ಹರಿಹರ: ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಡಿ.15ರಿಂದ ಜ.13ರವರೆಗಿನ ಸುಮಾರು ಒಂದು ತಿಂಗಳವ ರೆಗೆ ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ ಗಾಡಿ ಸಂಚಾರ ರದ್ದುಪಡಿಸಲಾಗಿದೆ. ಅಲ್ಲದೆ ಹರಿಹರ-ಹೊಸಪೇಟೆ ಪ್ಯಾಸೆಂಜರ್ ಗಾಡಿ ಹರಿಹರದ ಬದಲಿಗೆ ದಾವಣಗೆರೆಯಿಂದ ಸಂಚಾರ ಆರಂಭಿಸಲಿದೆ.
ಹರಿಹರ ರೈಲ್ವೆ ನಿಲ್ದಾಣದವರೆಗೆ ಈಗಾಗಲೆ ರೈಲ್ವೆ ಹಳಿಗಳ ಡಬ್ಲಿಂಗ್ ಕಾರ್ಯ ಮುಗಿದಿದ್ದರೂ, ಬಾಕಿ ಉಳಿದಿದ್ದ ನಿಲ್ದಾಣದಲ್ಲಿನ ಯಾರ್ಡ್‌ಗಳಲ್ಲಿ ಹಳಿಗಳ ಮರು ವಿನ್ಯಾಸ ಮಾಡುವ ಕಾಮಗಾರಿ ನಿಮಿತ್ತ ಈ ಬದಲಾವಣೆ ಮಾಡಲಾಗಿದೆ ಎಂದು ನಿಲ್ದಾಣದ ಹಿರಿಯ ವ್ಯವಸ್ಥಾಪಕ ಪ್ಯಾಟಿ ತಿಳಿಸಿದ್ದಾರೆ.
ಪ್ರತಿ ದಿನ ಹರಿಹರ ನಿಲ್ದಾಣದಿಂದ ಬೆಳಗ್ಗೆ 7.15ಕ್ಕೆ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಹಾಗೂ ಚಿತ್ರದುರ್ಗದಿಂದ ಸಂಜೆ 6.10ಕ್ಕೆ ಬಿಟ್ಟು ರಾತ್ರಿ 8.55ಕ್ಕೆ ಹರಿಹರಕ್ಕೆ ತಲುಪುತ್ತಿದ್ದ ಪ್ಯಾಸೆಂಜರ್ ರೈಲಿನ ಸಂಚಾರ ಒಂದು ತಿಂಗಳು ಕಾಲ ರದ್ದುಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 6.30ಕ್ಕೆ ಹರಿಹರ ನಿಲ್ದಾಣದಿಂದ ಹೊಸಪೇಟೆಗೆ ಹೊರಡುತ್ತಿದ್ದ ರೈಲು ಬೆಳಗ್ಗೆ 7ಕ್ಕೆ ದಾವಣಗೆರೆ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ನಂತರ ಅಮರಾವತಿ ನಿಲ್ದಾಣಕ್ಕೆ ಬಂದು ಹರಪನಹಳ್ಳಿ ಕಡೆಗೆ ಸಂಚರಿಸಲಿದೆ. ಅದೇ ರೀತಿ ಹೊಸಪೇಟೆಯಿಂದ ಹರಿಹರಕ್ಕೆ ಬರುತ್ತಿದ್ದ ರೈಲು ಅಮರಾವತಿ ಮೂಲಕ ದಾವಣಗೆರೆಗೆ
ತಲುಪಿ ಅಲ್ಲಿಯೇ ನಿಲುಗಡೆಯಾಗಲಿದೆ. ಡಬ್ಲಿಂಗ್ ಕಾಮಗಾರಿ ನಿಮಿತ್ತ ನಗರದ ರೈಲ್ವೆ ನಿಲ್ದಾಣದಲ್ಲಿ ಇನ್ನೊಂದು ಹೊಸ ಪ್ಲಾಟ್‌ಫಾರಂ ನಿರ್ಮಾಣ ಹಾಗೂ ಎರಡು ಮತ್ತು ಮೂರನೆ ಪ್ಲಾಟ್‌ಫಾರಂ ವಿಸ್ತರಣೆಯಾಗಲಿದೆ. ಎರಡನೇ ಪ್ಲಾಟ್‌ಫಾರಂ ಈಗ 285 ಮೀ ಉದ್ದವಿದ್ದು, ಒಂದನೆ ಪ್ಲಾಟ್‌ಫಾರಂನಂತೆಯೆ 370 ಮೀ ವರೆಗೆ ವಿಸ್ತರಣೆ ಮಾಡಲಾಗುತ್ತದೆ. ಜೊತೆಗೆ ನಿಲ್ದಾಣದಲ್ಲಿ ಯಾರ್ಡ್ ಸೇರಿದಂತೆ ಒಟ್ಟು ಏಳು ಹಳಿಗಳಿವೆ. ಈ ಪೈಕಿ ರೈಲುಗಳ ಸಂಚಾರಕ್ಕಾಗಿ ಎರಡು ಹಳಿಗಳನ್ನು ಉಳಿಸಿಕೊಂಡು ಉಳಿದ ಐದು ಹಳಿಗಳನ್ನು ತೆರವುಗೊಳಿಸಲಾಗುತ್ತದೆ. ನಿಲ್ದಾಣದ ಏಳು ಹಳಿಗಳ ಜೊತೆಗೆ ಇನ್ನೊಂದು ಹೊಸ ಳಿಯನ್ನು ನಿರ್ಮಿಸಿ ಯಾರ್ಡ್‌ನ ಹಳಿಗಳ ಮರುವಿನ್ಯಾಸ ನಡೆಯಲಿದೆ ಎಂದು ಪ್ಯಾಟಿ ಹೇಳಿದ್ದಾರೆ.