Advertisement

ಹಾರ್ದಿಕ್‌ ಪಟೇಲ್‌ಗೆ ಪಾನಗೋಷ್ಠಿ ಶಾಕ್‌

06:55 AM Nov 15, 2017 | Team Udayavani |

ಅಹ್ಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ದಿನಕ್ಕೊಂದು ಮಹತ್ವದ ವಿದ್ಯಮಾನಗಳು ಜರಗುತ್ತಿವೆ. 

Advertisement

ಸೋಮವಾರವಷ್ಟೇ ಹಾರ್ದಿಕ್‌ ಪಟೇಲ್‌ ಇದ್ದಾರೆ ಎಂದು ಹೇಳಲಾದ ಸೆಕ್ಸ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದೀಗ ಹಾರ್ದಿಕ್‌ ಪಟೇಲ್‌ ಮತ್ತವರ ಸಂಗಡಿಗರು ಪಾನಗೋಷ್ಠಿ ಮಾಡುತ್ತಿರುವ ವಿಡಿಯೋವನ್ನು ಹರಿಬಿಡಲಾಗಿದೆ. ಗುಜರಾತ್‌ನಲ್ಲಿ ಮದ್ಯ ನಿಷೇಧವಿದ್ದು, ಈ ಮೂಲಕ ಹಾರ್ದಿಕ್‌ ಪಟೇಲ್‌ಗೆ ಮುಜುಗರಕ್ಕೆ ಸಿಲುಕಿಸುವಂಥ ವಿಡಿಯೋ ಇದಾಗಿದೆ.

ಹೊಸ ವಿಡಿಯೋ ಕ್ಲಿಪ್‌ನಲ್ಲಿ ಹಾರ್ದಿಕ್‌ ಪಟೇಲ್‌ ಅವರನ್ನು ಹೋಲುವ ವ್ಯಕ್ತಿಯೊಬ್ಬರು ತಮ್ಮ ಅನುಯಾಯಿಗಳ ಜತೆ ಕುಡಿಯುತ್ತಾ ಕುಳಿತಿರುವ ದೃಶ್ಯಗಳಿವೆ ಎಂದು ಹೇಳಲಾಗಿದ್ದು, ಇದೇ ವರ್ಷ ಮೇ ತಿಂಗಳಲ್ಲಿ ನಡೆದಿದ್ದ ಪಟೇಲ್‌ ಸಮುದಾಯದ ಮೀಸಲಾತಿ ರ್ಯಾಲಿಯ ನಂತರ ಇದನ್ನು ಚಿತ್ರೀಕರಿಸಿದ್ದಾಗಿ ಹೇಳಲಾಗಿದೆ. 

ರಾಷ್ಟ್ರವಾದವೇ ಮಂಚೂಣಿ: ಮುಂದಿನ ತಿಂಗಳು ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಜನರು ಜಾತಿ, ಧರ್ಮಗಳ ಎಲ್ಲೆ ದಾಟಿ ಬಿಜೆಪಿ ಪರವಾಗಿಯೇ ಮತ ಚಲಾಯಿಸಲಿದ್ದಾರೆ ಎಂದು ಗುಜರಾತ್‌ ಸಿಎಂ ವಿಜಯ್‌ ರುಪಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೇ ವರ್ಷ ನಡೆದಿದ್ದ ಉತ್ತರ ಪ್ರದೇಶ ಚುನಾವಣೆ ವೇಳೆ ಅಲ್ಲಿ ಮೇಳೈಸಿದ್ದ ರಾಷ್ಟ್ರವಾದಕ್ಕಿಂತ ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿನ ರಾಷ್ಟ್ರವಾದ ಹೆಚ್ಚು ಮೇಲ್ಪಂಕ್ತಿಯಲ್ಲಿ ಇರಲಿದೆ ಎಂದಿದ್ದಾರೆ.

ಚಿಹ್ನೆ ಸೃಷ್ಟಿಸಿದ ಆತಂಕ
ಮುಸ್ಲಿಮರೇ ಹೆಚ್ಚಾಗಿರುವ ಅಹ್ಮದಾಬಾದ್‌ನ ಪಾಲ್ಡಿ ಪ್ರಾಂತ್ಯದಲ್ಲಿರುವ ಅಮನ್‌ ಕಾಲೋನಿ, ನಾಶೇಮನ್‌ ಅಪಾರ್ಟ್‌ಮೆಂಟ್‌, ಟ್ಯಾಗೋರ್‌ ಫ್ಲಾಟ್ಸ್‌, ಆಶಿಯಾನಾ ಅಪಾರ್ಟ್‌ಮೆಂಟ್‌, ತಕ್ಷಿಲಾ ಕಾಲೋನಿಗಳ ಬಳಿ ಇಂಗಿಷ್‌ನ “ಎಕ್ಸ್‌’ ಅಕ್ಷರ ಹೋಲುವ ಕೆಂಪು ಬಣ್ಣದ ಗುರುತು ಹಾಕಲಾಗಿದ್ದು, ಇದು ಮುಸ್ಲಿಮರ ಕಾಲೋನಿ ಗಳನ್ನು ಗುರುತಿಸುವ ಯತ್ನವಿರಬಹುದು ಎಂದು ಇಲ್ಲಿನ ನಿವಾಸಿಗಳು ಭೀತಿಗೊಂಡಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿ ಎ.ಕೆ. ಸಿಂಗ್‌, ಪೌರ ಕಾರ್ಮಿಕರು ತಾವು ತ್ಯಾಜ್ಯ ಕೊಂಡೊಯ್ಯಬೇಕಾದ ಕಾಲೋನಿಗಳನ್ನು ಹೀಗೆ ಗುರುತು ಮಾಡಿದ್ದಾರೆ. ಕೆಲ ಹಿಂದೂಗಳ ಕಾಲೋನಿಗಳ ಗೇಟ್‌, ಗೋಡೆಗಳ ಮೇಲೂ ಗುರುತು ಹಾಕಲಾಗಿದೆ ಎಂದು ತಿಳಿಸಿದ್ದಾರೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next