Advertisement
ಅಕ್ಷರ ಸಂತನೆಂದೇ ಜನಮಾನಸದಲ್ಲಿ ಮನ್ನಣೆ ಗಳಿಸಿರುವ ಪದ್ಮಶ್ರೀ ಹರೇಕಳ ಹಾಜಬ್ಬ ನಾಡು ಕಂಡ ಓರ್ವ ಅಪೂರ್ವ ಸಾಧಕ.ಮಂಗಳೂರು ತಾಲೂ ಕಿನ ಹರೇಕಳ ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಹಾಜಬ್ಬ ಅವರು ಬಡತನದಿಂದ ಶಾಲೆಯ ಮೆಟ್ಟಿಲು ಹತ್ತಲಾರದೆ ಜೀವನೋಪಾಯಕ್ಕೆ ಬುಟ್ಟಿಯಲ್ಲಿ ಕಿತ್ತಳೆ ಮಾರುವ ಕಾಯಕವನ್ನು ಕೈಗೆತ್ತಿ ಗೊಂಡರು.
ಸರಕಾರಿ ಶಾಲೆಯನ್ನು ತನ್ನ ಶಾಲೆಯಂತೆ ಪ್ರೀತಿಸುತ್ತಾ ಬಂದಿರುವ ಹಾಜಬ್ಬ ಅವರು ಶಾಲೆಯನ್ನು ಹಿರಿಯ ಪ್ರಾಥಮಿಕದವರೆಗೆ ವಿಸ್ತರಿಸಲು ಪಣತೊಟ್ಟರು. ಹಾಜಬ್ಬರ ಅವಿರತ ಶ್ರಮದಿಂದ ಇದೀಗ ಕಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ ಮಟ್ಟಕ್ಕೆ ತಲುಪಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಹಾಜಬ್ಬರದ್ದು. ಅದಕ್ಕಾಗಿ ನಿರಂತರ ಶ್ರಮಿಸುತ್ತಿರುವ ಹಾಜಬ್ಬರ ಅಕ್ಷರ ಪ್ರೀತಿ ಅನನ್ಯವಾದುದು. ಕ್ಷೀಣಿಸುತ್ತಿರುವ ಆರೋಗ್ಯ, ಪತ್ನಿಯ ಅನಾರೋಗ್ಯ, ಬಡತನ ಅವರ ಅಕ್ಷರ ಪ್ರೀತಿಗೆ ಎಂದೂ ತಡೆಯಾಗಿಲ್ಲ.
Advertisement
ಬಡತನದಿಂದ ಜೀವನೋಪಾಯಕ್ಕೆ ಕಷ್ಟ ಪಡುತ್ತಿದ್ದರೂ ಹಾಜಬ್ಬ ಅವರು ತನಗೆ ಬಂದ ಲಕ್ಷಾಂತರ ರೂ. ಪ್ರಶಸ್ತಿ ಮೊತ್ತವನ್ನು ತನ್ನ ಸ್ವಂತ ಸುಖಕ್ಕಾಗಿ ಬಳಸಲಿಲ್ಲ. ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸಿದರು. ನ್ಯೂಪಡು³ನ ಸರಕಾರಿ ಶಾಲೆಗಾಗಿ ತನ್ನ ಎಲ್ಲವನ್ನೂ ಮುಡುಪಾಗಿಟ್ಟರು. ಸುಮಾರು 70 ಲಕ್ಷ ರೂ. ದೇಣಿಗೆ- ಅನುದಾನವನ್ನು ವಿವಿಧ ಮೂಲಗಳಿಂದ ಒದಗಿಸಿ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ತನಗೆ ದೊರೆತ ಪ್ರಶಸ್ತಿಗಳ ನಗದು ಮೊತ್ತವನ್ನು ಶಾಲೆಯ ಉನ್ನತಿಗೆ ವ್ಯಯಿಸಿ ಮಾದರಿಯಾಗಿದ್ದಾರೆ. ಶಾಲೆಗೆ ಒಂದು ಎಕ್ರೆ ಮೂವತ್ತ ಮೂರೂವರೆ ಸೆಂಟ್ಸ್ ಜಮೀನು ಪಹಣಿ ಮಾಡಿಸಿದ್ದಾರೆ.
ಇದನ್ನೂ ಓದಿ:ಮುಸ್ಲಿಮೇತರರಿಗೆ ಕೌಟುಂಬಿಕ ಕಾನೂನು ಸವಲತ್ತು : ಅಬುಧಾಬಿ ಸರ್ಕಾರದಿಂದ ಮಹತ್ವದ ನಿರ್ಧಾರ
ಶಾಲೆಗಾಗಿ ಇಷ್ಟೆಲ್ಲ ಶ್ರಮವಹಿಸಿದರೂ ಅಲ್ಲಿನ ನಾಮಫಲಕದಲ್ಲಿ ಅವರ ಹೆಸರು ಹಾಕಿಸಿಲ್ಲ. ಅವರಿಗೆ ಯಾವ ಪ್ರಚಾರವೂ ಬೇಕಿಲ್ಲ. ಸಮ್ಮಾನ ಎಂದರೆ ದೂರ ಓಡುವ ಹಾಜಬ್ಬರನ್ನು ಒತ್ತಾಯದಿಂದ ಒಪ್ಪಿಸಬೇಕಾಗುತ್ತದೆ. ಲಕ್ಷಾಂತರ ರೂ. ಪ್ರಶಸ್ತಿ ಮೊತ್ತ ಲಭಿಸಿದರೂ ತನಗಾಗಿ ಮನೆ ನಿರ್ಮಿಸಲು ಹೋಗಲಿಲ್ಲ. ಇವರ ನಿಸ್ವಾರ್ಥ ಸೇವೆ, ತ್ಯಾಗವನ್ನು ಗಮನಿಸಿ ದಾನಿಗಳು ನಿರ್ಮಿಸಿಕೊಟ್ಟ ಮನೆಯಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ.
ಹಾಜಬ್ಬರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಸಂದಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ರಮಾ ಗೋವಿಂದ, ಸಂದೇಶ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಮಂಗಳೂರು, ಕುವೆಂಪು ಸೇರಿದಂತೆ ಮೂರು ವಿಶ್ವವಿದ್ಯಾನಿಲಯಗಳು ತಮ್ಮ ಪಠ್ಯದಲ್ಲಿ ಹಾಜಬ್ಬ ಸಾಧನೆಯನ್ನು ಪಾಠವಾಗಿ ಅಳವಡಿಸಿ ಅವರಿಗೆ ವಿಶೇಷ ಗೌರವ ಅರ್ಪಿಸಿದೆ. ಕರ್ನಾಟಕದಲ್ಲಿ ತುಳು ವಿಭಾಗದಲ್ಲಿ ಹಾಜಬ್ಬರ ಯಶೋಗಾಥೆ ಪಾಠವಾಗಿದೆ. ನೆರೆಯ ಕೇರಳದಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ 8ನೇ ತರಗತಿಯ ಕನ್ನಡ ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪಾಠವಾಗಿರುವುದು ಅವರ ಮೇರು ಸಾಧನೆಗೆ ಹಿಡಿದಿರುವ ಕನ್ನಡಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಾಜಬ್ಬ ಸಾಧನೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.
ನೂರಾರು ಪ್ರಶಸ್ತಿಗಳು ಒಲಿದರೂ ಲೆಕ್ಕವಿಲ್ಲದಷ್ಟು ಸಮ್ಮಾನ- ಗೌರವಗಳು ಸಂದರೂ ಹಾಜಬ್ಬ ಬದಲಾಗಲಿಲ್ಲ. ಹರೇಕಳ ಪಂಜಿ ಮಾಡಿಯ ಹಾಜಬ್ಬ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪದ್ಮಶ್ರೀ ಪ್ರಶಸ್ತಿಯನ್ನು ನ.8ರಂದು ಹೊಸದಿಲ್ಲಿಯಲ್ಲಿ ಸ್ವೀಕರಿಸುತ್ತಿದ್ದಾರೆ.
ಕಿತ್ತಳೆ ಬುಟ್ಟಿಯಲ್ಲಿ ಹುಟ್ಟಿಕೊಂಡ ಸಾಧನೆಯ ಛಲಕಿತ್ತಳೆ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಹಾಜಬ್ಬರು ಎದುರಿಸಿದ ಒಂದು ಘಟನೆ ಅವರ ಮೇಲೆ ಭಾರಿ ಪರಿಣಾಮ ಬೀರಿತು. ಹಾಜಬ್ಬರು ಎಂದಿನಂತೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಹಿಡಿದು ಮಂಗಳೂರಿನ ಬೀದಿಯಲ್ಲಿ ವ್ಯಾಪಾರಕ್ಕೆ ತೊಡಗಿದಾಗ ಅಲ್ಲಿಗೆ ಬಂದು ಇಂಗ್ಲೀಷ್ ನಲ್ಲಿ ಕಿತ್ತಳೆಯ ಬೆಲೆ ಎಷ್ಟು ಎಂದು ಕೇಳಿದರು. ಹಾಜಬ್ಬರಿಗೆ ಉತ್ತರಿಸಲಾಗಲಿಲ್ಲ. ಶಿಕ್ಷಣದ ಕೊರತೆಯ ನೋವು ಹಾಜಬ್ಬರನ್ನು ತೀವ್ರವಾಗಿ ಕಾಡಿತು. ತನ್ನಂತೆ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.ತಾನು ಎದುರಿಸಿದ ಪರಿಸ್ಥಿತಿಯನ್ನು ಅವರು ಎಂದೂ ಎದುರಿಸಬಾರದು ಎಂದು ಹಣ ಕೊಟ್ಟರು. ಊರಿಗೆ ಶಾಲೆಯ ಕನಸು ಕಂಡರು.ಕನಸನ್ನು ನನಸು ಮಾಡಿ ಧನ್ಯತೆಯ ಭಾವ ಉಂಡರು. – ಕೇಶವ ಕುಂದರ್