Advertisement

ಗಂಗನರಸಿ ಗ್ರಾಮದಲ್ಲಿ ಅಪರೂಪದ ಶಾಪಾಶಯ ಶಾಸನ ಪತ್ತೆ

12:21 PM Jan 17, 2020 | Naveen |

ಹರಿಹರ: ಸಂಶೋಧಕರಾದ ನಗರದ ಉಪನ್ಯಾಸಕ ಡಾ|ರವಿಕುಮಾರ ಕೆ. ನವಲಗುಂದ ಮತ್ತು ಹಿ.ಗು.ದುಂಡ್ಯಪ್ಪ ಕ್ಷೇತ್ರಕಾರ್ಯದ ನಿಮಿತ್ತ ತಾಲೂಕಿನ ಗಂಗನರಸಿ ಗ್ರಾಮದ ಕಾಗೆ ಬಸಪ್ಪನ ದೇವಾಲಯಕ್ಕೆ ಭೇಟಿ ಕೊಟ್ಟಾಗ ಅಪರೂಪದ ಶಾಸನವೊಂದು ಪತ್ತೆಯಾಗಿದೆ.

Advertisement

ದೇವಾಲಯದ ಕಾಗೆಬಸಪ್ಪ ಎಂಬ ಹೆಸರಿನ ನಂದಿಕಂಬದ ಎಡಪಕ್ಕದಲ್ಲಿ 22 ಸಾಲಿನ ಶಾಸನವಿದ್ದು, ಬಹುತೇಕ ಅಕ್ಷರಗಳು ಸವೆದು ಹಾಳಾಗಿವೆ. ಈ ಶಾಸನವು 13 ನೆಯ ಶತಮಾನದಲ್ಲಿ ರಚನೆಯಾಗಿದ್ದು, ದೇವಗಿರಿ ಯಾದವ (ಸೇವುಣ) ರ ರಾಜಸತ್ತೆಯನ್ನು ಉಲ್ಲೇಖೀಸುತ್ತದೆ. ಈ ಮನೆತನದ ರಾಜ ಯಾದವ ನಾರಾಯಣ ಪ್ರೌಢಪ್ರತಾಪ ಚಕ್ರವರ್ತಿ ಬಿರುದಾಂಕಿತ ರಾಮಚಂದ್ರ ರಾಜ್ಯಭಾರ ಮಾಡುವಾಗ, ಎಂದರೆ ಕ್ರಿ.ಶ 1277 ರಲ್ಲಿ ಪ್ರಸ್ತುತ ಶಾಸನ ನಿರ್ಮಾಣವಾಗಿದೆ.

ಈ ವೇಳೆ ರಾಯ ಎಂಬುವನು ಮಹಾಮಂಡಳೇಶ್ವರ ವೃತ್ತಿಯನ್ನು ನಿಭಾಯಿಸುತ್ತಿದ್ದ. ಶಾಸನದಲ್ಲಿ ಕಲಿನಾಥ (ಕಲ್ಲೇಶ್ವರ) ದೇಗುಲದ ಉಲ್ಲೇಖವಿದ್ದು, ಆ ದೇವಾಲಯಕ್ಕೆ ಭೂದಾನ ಕೊಡಲಾಗಿದೆ. ದಾನಕೊಟ್ಟ ವ್ಯಕ್ತಿಯ ಉಲ್ಲೇಖ ದೊರೆಯದಾಗಿದೆ. ಅಂತಾಗಿ ಶಾಸನ ಸಹಿತ ನಂದಿಸ್ತಂಭವನ್ನು ಆ ದೇಗುಲದ ಮುಂದೆ ನಿಲ್ಲಿಸಲಾಗಿತ್ತು. ಸದ್ಯ ಕಲಿನಾಥ ದೇವಾಲಯ ಎಲ್ಲಿತ್ತು ಎಂದು ತಿಳಿಯದಾಗಿದ್ದು ನಂದಿಸ್ತಂಭ ಮಾತ್ರ ಉಳಿದಿದೆ.

ಈ ಕಂಬವನ್ನೇ ಕಾಗೆಬಸಪ್ಪ ಎಂಬ ದೇವರನ್ನಾಗಿ ಮಾಡಿ, ಅದಕ್ಕೊಂದು ದೇವಾಲಯವನ್ನು ಕಟ್ಟಿ ಗ್ರಾಮಸ್ಥರು ನಿತ್ಯ ಪೂಜೆಗೈಯ್ಯುತ್ತಿದ್ದಾರೆ. ಕಾಗೆಬಸಪ್ಪನ ಕುರಿತಾಗಿ ಊರಲ್ಲಿ ಹಲವಾರು ಐತಿಹ್ಯಗಳು ಚಾಲ್ತಿಯಲ್ಲಿವೆ. ಶಾಸನ ಸ್ಮಾರಕದಲ್ಲಿ ಇರುವ ಕಾಗೆ ಮತ್ತು ಬಸವಣ್ಣನನ್ನು ಸಮೀಕರಿಸಿ ಕಾಗೆಬಸಪ್ಪ ಎಂಬ ವಿಶೇಷಣ ಬಂದಿರುವುದು ದಿಟ. ಜನರು ನಂಬಿದಂತೆ ಇಲ್ಲಿರುವುದು ಸಾಮಾನ್ಯ ಕಾಗೆಯಲ್ಲ. ಅದು ಶನಿದೇವರ ವಾಹನ ಕಾಗೆ. ಶನಿದೇವರು ಹಿಡಿದುಕೊಂಡ ಖೀ ಆಕಾರದ ಕೋಲಿನ ಮೇಲೆ ಅದು ಕುಳಿತಿರುವುದನ್ನು ಕಾಣಬಹುದು. ಈ ಚಿತ್ರಣ ಇಲ್ಲಿ ತರಲು ಬಹುಮುಖ್ಯ ಕಾರಣ ಶಾಪಾಶಯ.

ಶಾಪಾಶಯ ಎಂಬುದು ದಾನಕೊಟ್ಟ ಭೂಮಿಯ ಅಪಹರಣ ಮತ್ತು ರಕ್ಷಣೆ ಮಾಡಿದ್ದರ ಫಲಾಪಲ ಸೂಚಿಸುವ ಉಕ್ತಿ. ಬಹುತೇಕ ಶಾಸನಗಳಲ್ಲಿ ಅಕ್ಷರ ರೂಪದಲ್ಲಿರುವ ಶಾಪಾಶಯವು ಈ ಶಾಸನದಲ್ಲಿ ಶಿಲ್ಪದ ರೂಪದಲ್ಲಿ ಒಡಮೂಡಿರುವುದು ವಿಶೇಷ. ಶನಿ ಮತ್ತು ಅವನ ವಾಹನದ ಚಿತ್ರಣದ ಉದ್ದೇಶ ಸ್ಪಷ್ಟವಾಗಿದೆ.

Advertisement

ಅದೇನೆಂದರೆ ದೇವಾಲಯದ ಭೂಮಿಯನ್ನು ಯಾರು ಕಬಳಿಸುತ್ತಾರೋ ಅಥವಾ ಅಪಹರಿಸುತ್ತಾರೋ ಅವರಿಗೆ ನಿರಂತರವಾಗಿ ಶನಿಯು ಹೆಗಲ ಮೇಲೆರುತ್ತಾನೆ. ಅವರು ಉದ್ಧಾರವಾಗುವುದಿಲ್ಲ ಎಂಬುದು ಮತ್ತು ಅವರು ಪ್ರಾಣಾಪಘಾತಕ್ಕೂ ತುತ್ತಾಗುವರು ಎಂದು ಮೇಲೆ ಕತ್ತಿ ಗುರುತನ್ನು ತೋರಿಸಿ ಶೃತಪಡಿಸಲಾಗಿದೆ. ಈ ದಾನಭೂಮಿಯ ರಕ್ಷಣೆ ಮಾಡಿದವರಿಗೆ ಹನುಮನ ಕೃಪೆ ಇರುವುದೆಂದು ಸ್ಮಾರಕದ ಇಕ್ಕೆಲಗಳಲ್ಲಿ ಹನುಮಂತನ ಶಿಲ್ಪ ಕೆತ್ತನೆ ಮಾಡುವ ಮೂಲಕ ಖಚಿತಪಡಿಸಲಾಗಿದೆ.

ಪ್ರಸ್ತುತ ಶಾಸನದಿಂದ ಗಂಗನರಸಿ ಗ್ರಾಮದ ಪ್ರಾಚೀನ ಹೆಸರು ಅರಸಿಕೆರೆ ಎಂದು ತಿಳಿದು ಬರುತ್ತದೆ. ಸದ್ಯದ ಶಾಸನದಲ್ಲಿ ಸುಂದರವಾದ ವರ್ಣನಾ ಕಂದಪದ್ಯಗಳಿದ್ದು ಅರಸಿಕೆರೆಯ (ಗಂಗನರಸಿ) ಕಲಿದೇವಸ್ವಾಮಿಯನ್ನು ಮತ್ತು ದಾನಭೂಮಿಯನ್ನು ಕೊಟ್ಟ ವ್ಯಕ್ತಿಯನ್ನು ಹಾಡಿ ಹೊಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next