ದೇವನಹಳ್ಳಿ: ರೈಲ್ವೆ ಇಲಾಖೆ ನಿರ್ಮಿಸಿದ ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆ (ಅಂಡರ್‌ಪಾಸ್)ಗೆ ಸೋಮವಾರ ರಾತ್ರಿ ಮಳೆ ನೀರು ನುಗ್ಗಿದ್ದರಿಂದ ಅಂಡರ್‌ಪಾಸ್‌ನಲ್ಲಿ ಸಂಚರಿಸಲು ತೊಂದರೆಯಾದ ಹಿನ್ನಲೆಯಲ್ಲಿ ಕೂಡಲೇ ಮೇಲ್ಸೇತುವೆ ನಿರ್ಮಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಯರ್ತಿಗಾನ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ-7 ರಿಂದ ಕನ್ನಮಂಗಲ ಗೇಟ್‌ನಿಂದ ಯರ್ತಿಗಾನ ಹಳ್ಳಿಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಇಲಾಖೆ ಅಂಡರ್‌ಪಾಸ್ ನಿರ್ಮಾಣ ಮಾಡಿದ್ದು, ಈ ರಸ್ತೆಯಿಂದ ಯರ್ತಿಗಾನ ಹಳ್ಳಿ ಮಾರ್ಗವಾಗಿ ಮಲ್ಲೇನ ಹಳ್ಳಿ, ಮುತ್ತಕದ ಹಳ್ಳಿ, ಚಿಕ್ಕನ ಹಳ್ಳಿ, ಮೈಲನ ಹಳ್ಳಿ, ಬಾಗಲೂರು ಮಾರ್ಗವಾಗಿ ಬೆಂಗಳೂರು ಸಂಪರ್ಕದ ರಸ್ತೆಯಾಗಿದೆ. ಭಾರಿ ಮಳೆಯಿಂದ ಅಂಡರ್‌ಪಾಸಿನಲ್ಲಿ ಹೆಚ್ಚು ನೀರು ತುಂಬುವುದರಿಂದ ಜನ ಓಡಾಡಲು ಪರದಾಡುವಂತಾಗಿದೆ. ಕೂಡಲೇ ರೈಲ್ವೆ ಇಲಾಖೆ ಅಂಡರ್‌ಪಾಸ್ ಬದಲು ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ದೇವನಹಳ್ಳಿ , ಯಲಹಂಕ ಹಾಗೂ ಶಾಲಾ ವಾಹನಗಳು, ಖಾಸಗಿ ವಾಹನಗಳು, ದ್ವಿಚಕ್ರ ವಾಹನ ಸವಾರರು, ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶದ ರೈತಾಪಿ ಜನ ಸಂಚರಿಸಲು ಇದೇ ಬಳಸುತ್ತಿದ್ದು, ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವುದರಿಂದ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲೇ ಇರುವುದರಿಂದ ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ದೇವನಹಳ್ಳಿ ಹಾಗೂ ಇನ್ನಿತರೆ ಕಡೆಗೆ ಹೋಗಬೇಕಾದರೆ ದೊಡ್ಡಜಾಲವನ್ನು ಸುತ್ತುವರೆದು ಹೆಚ್ಚುವರಿಯಾಗಿ 7 ರಿಂದ 8 ಕಿ.ಲೋ ಮೀಟರ್ ಸುತ್ತು ಹಾಕಿಕೊಂಡು ಬರಬೇಕಾಗುವುದು ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಪಂ ಉಪಾಧ್ಯಕ್ಷರ ಹೇಳಿಕೆ: ರೈಲ್ವೆ ಇಲಾಖೆ ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಿದ್ದು, ಒಂದು ವಾಹನ ಬಂದರೆ ಇನ್ನೊಂದು ವಾಹನ ಬರುವುದಕ್ಕೆ ಕಷ್ಟವಾಗಿದೆ. ಕಾಮಗಾರಿ ಬಗ್ಗೆ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನ ವಾಗಲಿಲ್ಲ. ಶಾಲಾ ವಾಹನಗಳು ಗ್ರಾಮಕ್ಕೆ ಬಂದರು 1.5 ಕಿ.ಲೋ ಮೀಟರ್ ವರೆಗೆ ಮಕ್ಕಳು ನಡೆಯುವಂತಾಗಿದೆ. ಹಾಲು ಡೇರಿ ವಾಹನಕ್ಕೂ ತೊಂದರೆಯಾಗಿದೆ. 12 ಅಡಿಗಳಷ್ಟು ನೀರು ನಿಂತಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಇದೇ ರೀತಿ ಮುಂದುವರಿದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಅಣೇಶ್ವರ ಗ್ರಾಪಂ ಉಪಾಧ್ಯಕ್ಷ ಯರ್ತಿಗಾನ ಹಳ್ಳಿ ಶಿವಣ್ಣ ಎಚ್ಚರಿಸಿದರು.