Advertisement

ಭಾರತ-ನ್ಯೂಜಿಲ್ಯಾಂಡ್‌ ಟಿ20 ಟ್ರೋಫಿ ಅನಾವರಣ; ಮುಂದಿನ ವಿಶ್ವಕಪ್‌ಗೆ ಕಾರ್ಯಯೋಜನೆ: ಪಾಂಡ್ಯ

11:34 PM Nov 16, 2022 | Team Udayavani |

ವೆಲ್ಲಿಂಗ್ಟನ್‌: ರೊಂಯ್ಯನೆ ಬೀಸುತ್ತಿದ್ದ ಗಾಳಿಯ ನಡುವೆ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಟಿ20 ಸರಣಿ ಟ್ರೋಫಿ ಅನಾವರಣ, ಬಳಿಕ ನಾಯಕರಾದ ಕೇನ್‌ ವಿಲಿಯಮ್ಸನ್‌-ಹಾರ್ದಿಕ್‌ ಪಾಂಡ್ಯ ಅವರಿಂದ ವೆಲ್ಲಿಂಗ್ಟನ್‌ ಬೀದಿಯಲ್ಲಿ “ಕ್ರೊಕೊಡೈಲ್‌ ಬೈಕ್‌’ ಸವಾರಿ, ಪತ್ರಿಕಾಗೋಷ್ಠಿ, ಟೀಮ್‌ ಇಂಡಿಯಾದಿಂದ ಕಠಿನ ಅಭ್ಯಾಸ… ಹೀಗೆ ಎರಡು ದಿನ ಮೊದಲೇ ಸರಣಿಗೆ ಸಿದ್ಧತೆ ಆರಂಭಗೊಳ್ಳುವ ಮೂಲಕ ಟೀಮ್‌ ಇಂಡಿಯಾ ನೂತನ ನಿರೀಕ್ಷೆಗಳನ್ನು ಬಿತ್ತಿದೆ.

Advertisement

ಮಾಧ್ಯಮದವರೊಂದಿಗೆ ಮಾತಾಡಿದ ಭಾರತ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ, “2024ರಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಈ ಸರಣಿಯಿಂದಲೇ ಸಿದ್ಧತೆ, ಕಾರ್ಯಯೋಜನೆ ಆರಂಭಗೊಳ್ಳಲಿದೆ’ ಎಂದರು.

ಇತ್ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಶುಕ್ರವಾರ ಇಲ್ಲಿ ನಡೆಯಲಿದೆ. ಎರಡೂ ತಂಡಗಳು ಟಿ20 ವಿಶ್ವಕಪ್‌ ಸೆಮಿಫೈನಲ್‌ ಹಂತದಲ್ಲಿ ಹೊರಬಿದ್ದ ಕಾರಣ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಇತ್ತಂಡಗಳ ಸ್ಥಿತಿಯೂ ಒಂದೇ ಆಗಿದೆ. ಆದರೆ ಭಾರತ ತನ್ನ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಂಡರೆ, ನ್ಯೂಜಿಲ್ಯಾಂಡ್‌ ಸೀನಿಯರ್‌ ಆಟಗಾರರಾದ ಮಾರ್ಟಿನ್‌ ಗಪ್ಟಿಲ್‌ ಮತ್ತು ಟ್ರೆಂಟ್‌ ಬೌಲ್ಟ್ಗೆ ವಿಶ್ರಾಂತಿ ನೀಡಿ ಹೋರಾಟಕ್ಕಿಳಿಯಲಿದೆ.

“ಹೌದು. ವಿಶ್ವಕಪ್‌ ಸಾಧನೆ ನಿರಾಸೆ ಮೂಡಿಸಿದೆ. ಆದರೆ ನಾವು ವೃತ್ತಿಪರ ಆಟಗಾರರು. ಇದನ್ನೆಲ್ಲ ನಿಭಾಯಿಸಿಕೊಂಡು ಮುಂದು ವರಿಯಲಿದ್ದೇವೆ. ತಪ್ಪುಗಳನ್ನು ತಿದ್ದಿಕೊಂಡು ನಡೆದರೆ ಧನಾತ್ಮಕ ಫ‌ಲಿತಾಂಶ ಸಾಧ್ಯ. ಮುಂದಿನ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಈ ಸರಣಿಯೇ ಮೊದಲ ಮೆಟ್ಟಿಲಾಗಬೇಕು, ಇಲ್ಲಿಂದಲೇ ಸೂಕ್ತ ಕಾರ್ಯಯೋಜನೆ ರೂಪಿಸಿಕೊಂಡು ಮುಂದಡಿ ಇಡಬೇಕು’ ಎಂಬುದಾಗಿ ಹಾರ್ದಿಕ್‌ ಪಾಂಡ್ಯ ಹೇಳಿದರು.

“ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಇನ್ನೂ 2 ವರ್ಷ ಇದೆ. ಈ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್‌ ಆಡಲಿಕ್ಕಿದೆ. ಎಲ್ಲರಿಗೂ ಧಾರಾಳ ಅವಕಾಶ ಲಭಿಸಲಿದೆ. ನಮ್ಮ ಈ ತಂಡದ ತುಂಬ ಯುವ ಆಟಗಾರರೇ ತುಂಬಿದ್ದಾರೆ. ಎಲ್ಲರೂ ಖುಷಿ ಖುಷಿಯಲ್ಲಿದ್ದಾರೆ. ಇವರ ಭವಿಷ್ಯ ಮುಂದೆ ನಿರ್ಧಾರಗೊಳ್ಳಲಿದೆ’ ಎಂದರು.

Advertisement

2024ರ ಟಿ20 ವಿಶ್ವಕಪ್‌ ಪಂದ್ಯಾವಳಿ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.


ಹಾರಿಹೋದ ಟ್ರೋಫಿ!
ಟಿ20 ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೆಲ್ಲಿಂಗ್ಟನ್‌ನಲ್ಲಿ ತೀವ್ರ ಗಾಳಿ ಬೀಸುತ್ತಿತ್ತು. ಇದರ ರಭಸಕ್ಕೆ ಟೇಬಲ್‌ ಮೇಲೆ ಇರಿಸಲಾಗಿದ್ದ ಟ್ರೋಫಿ ಹಾರಿ ಹೋಯಿತು. ಕೂಡಲೇ ಇದನ್ನು ಕೇನ್‌ ವಿಲಿಯಮ್ಸನ್‌ “ಕ್ಯಾಚ್‌’ ಮಾಡಿದರು. ಉರುಳಿ ಬೀಳುತ್ತಿದ್ದ ಟೇಬಲ್‌ ಅನ್ನು ಹಾರ್ದಿಕ ಪಾಂಡ್ಯ ತಡೆದು ನಿಲ್ಲಿಸಿದರು. ಈ ರೀತಿ ಔಪಚಾರಿಕ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ವೆಲ್ಲಿಂಗ್ಟನ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್‌
ವೆಲ್ಲಿಂಗ್ಟನ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ 3 ಟಿ20 ಪಂದ್ಯಗಳನ್ನಾಡಿವೆ. ನ್ಯೂಜಿಲ್ಯಾಂಡ್‌ ಎರಡರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿತ್ತು, ಭಾರತ ಇದನ್ನು ಸೂಪರ್‌ ಓವರ್‌ನಲ್ಲಿ ಜಯಿಸಿತು.

ಇಲ್ಲಿ ಇತ್ತಂಡಗಳ ನಡುವೆ ಮೊದಲ ಪಂದ್ಯ ಏರ್ಪಟ್ಟದ್ದು 2009ರಲ್ಲಿ. ಸರಣಿಯ ಈ ದ್ವಿತೀಯ ಪಂದ್ಯವನ್ನು ಡೇನಿಯಲ್‌ ವೆಟರಿ ಪಡೆ 5 ವಿಕೆಟ್‌ಗಳಿಂದ ಜಯಿಸಿತ್ತು. ಯುವರಾಜ್‌ ಸಿಂಗ್‌ ಅವರ ಅರ್ಧ ಶತಕದಿಂದ (50) ಧೋನಿ ಬಳಗ 6ಕ್ಕೆ 149 ರನ್‌ ಮಾಡಿದರೆ, ನ್ಯೂಜಿಲ್ಯಾಂಡ್‌ ಅಂತಿಮ ಎಸೆತದಲ್ಲಿ ಗೆಲುವಿನ ರನ್‌ ಬಾರಿಸಿತ್ತು. 69 ರನ್‌ ಹೊಡೆದ ಬ್ರೆಂಡನ್‌ ಮೆಕಲಮ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸರಿಯಾಗಿ 10 ವರ್ಷಗಳ ಬಳಿಕ (2019) ಇಲ್ಲಿ ಇತ್ತಂಡಗಳ ನಡುವಿನ 2ನೇ ಟಿ20 ಮುಖಾಮುಖೀ ಏರ್ಪಟ್ಟಿತು. ನಾಯಕರಾಗಿದ್ದವರು ರೋಹಿತ್‌ ಶರ್ಮ ಮತ್ತು ಕೇನ್‌ ವಿಲಿಯಮ್ಸನ್‌. ಕಿವೀಸ್‌ 6ಕ್ಕೆ 219 ರನ್‌ ರಾಶಿ ಹಾಕಿದರೆ, ಭಾರತ 19.2 ಓವರ್‌ಗಳಲ್ಲಿ 139ಕ್ಕೆ ಕುಸಿಯಿತು.

ಇತ್ತಂಡಗಳು ವೆಲ್ಲಿಂಗ್ಟನ್‌ನಲ್ಲಿ ಕೊನೆಯ ಸಲ ಮುಖಾಮುಖಿಯಾದದ್ದು 2020ರಲ್ಲಿ. ಈ ಪಂದ್ಯ ಟೈಯಲ್ಲಿ ಅಂತ್ಯ ಕಂಡಿತ್ತು. ಭಾರತದ 8ಕ್ಕೆ 165 ರನ್‌ ಸವಾಲಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್‌ 7ಕ್ಕೆ 165 ರನ್‌ ಮಾಡಿತು.

ಬುಮ್ರಾ ಎಸೆದ ಸೂಪರ್‌ ಓವರ್‌ನಲ್ಲಿ ನ್ಯೂಜಿ ಲ್ಯಾಂಡ್‌ ಒಂದಕ್ಕೆ 13 ರನ್‌ ಮಾಡಿತು. ಚೇಸಿಂಗ್‌ ವೇಳೆ ರಾಹುಲ್‌ ಮೊದಲೆರಡು ಎಸೆತಗಳಲ್ಲೇ 10 ರನ್‌ ಬಾರಿಸಿದರು (6, 4). 3ನೇ ಎಸೆತದಲ್ಲಿ ಔಟಾದರು. 4-5ನೇ ಎಸೆತಗಳಲ್ಲಿ ಕೊಹ್ಲಿ 2 ಹಾಗೂ 4 ರನ್‌ ಬಾರಿಸಿ ಭಾರತದ ಗೆಲುವನ್ನು ಸಾರಿದರು.

Advertisement

Udayavani is now on Telegram. Click here to join our channel and stay updated with the latest news.

Next