ಹರಿಹರ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ನಗರದ ಹೊರವಲಯದ ಗಂಗಾನಗರ ಮತ್ತು ದೇವಸ್ಥಾನ ರಸ್ತೆಯ ಕೊಳಚೆ ಪ್ರದೇಶದ ಬಡವರಿಗೆ ಶುಕ್ತವಾರ ಬಿಜೆಪಿ ವತಿಯಿಂದ ದಾಸೋಹ ನಡೆಯಿತು.
ದಾಸೋಹ ಕಾರ್ಯಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ ನೀಡಿ ಮಾತನಾಡಿ, ಪಕ್ಷದ ಕಾರ್ಯಕರ್ತರೆಲ್ಲಾ ಸೇರಿ ಪ್ರಾಯೋಗಿಕವಾಗಿ ಈ ಕಾರ್ಯ ಕೈಗೊಂಡಿದ್ದಾರೆ. ಮುಂದೆ ಇದೆ ರೀತಿ ಊಟದ ವ್ಯವಸ್ಥೆ ಮಾಡಬೇಕೆ ಅಥವಾ ಮನೆ ಮನೆಗೆ ಪ್ಯಾಕೆಟ್‌ನಲ್ಲಿ ಊಟ ಅಥವಾ ಆಹಾರ ಪದಾರ್ಥಗಳ ಕಿಟ್ ನೀಡಬೇಕೇ ಎಂದು ನಿರ್ಧರಿಸಲಾಗುವುದು ಎಂದರು.
ಈಗಾಗಲೇ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 5.4 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಿದ್ದೇನೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಪಡಿತರ ಚೀಟಿ ಇಲ್ಲದವರಿಗೆ ಆಹಾರ ಧಾನ್ಯ ಪೂರೈಸುವ ಯಾವುದೇ ಯೋಜನೆಯಿಲ್ಲ, ಆದರೆ ಪರಸ್ಥಳದವರು ಯಾರೇ ಇದ್ದರೂ ಅವರಿಗೆ ಊಟ ಇಲ್ಲವೆ ಆಹಾರ ಪದಾರ್ಥಗಳನ್ನು ತಾಲ್ಲೂಕು ಆಡಳಿತದಿಂದ ಒದಗಿಸಲಾಗುವುದು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮನೆಯಲ್ಲಿಯೇ ಇದ್ದು ಕೋವಿಡ್ ಮಾರಿಯನ್ನು ಹಿಮ್ಮೆಟ್ಟಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕೋರಿದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಶಿವಪ್ರಸಾದ್, ಪೌರಾಯುಕ್ತೆ ಎಸ್. ಲಕ್ಷ್ಮೀ, ಪಿಎಸ್‌ಐಗಳಾದ ರವಿಕುಮಾರ್, ಶೈಲಶ್ರೀ ಇತರರು ಇದ್ದರು.