ಕರುನಾಡ ಸಂಸ್ಕೃತಿಯನ್ನು ದಾಸರ, ಶರಣರ ಕೊಡುಗೆಯಿಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ. ದಾರ್ಶನಿಕರು, ದಾಸರಿಂದ ಹೊರಹೊಮ್ಮಿದ ಚಿಂತನೆಗಳು ಮನೆಮನೆಗೂ ಕೀರ್ತನೆಯ ರೂಪದಲ್ಲಿ ತಲುಪಿ ಇಂದಿಗೂ ದಾರಿದೀಪವಾಗಿ ಸಾರ್ಥಕತೆಯ ದಿಕ್ಕನ್ನು ತೋರುತ್ತಿವೆ. ಇಂತಹ ಅಮೂಲ್ಯವಾದ ತತ್ವ ಸಂಪತ್ತನ್ನು ಸಮಾಜಕ್ಕೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ ಸಂಸ್ಥೆಗಳಲ್ಲಿ “ಹರಿದಾಸ ಸಂಪದ ಟ್ರಸ್ಟ್ ‘ ಕೂಡಾ ಒಂದು. ಕಳೆದ 17 ವರ್ಷಗಳಿಂದ ಸಂಸ್ಥೆ “ಹರಿದಾಸ ಹಬ್ಬ’ವನ್ನು ಆಚರಿಸಿಕೊಂಡು ಬರುತ್ತಿದೆ. ನಾಡಿನ ಪ್ರಸಿದ್ಧ ವಿದ್ವಾಂಸರು, ಗಾಯಕರು, ಚಿಂತಕರು ಭಾಗವಹಿಸಿದ್ದಾರೆ. ಈ ಬಾರಿಯ ಹರಿದಾಸ ಹಬ್ಬವನ್ನು ಪೇಜಾವರ ಅಧೋಕ್ಷಜ ಮಠದ ಹಿರಿಯ ಪೀಠಾಧೀಶರಾದ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಾಸ ಸಾಹಿತ್ಯ ದೀಪಿಕಾ ಎನ್ನುವ ಜಾಲತಾಣವೂ ಲೋಕಾರ್ಪಣೆಗೊಳ್ಳಲಿದೆ. ಪದ್ಮಶ್ರೀ ಪುರಸ್ಕೃತ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅಂದು ದಾಸವಾಣಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
“ಹರಟೆ’ ಖ್ಯಾತಿಯ ವೈ.ವಿ.ಗುಂಡೂರಾವ್‌ರವರ ನಿರೂಪಣೆಯಲ್ಲಿ ವಿಚಾರಗೋಷ್ಠಿಯೊಂದು ಇದೇ ವೇದಿಕೆಯಲ್ಲಿ ನಡೆಯಲಿದೆ.
ಮೇ 3ರಂದು ಪೇಜಾವರ ಮಠದ ಕಿರಿಯ ಮಠಾಧೀಶರಾದ ವಿಶ್ವಪ್ರಸನ್ನತೀರ್ಥರ ನೇತೃತ್ವದಲ್ಲಿ “ದಾಸಪದಹಾರ’ ಎಂಬ ಅಪರೂಪದ ದಾಸರ ಪದಗಳ ಮಾಲೆ ಗಾಯನ ನಡೆಯಲಿದೆ. ಕಡೆದಿನ ಮೇ 4ರಂದು ತಮಿಳು ಚಿತ್ರರಂಗದ ಹೆಸರಾಂತ ಗಾಯಕ ಮತ್ತು ರಾಗ ಸಂಯೋಜಕ, ಕನ್ನಡಿಗರೇ ಆದ ವಿ.ವಿ ಪ್ರಸನ್ನ ಅವರಿಂದ ಗಾಯನ ಕಾರ್ಯಕ್ರಮವಿರಲಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವುದರಿಂದ ಅವರು ಉತ್ಸುಕರಾಗಿದ್ದಾರೆ. ಅಂದೇ ಸಂಜೆ 4.30ರಿಂದ ಗಾಂಧಿ ಬಜಾರ್‌ನಿಂದ ಬೆಂಗಳೂರು ಗಾಯನ ಸಮಾಜದ ತನಕ ಪಾದಯಾತ್ರೆ ನರೆವೇರಲಿದೆ.
ಎಲ್ಲಿ?: ಗಾಯನ ಸಮಾಜ, ಕೆ.ಆರ್ ರಸ್ತೆ
ಯಾವಾಗ?: ಏ. 29- ಮೇ 4, ಸಂಜೆ 5.30- 8.30
ಪ್ರವೇಶ: ಉಚಿತ