Advertisement

ಕಾಫಿ ವಿತ್‌ ಕರಣ್‌ ವಿವಾದ: ಹಾರ್ದಿಕ್‌, ರಾಹುಲ್‌ಗೆ ನೋಟಿಸ್‌

12:30 AM Jan 10, 2019 | |

ಸಿಡ್ನಿ/ನವದೆಹಲಿ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಭಾಗವಹಿಸುವ ಮೂಲಕ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌.ರಾಹುಲ್‌ ಭಾರೀ ವಿವಾದಕ್ಕೆ ತುತ್ತಾಗಿದ್ದಾರೆ. ಅವರು ಈ ಶೋನಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಮಾತುಗಳನ್ನಾಡಿದ್ದಾರೆಂದು ವಿವಾದ ಸೃಷ್ಟಿಯಾದ ಕಾರಣ, ಬಿಸಿಸಿಐ ಇಬ್ಬರಿಗೂ ಕಾರಣ ಕೇಳಿ ಬುಧವಾರ ನೋಟಿಸ್‌ ಜಾರಿ ಮಾಡಿದೆ. ಇದಕ್ಕೆ 24 ಗಂಟೆಯೊಳಗಾಗಿ ಉತ್ತರಿಸಬೇಕೆಂದು ಆದೇಶಿಸಿದೆ.

Advertisement

ತನಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿದೆ, ಇದನ್ನೆಲ್ಲ ಅಪ್ಪ ಅಮ್ಮನಿಗೆ ಹೇಳಿಯೇ ಮಾಡುತ್ತೇನೆಂದೂ ಹೇಳಿಕೊಂಡಿರುವ ಹಾರ್ದಿಕ್‌, ಸಂದರ್ಶಕ ಕರಣ್‌ ಕೇಳಿದ ಇನ್ನೊಂದು ಪ್ರಶ್ನೆಗೂ ಲೀಲಾಜಾಲವಾಗಿ ಉತ್ತರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಕ್ಲಬ್‌ಗಳಲ್ಲಿ ನೀವೇಕೆ ಮಹಿಳೆಯರ ಹೆಸರನ್ನು ಕೇಳುವುದಿಲ್ಲ ಎಂಬ ಪ್ರಶ್ನೆಗೆ, ಮಹಿಳೆಯರು ಹೇಗೆ ಮುಂದುವರಿಯುತ್ತಾರೆಂದು ನೋಡುವ ಆಸೆ ನನಗೆ. ನಾನು ಸ್ವಲ್ಪ ಹಿನ್ನೆಲೆಯಲ್ಲಿದ್ದುಕೊಂಡು ಅವರು ಹೇಗೆ ಹೆಜ್ಜೆ ಇಡುತ್ತಾರೆಂದು ನೋಡಬೇಕೆನಿಸುತ್ತದೆ ಎಂದಿದ್ದರು. ಅಲ್ಲದೇ ಸಚಿನ್‌ ತೆಂಡುಲ್ಕರ್‌ಗಿಂತ ವಿರಾಟ್‌ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದಿರುವುದೂ ಭಾರೀ ವಿವಾದ ಸೃಷ್ಟಿಸಿದೆ.

ಈ ವಿವಾದಗಳನ್ನು ಗಮನಿಸಿದ ನಂತರ ಬಿಸಿಸಿಐ ನೋಟಿಸ್‌ ನೀಡಿದೆ. ಇಂತಹ ಖಾಸಗಿ ವಾಹಿನಿಗಳ ಶೋಗಳಲ್ಲಿ ಬಿಸಿಸಿಐ ಕ್ರಿಕೆಟಿಗರು ಭಾಗವಹಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧಾರಕ್ಕೆ ಬರುವ ಸಾಧ್ಯತೆಯೂ ಇದೆ. ಕ್ರಿಕೆಟ್‌ಗೆ ಸಂಬಂಧಿಸದ ಶೋಗಳಾದರೆ ಆಟಗಾರರು ಯಾಕೆ ಭಾಗವಹಿಸಬಾರದು ಎಂದೂ ಬಿಸಿಸಿಐನ ಮೂಲವೊಂದು ಪ್ರಶ್ನಿಸಿದೆ.

ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಹಾರ್ದಿಕ್‌ ಪಾಂಡ್ಯ ಮತ್ತೆ ಭಾರತ ಕ್ರಿಕೆಟ್‌ ತಂಡವನ್ನು ಪ್ರವೇಶಿಸಿದ್ದಾರೆ. ಸದ್ಯ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ತಂಡವನ್ನು ಕೂಡಿಕೊಂಡರೂ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಮುಂದಿನ ಏಕದಿನ ಪಂದ್ಯಗಳಲ್ಲಿ ಅವರು ಆಡುವ ಸಾಧ್ಯತೆಯಿದೆ.

ಕ್ಷಮೆ ಕೇಳಿದ ಹಾರ್ದಿಕ್‌ ಪಾಂಡ್ಯ
ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ನಡೆಸಿಕೊಡುವ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ತಾವು ನೀಡಿದ ಹೇಳಿಕೆಗಳು ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಕ್ಷಮೆ ಕೇಳಿದ್ದಾರೆ. ತನಗೆ ಯಾರದೇ ಭಾವನೆ ನೋಯಿಸುವ ಉದ್ದೇಶವಿರಲಿಲ್ಲ. ಆ ಶೋ ಇದ್ದಿದ್ದೇ ಹಾಗೆ. ಅದಕ್ಕೆ ತಕ್ಕಂತೆ ತಾನು ಪ್ರತಿಕ್ರಿಯೆ ನೀಡಿದೆ ಅಷ್ಟೇ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಕ್ರಿಕೆಟಿಗ ಕರ್ನಾಟಕದ ಕೆ.ಎಲ್‌.ರಾಹುಲ್‌ ಮಾತ್ರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next