆ.
ಇತ್ತೀಚಿಗೆ ನಡೆದ ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿಲ್ಲ, ಮಲೆಬೆನ್ನೂರು ಪುರಸಭೆಯಲ್ಲೂ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. ಮಲೇಬೆನ್ನೂರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಪಕ್ಷದ ಸದಸ್ಯರು ಅಧ್ಯಕ್ಷರಾಗಿದ್ದಾರೆ. ಎಪಿಎಂಸಿ, ಟಿಎಪಿಎಂಸಿ, ಪಿಎಲ್ಡಿ ಇನ್ನಿತರೆ ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹಾಗೂ ಜೆಡಿಎಸ್ ಮುಖಂಡರ ಮಧ್ಯೆ ಒಪ್ಪಂದವಾಗಿದೆೆ ಎನ್ನಲಾಗುತ್ತಿದೆ.