ಹರಿಹರ: ವಿಜಯ ದಶಮಿ ನಿಮಿತ್ತ ನಗರದಲ್ಲಿ ಮಂಗಳವಾರ ಸಂಜೆ ನಡೆದ ದಸರಾ ಮಹೋತ್ಸವದ ಬೃಹತ್ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿ ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ.ಹರೀಶ್, ಉತ್ಸವ ಸಮಿತಿ ಅಧ್ಯಕ್ಷ ಶಂಕರ್ ಖಟಾವಕರ್ ಹಾಗೂ ಗಣ್ಯರು ಮಹೋತ್ಸವಕ್ಕೆ ಚಾಲನೆ ನೀಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಗೆ ದೇವಿ ಮೂರ್ತಿ ಅಂಬಾರಿ ಹೊತ್ತ ಆನೆ ಮೆರುಗು ನೀಡಿತ್ತು. ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ಶಿವ ತಾಂಡವ ನೃತ್ಯ ತಂಡ, ಪುರವಂತರ ತಂಡ, ಬೊಂಬೆ ಕುಣಿತ, ಕೋಲು ಕುಣಿತ, ಕಲಾವಿದ ಕಾಳಿಂಗ ನಾಗರಾಜ್ ತಂಡದ ಮಹಿಷಾಸುರ ಮರ್ದಿನಿ ರೂಪಕ, ಕುದುರೆ ಕುಣಿತ, ಮಂಗಳ ವಾದ್ಯ, ಡಿಜೆ ಸೇರಿದಂತೆ 16ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಜನತೆ ರಸ್ತೆಯುದ್ದಕ್ಕೂ ನಿಂತು ಮೆರವಣಿಗೆ ವೀಕ್ಷಿಸಿದರು.
ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ವಾಗೀಶಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಉತ್ಸವ ಸಮಿತಿಯ ಟಿ.ಜೆ.ಮುರಿಗೇಶಪ್ಪ, ನಾಗಮಣಿ ಶಾಸ್ತ್ರಿ, ಮಹದೇವಪ್ಪ ಗೌಡ್ರು, ಕೆ.ಶಿವಪ್ರಕಾಶ ಶಾಸ್ತ್ರಿ, ಮಾಲತೇಶ್ ಭಂಡಾರೆ, ಅಜಿತ್ ಸಾವಂತ್, ಪರಶುರಾಮ ಕಾಟ್ವೆ, ಎಂ.ನಾಗೇಂದ್ರಪ್ಪ, ಜಿ.ನಾಗೇಂದ್ರಪ್ಪ, ರಾಜು ರೋಖಡೆ, ರಾಘವೇಂದ್ರ ದೀಕ್ಷಿತ್, ಎಚ್.ಸಿ.ಕೀರ್ತಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ನಗರಸಭಾ ಸದಸ್ಯ ಸಿದ್ದೇಶ್, ರೇವಣಸಿದ್ದಪ್ಪ ಅಮರಾವತಿ, ವಿಜಯಕುಮಾರ್ ಪುರವಂತರ್, ಕರಿಬಸಪ್ಪ ಕಂಚಿಕೇರಿ, ಎಂ.ಆರ್.ಅಲಿ, ರವಿ ಹೋವಳೆ, ತಹಸೀಲ್ದಾರ್ ರೆಹಾನ್ ಪಾಷಾ, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮಿ, ಮತ್ತಿತರರಿದ್ದರು. ನಂತರ ಹಳೆಯ ವಾಟರ್ ವರ್ಕ್ಸ್ ಬಳಿಯ ಜೋಡು ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಬನ್ನಿ ಮುಡಿಯಲಾಯಿತು.