Advertisement

ನಿಧಿ ಎಂದು ನಂಬಿ ಬೇಸ್ತು ಬಿದ್ದರು!

03:38 PM Aug 18, 2019 | Naveen |

ಹರಿಹರ: ನಿಧಿ ಇದೆಯೆಂಬ ಶಂಕೆಯಿಂದ ರಾತ್ರಿಯಿಡೀ ಪೊಲೀಸರು ಕಾವಲು ಕಾದು, ಬೆಳಿಗ್ಗೆ ಅಧಿಕಾರಿಗಳು, ನೂರಾರು ಜನರ ಸಮ್ಮುಖದಲ್ಲಿ ತೆರೆದು ನೋಡಿದರೆ ಅಲ್ಲಿ ಹಳೆಯ ಹಗೇವು ಪತ್ತೆಯಾಗಿದೆ.

Advertisement

ಈ ಘಟನೆ ನಡೆದಿದ್ದು, ನಗರದ ತೆಗ್ಗಿನಕೇರಿ ಸಮೀಪದ ಬಡಗೇರ ಓಣಿಯಲ್ಲಿ ಶುಕ್ರವಾರ ತಡರಾತ್ರಿ. ನಗರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ್‌ ಭೂತೆ ಇವರ ಮನೆ ಹಿಂದಿನ ಖಾಲಿ ಜಾಗದಲ್ಲಿ ವಿದ್ಯುತ್‌ ಅರ್ಥಿಂಗ್‌ ಮಾಡಲು ಶುಕ್ರವಾರ ಕಾರ್ಮಿಕರು ಗುಂಡಿ ತೋಡುತ್ತಿದ್ದಾಗ, ಹಾರೆ ಹೊಡೆತಕ್ಕೆ ಟಣ್‌…. ಟಣ್‌… ಶಬ್ದ ಕೇಳಿಸಿದೆ. ಒಳಗೆನೋ ಇದೆ ಎಂದು ಅರಿತು ಅಕ್ಕಪಕ್ಕದ ಜನರೆಲ್ಲಾ ಸೇರಿದ್ದಾರೆ. ಕೊನೆಗೆ ನಿಧಿ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನೋಡ ನೋಡುತ್ತಿದ್ದಂತೆಯೇ ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಕುತೂಹಲಗೊಂಡು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ. ಕಾರ್ಮಿಕರು ಇದರ ಉಸಾಬರಿಯೇ ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳಿಗೂ ಸುದ್ದಿ ಮುಟ್ಟಿ, ಕೆಲ ಗಂಟೆಗಳಲ್ಲೆ ಎಸ್ಪಿ ಸೂಚನೆ ಮೇರೆಗೆ ನಗರ ಠಾಣೆ ಪಿಎಸ್‌ಐ ಪ್ರಭು ಕೆಳಗಿನಮನಿ ಸ್ಥಳಕ್ಕೆ ಬಂದು ಪರಿಶೀಲಿಸಿ, ಇದು ಪುರಾತತ್ವ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದ್ದು ಬಂದೋಬಸ್ತ್ ಒದಗಿಸುವುದಷ್ಟೆ ನಮ್ಮ ಕೆಲಸ ಎಂದು ಭದ್ರತೆ ಒದಗಿಸಿದ್ದಾರೆ.

ನಂತರ ರಾತ್ರಿ 11 ಗಂಟೆ ವೇಳೆಗೆ ತಹಶೀಲ್ದಾರ್‌ ರೆಹನ್‌ ಪಾಷಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಬೆಳಿಗ್ಗೆ ಉತVನನ ಮಾಡೋಣ ಎಂದು ತಿಳಿಸಿದರು. ರಾತ್ರಿ ಇಡೀ ಇಬ್ಬರು ಪೊಲೀಸರು ಕಾವಲು ಕಾದರು. ಶನಿವಾರ ಬೆಳಗ್ಗೆ 12ಕ್ಕೆ ತಹಶೀಲ್ದಾರ್‌ ಸೇರಿದಂತೆ ಕಂದಾಯ, ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ನಗರಸಭೆ ಪೌರ ಕಾರ್ಮಿಕರು ಉತ್ಖನನ ನಡೆಸಲು ಮುಂದಾದರು. ಎಲ್ಲ ಅಗೆದು ನೋಡಿದರೇ ಹಳೆ ಕಾಲದ ಹಗೇವು ಪತ್ತೆಯಾಗಿದೆ. ರಾತ್ರಿಯಿಡೀ ಕಾಯ್ದ ಜನರು, ಅಧಿಕಾರಿಗಳು ಕೊನೆಗೆ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next