ರಾಜ್
ಕೋಟ್: ಪಾಟಿದಾರ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರ ಫಾರ್ಚೂನರ್ ಎಸ್‌ಯುವಿ ವಾಹನ ರಾಜ್‌ಕೋಟ್ – ಛೋಟಿಲಾ ಹೆದ್ದಾರಿಯಲ್ಲಿ ಬೈಕಿಗೆ ಢಿಕ್ಕಿ ಹೊಡೆದ ಘಟನೆ ವರದಿಯಾಗಿದೆ.
ಈ ರಸ್ತೆ ಅಪಘಾತದಲ್ಲಿ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಟೇಲ್ ಅವರು ನಿಕಟವರ್ತಿಗಳೊಂದಿಗೆ ತಮ್ಮ ಫಾರ್ಚೂನರ್ ಎಸ್‌ಯುವಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ನಡೆದಿದ್ದು ಅವರ ವಾಹನದ ಮುಂಭಾಗಕ್ಕೆ ಹಾನಿಯುಂಟಾಗಿದೆ.
ರಸ್ತೆ ಅಪಘಾತದ ಬಳಿಕ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದ ರಾಜಕೋಟ್ ಪೊಲೀಸರೊಂದಿಗೆ ಹಾರ್ದಿಕ್ ಪಟೇಲ್ ಮತ್ತು ಸಹವರ್ತಿಗಳು ವಾಗ್ವಾದಕ್ಕೆ ಇಳಿದಿರುವುದು ವರದಿಯಾಗದೆ.
ಘಟನೆಯ ಬಳಿಕ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಬೇರೊಂದು ಕಾರಿನಲ್ಲಿ ಅಹ್ಮದಾಬಾದಿಗೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಪಟೇಲ್ ಅವರು ನಿನ್ನೆ ಗುರುವಾರವಷ್ಟೇ ತಾನು ಇದೇ ಮಾರ್ಚ್ 12ರಂದು ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿ ಪ್ರಕಟಿಸಿದ್ದರು. ಕಾಂಗ್ರೆಸ್ ಟಿಕೆಟ್‌ನಲ್ಲಿ ತಾನು ಗುಜರಾತಿನ ಜಾಮ್‌ನಗರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದಾಗಿ ಅವರು ಹೇಳಿದ್ದರು.
ಜಾಮ್‌ನಗರ್ ಕ್ಷೇತ್ರವನ್ನು ಪ್ರಕೃತ ಬಿಜೆಪಿಯ ಪೂನಮ್‌ಬೆನ್ ಮಾದಾಮ್ ಅವರು ಪ್ರತಿನಿಧಿಸುತ್ತಿದ್ದಾರೆ.