Advertisement

ಸಮಾನತೆಗೆ ಅಂತರ್ಜಾತಿ ವಿವಾಹವೇ ಮದ್ದು

01:31 PM Aug 19, 2019 | Naveen |

ಹರಿಹರ: ಭಾರತದಲ್ಲಿ ಸಮಾನತೆ ಸಾಧಿಸಲು ಅಂತರ್ಜಾತಿ ವಿವಾಹಗಳೇ ಮದ್ದು. ಸಮಾಜದಲ್ಲಿ ಎಲ್ಲರೂ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದು ಸಾಹಿತಿ, ವಿಚಾರವಾದಿ ಪ್ರೊ| ಕೆ.ಎಸ್‌. ಭಗವಾನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಗುರುಭವನದಲ್ಲಿ ದಸಂಸ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ಭಾನುವಾರ ಆಯೋಜಿಸಿದ್ದ ಹಿಂದುಳಿದ, ಶೋಷಿತರ ಹಕ್ಕುಗಳ ಜಾಗೃತಿಗಾಗಿ ದಲಿತ ಸಮಾವೇಶ, ಡಾ| ಅಂಬೇಡ್ಕರ್‌ರ 128, ಪ್ರೊ| ಬಿ. ಕೃಷ್ಣಪ್ಪರ 81ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಯುವಕ-ಯುವತಿಯರು ಜಾತಿಭೇದ ಮರೆತು ತಮಗೆ ಸೂಕ್ತ ಎನ್ನಿಸಿದವರನ್ನು ವಿವಾಹವಾಗುತ್ತಿರುವುದು ಸ್ವಾಗತಾರ್ಹ. ಇಂತಹ ವಿವಾಹಗಳಿಂದ ಸಮಜದ ತಳಮಟ್ಟದಿಂದ ಜಾತೀಯತೆ ಮೂಲೋತ್ಪಾಟನೆಯಾಗುತ್ತದೆ. ಸರ್ಕಾರಗಳು ಅಂತರ್ಜಾತಿ ವಿವಾಹಿತರಿಗೆ ಹೆಚ್ಚಿನ ಪ್ರೋತ್ಸಾಹ, ಸೌಕರ್ಯ ಘೋಷಿಸಬೇಕು ಎಂದರು.

ಅಂತರ್ಜಾತಿ ವಿವಾಹ ಕಡ್ಡಾಯಗೊಳಿಸಬೇಕು: ದೇಶದಲ್ಲಿ ಅಂತರ್ಜಾತಿ ವಿವಾಹವಾದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಕಾನೂನು ತಂದರೆ ದೇಶದಲ್ಲಿ ಜಾತೀಯತೆ ಅಳಿಸಲು ಸಾಧ್ಯವಿದೆ.

ಮನುಷ್ಯನನ್ನು ಮನುಷ್ಯನ ರೀತಿ ಕಾಣದಿರುವ ಸಾಮಾಜಿಕ ಅಸಮಾನತೆ ಬಗ್ಗೆ ಅಂಬೇಡ್ಕರ್‌ ತೀವ್ರ ನೊಂದಿದ್ದರು. ಅಂತರ್ಜಾತಿ ವಿವಾಹವಾದವರಿಗೆ ಮಾತ್ರ ಚುನಾವಣೆಗೆ ನಿಲ್ಲುವ ಕಾನೂನು ರಚಿಸಬೇಕು. ಆ ಮೂಲಕ ಜಾತೀಯತೆ ತಾನಾಗಿ ನಾಶವಾಗುತ್ತದೆ ಎಂಬ ಇಂಗಿತ ಅವರದ್ದಾಗಿತ್ತು ಎಂದರು.

Advertisement

ಸ್ವಾತಂತ್ರ್ಯ ಲಭಿಸಿ 72 ವರ್ಷಗಳಾದರೂ ದೇಶದಲ್ಲಿ ಸಾಮರಸ್ಯತೆ, ಸಮಾನತೆ ಮೈಗೂಡಿಲ್ಲ. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಈ ಆದರ್ಶ ಕಾಣಲು ಸಾಧ್ಯ. ವಿದ್ಯಾವಂತ ಯುವಕರು ತಾವು ಜಾಗೃತಿ ಹೊಂದಿ ಸುಮ್ಮನಾಗದೆ, ಇತರೆ ಯುವಕ, ಯುವತಿಯರಲ್ಲೂ ಜಾಗೃತಿ ಮೂಡಿಸಬೇಕು ಎಂದರು.

ವೈಚಾರಿಕತೆಯಿಂದ ಮಾತ್ರ ಪ್ರಗತಿ: ಕುವೆಂಪು ಸೇರಿದಂತೆ ಹಲವರು ತಮ್ಮ ಸಾಹಿತ್ಯದಲ್ಲಿ ಜಾತೀಯತೆ, ಮೌಡ್ಯ ವಿರೋಧಿಸಿ ವೈಚಾರಿಕತೆ ಪ್ರತಿಪಾದಿಸಿದ್ದಾರೆ. ಆದರೂ ಜನರಲ್ಲಿ ಜಾತಿ-ಧರ್ಮಗಳ ಮೂಲಭೂತವಾದಿತನ ದೂರವಾಗಿಲ್ಲ. ಜನರಲ್ಲಿ ಮೌಡ್ಯತೆ ಬೆಳೆಸುವಲ್ಲಿ ಕೆಲ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ ಎಂದರು.

ಆಧುನಿಕ ಕಾಲಘಟ್ಟದಲ್ಲೂ ಸಮಾಜದಲ್ಲಿ ಮೂಢನಂಬಿಕೆಗಳು ಮೆರೆಯುತ್ತಿರುವುದು ದುರದೃಷ್ಟಕರ. ಪ್ರತಿಯೊಬ್ಬರೂ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡರೆ ಮಾತ್ರ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧ್ಯ. ಇದು ಸಂವಿಧಾನಬದ್ಧ ಕರ್ತವ್ಯವೂ ಸಹ ಆಗಿದೆ ಎಂದರು.

19ನೇ ಶತಮಾನದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಬಡ ದಲಿತರ ಶಿಕ್ಷಣಕ್ಕೆ ತಮ್ಮ ಸಂಪತ್ತನ್ನು ಧಾರೆ ಎರೆದರು. ಡಾ.ಅಂಬೇಡ್ಕರ್‌ ಸಹ ಫುಲೆಯವರ ಧನ ಸಹಾಯದಿಂದಲೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ಫುಲೆಯವರ ಮನೋಭಾವ ಇಂದಿನ ಬಲಿತ ದಲಿತರು ಮೈಗೂಡಿಸಿಕೊಳ್ಳಬೇಕೆಂದು ಪ್ರೊ| ಕೆ.ಎಸ್‌.ಭಗವಾನ್‌ ಹೇಳಿದರು.

ತಮ್ಮ ಒಡನಾಡಿ, ದಸಂಸ ಸ್ಥಾಪಕ ಪ್ರೊ| ಬಿ. ಕೃಷ್ಣಪ್ಪರನ್ನು ಸ್ಮರಿಸಿದ ಅವರು, ನಗರದ ಹೊರವಲಯದ ಬೈಪಾಸ್‌ ಬಳಿಯ ಕೃಷ್ಣಪ್ಪರ ಸ್ಮಾರಕವನ್ನು ವೀಕ್ಷಿಸಿದೆ. ಸುಂದರವಾದ ಸ್ಮಾರಕ ನೋಡಿ ಸಂತಸವಾಯಿತು. ಅವರ ಹೆಸರು ಸದಾ ಉಳಿಯುವಂತಹ ಕೆಲಸ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ದಲಿತ ಸಂಘಟನೆಗಳು ವಿಘಟನೆಯಾಗಿವೆ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸುತ್ತಾರೆ. ಆದರೆ ಯಾವುದೇ ಸಂಘಟನೆ ಸ್ಥಾಪಿಸಿದರೂ ಅದು ದಲಿತ ಎಂಬ ಪದವನ್ನು ಹೊಂದಿರುತ್ತದೆ. ದಲಿತ ಪದದ ಶಕ್ತಿಯನ್ನು ಅದು ಬಿಂಬಿಸುತ್ತದೆ ಎಂದರು.

ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್‌ ಅಧ್ಯಕ್ಷತೆ ವಹಿಸಿದ್ದರು. ಬುಳಸಾಗರ ಸಿದ್ಧರಾಮಣ್ಣ, ಮೈಸೂರಿನ ಚಿಂತಕರಾದ ಟಿ.ಸತೀಶ್‌ ಜವರೇಗೌಡ, ಎಂ.ಬಿ.ನಾಗಣ್ಣ ಗೌಡರು, ಚೆನ್ನಗಿರಿಯ ಚಿತ್ರಲಿಂಗಪ್ಪ, ಚೌಡಪ್ಪ ಸಿ., ಮಾರುತಿ ಪಿ., ಮಂಜುನಾಥ ಡಿ.ಎಂ., ಸಿರಿಗೆರೆ ರಮೇಶ್‌, ಹಳದಪ್ಪ ವಿ.ಬಿ., ಅಂಜಿನಪ್ಪ, ಕೊಕ್ಕನೂರು ಮಂಜುನಾಥ, ಬನ್ನಿಕೋಡು ಯೋಗೀಶ್‌, ಉಪನ್ಯಾಸಕಿ ನಳಿನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next