Advertisement

ಆಸ್ಪತ್ರೆಗೆ ಜಿಪಂ ಅಧ್ಯಕ್ಷೆ ದಿಢೀರ್‌ ಭೇಟಿ

03:50 PM Aug 02, 2019 | Team Udayavani |

ಹರಿಹರ: ನಗರದ ಸರ್ಕಾರಿ ಆಸ್ಪತ್ರೆ 100 ಹಾಸಿಗೆ ದರ್ಜೆಯದ್ದಾಗಿದ್ದರೂ ಕೇವಲ 50 ಹಾಸಿಗೆಯ ಅನುದಾನ ಬರುತ್ತಿದ್ದು, ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌ ಹೇಳಿದರು.

Advertisement

ನಗರದ ಸರಕಾರಿ ಆಸ್ಪತ್ರೆಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 50 ಹಾಸಿಗೆ ಸಾಮರ್ಥ್ಯದಿಂದ ಆಸ್ಪತ್ರೆಯನ್ನು 100 ಹಾಸಿಗೆ ಮೇಲ್ದರ್ಜೆಗೇರಿಸಿ ಹಲವು ವರ್ಷಗಳಾಗಿವೆ. ಆದರೆ ಈವರೆಗೂ 50 ಹಾಸಿಗೆಗೆ ನೀಡುತ್ತಿದ್ದ ಪ್ರಮಾಣದಲ್ಲೇ ಅನುದಾನ ಬರುತ್ತಿದ್ದು, ಸಂಬಂಧಿತ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಪರಿಷ್ಕರಣೆ ಜಾರಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಂಬಳ ಕೊಡಿಸಿ: ಆಸ್ಪತ್ರೆ ಗುತ್ತಿಗೆ ಕಾರ್ಮಿಕರ ಸಂಘದ ಪಂಚಾಕ್ಷರಿ ಹಾಗೂ ಎನ್‌.ಇ.ಸುರೇಶ್‌ಸ್ವಾಮಿ ಮನವಿ ನೀಡಿ, ಕಳೆದ 6 ತಿಂಗಳಿಂದ ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆದಾರ ಸಂಬಳ ವಿತರಿಸಿಲ್ಲ ಎಂದು ದೂರಿದಾಗ, ಗುತ್ತಿಗೆದಾರ ಬಿಕೆಆರ್‌ ಸ್ವಾಮಿಗೆ ´ೋನ್‌ ಮಾಡಿ ಮಾತನಾಡಿದರು. ಟೆಂಡರ್‌ ಅವಧಿ ಮುಗಿದಿದ್ದು, ಹೊಸ ಟೆಂಡರ್‌ ಕರೆಯದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ವಾಮಿ ಉತ್ತರಿಸಿದರು.

ರಾತ್ರಿ ವೇಳೆ ಭದ್ರತೆ ಬೇಕು: ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಭದ್ರತೆಗೆ ಪೊಲೀಸ್‌ ಪೇದೆ ಅಥವಾ ಹೋಂ ಗಾರ್ಡ್ಸ್‌ ನೇಮಿಸಲು ಕೋರಿದಾಗ ಎಸ್‌.ಪಿ. ಚೇತನ್‌ರೊಂದಿಗೆ ಮಾತನಾಡಿದ ಶೈಲಜಾರವರು ಪೊಲೀಸ್‌ ಪೇದೆ ನಿಯೋಜನೆ ಸಾಧ್ಯವಾಗದಿದ್ದರೆ ಕೊನೆ ಪಕ್ಷ ಹಗಲು, ರಾತ್ರಿ ತಲಾ ಓರ್ವ ಹೋಂ ಗಾರ್ಡ್‌ ಸಿಬ್ಬಂದಿ ನೇಮಿಸಿ ಎಂದು ಕೋರಿದರು.

ಶೀಘ್ರ ಜನರೇಟರ್‌: ವಿದ್ಯುತ್‌ ಇಲ್ಲದಾಗ ಆಸ್ಪತ್ರೆಯ ಎಲ್ಲಾ ವಿಭಾಗಕ್ಕೆ ಪರ್ಯಾಯವಾಗಿ ವಿದ್ಯುತ್‌ ಒದಗಿಸಲು ಜನರೇಟರ್‌ ಇಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಡಾ| ಎಲ್.ಹನುಮನಾಯ್ಕ ಸದ್ಯಕ್ಕೆ 30 ಕೆವಿ ಜನರೇಟರ್‌ ಇದ್ದು, ಅದು ಸಾಕಾಗುತ್ತಿಲ್ಲ. 60 ಕೆವಿ ಜನರೇಟರ್‌ ಕೊಡಿಸಲು ಒಂದು ಬ್ಯಾಂಕಿಗೆ ಕೋರಿಕೆ ಸಲ್ಲಿಸಲಾಗಿದ್ದು, ಶೀಘ್ರವೆ 6 ಲಕ್ಷ ರೂ. ವೆಚ್ಚದ ಜನರೇಟರ್‌ ಕೊಡಿಸುವ ನಿರೀಕ್ಷೆ ಇದೆ ಎಂದರು. ಈ ಕುರಿತು ಫಾಲೋ ಅಪ್‌ ಮಾಡಲು ಶೈಲಜಾ ಬಸವರಾಜ್‌ ಸೂಚಿಸಿದರು.

Advertisement

ಮತ್ತೂಬ್ಬ ಸ್ತ್ರೀ ರೋಗ ತಜ್ಞರಿಗಾಗಿ ಎನ್‌ಎಚ್ಎಂ ಯೋಜನೆಯಡಿ ಕೋರಲಾಗಿದೆ. ಕೋರಿಕೆ ಈಡೇರುವ ಸಾಧ್ಯತೆ ಇದೆ ಎಂದು ಡಾ.ಹನುಮನಾಯ್ಕ ಹೇಳಿದರು.

ಒಂದು ಆಸ್ಪತ್ರೆ ಎರಡು ಕ್ಯಾಂಟೀನ್‌: ನಾನು ತಿಂಗಳಿಗೆ 12,500 ರೂ. ಬಾಡಿಗೆ ನೀಡಿ ಕ್ಯಾಂಟೀನ್‌ ನಡೆಸುತ್ತಿದ್ದೇನೆ. ಆದರೆ ಆಸ್ಪತ್ರೆ ಆವರಣದಲ್ಲಿರುವ ಜೆರಾಕ್ಸ್‌ ಅಂಗಡಿ ವ್ಯಕ್ತಿ ಚಹಾ, ಬ್ರೆಡ್‌ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಷ್ಟವಾಗುತ್ತಿದೆ ಎಂದು ಕ್ಯಾಂಟೀನ್‌ ಮಾಲೀಕ ಶೈಲಜಾರ ಗಮನ ಸೆಳೆದಾಗ, ಜೆರಾಕ್ಸ್‌ ಅಂಗಡಿಯವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಬಂದಿದೆ. ಇನ್ನೂ ಎರಡು ಪ್ರಶಸ್ತಿಗಳು ಸಲ್ಲಲಿವೆ. ಆಸ್ಪತ್ರೆ ಪ್ರಾಂಗಣದಲ್ಲಿ ಸಸಿಗಳನ್ನು ನೆಡಲಾಗಿದೆ. 47 ಲಕ್ಷ ರೂ. ವೆಚ್ಚದ ತೀವ್ರ ಕ್ಷಯರೋಗ ಪತ್ತೆ ಯಂತ್ರ ಬಂದಿದೆ. 11 ಲಕ್ಷ ರೂ. ವೆಚ್ಚದ ಎಕ್ಸ್‌ರೇ ಯಂತ್ರ ಮಂಜೂರಾಗಿದೆ ಎಂದು ಡಾ| ಹನುಮನಾಯ್ಕ ಶೈಲಜಾರ ಗಮನ ಸೆಳೆದರು. ನಂತರ ಶೈಲಜಾ ಬಸವರಾಜ್‌ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಿರಿಯ ಆರೋಗ್ಯ ಸಹಾಯಕ ಎಂ.ವಿ.ಹೊರಕೇರಿ, ಸಿಬ್ಬಂದಿಗಳಾದ ಅಶ್ರಫ್‌, ರೂಪಾ, ದೊಡ್ಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next