ಮುಂಬೈ: ಹಠಾತ್ ನಾಯಕತ್ವ ಬದಲಾವಣೆ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಗುಜರಾತ್ ನಲ್ಲಿ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈಗೆ ಮರಳಿದ್ದು, ಮತ್ತು ಅಚ್ಚರಿಯ ರೀತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ಕಳೆದುಕೊಂಡಿದ್ದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.
ಈ ಎಲ್ಲಾ ಘಟನೆಗಳು ನಡೆದು ತಿಂಗಳ ಬಳಿಕ ಇದೀಗ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮುಖಾಮುಖಿಯಾಗಿದ್ದಾರೆ. ಐಪಿಎಲ್ 17ನೇ ಸೀಸನ್ ಆರಂಭಕ್ಕೆ ಕೆಲವು ದಿನಗಳು ಬಾಕಿ ಇರುವಂತೆ ನೆಟ್ಸ್ ಸೆಶನ್ ನಲ್ಲಿ ಜೋಡಿ ಭೇಟಿಯಾಗಿದೆ.
ಅಂತಿಮ ನೆಟ್ ಸೆಶನ್ ನಲ್ಲಿ ರೋಹಿತ್ ರನ್ನು ಕಂಡ ಹಾರ್ದಿಕ್ ಪಾಂಡ್ಯ ಬಂದು ತಬ್ಬಿಕೊಂಡಿದ್ದಾರೆ. ಮುಂಬೈ ಫ್ರಾಂಚೈಸಿಯು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 24ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ರೋಹಿತ್ ಅವರು ನನ್ನ ಹಿರಿಯಣ್ಣ ಇದ್ದಂತೆ ಎಂದಿದ್ದರು.
“ಅದು ಭಿನ್ನವಾಗಿರುವುದಿಲ್ಲ, ಏಕೆಂದರೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಅವರಿದ್ದಾರೆ. ಅಲ್ಲದೆ ಅವರು ಭಾರತ ತಂಡದ ನಾಯಕರಾಗಿದ್ದಾರೆ, ಅದು ನನಗೆ ಸಹಾಯ ಮಾಡುತ್ತದೆ. ಏಕೆಂದರೆ ಈ ತಂಡ, ಅವರ ನಾಯಕತ್ವದಲ್ಲಿ ಅವರು ಏನು ಸಾಧಿಸಿದ್ದಾರೆ, ಇಂದಿನಿಂದ, ಅವರು ಸಾಧಿಸಿದ್ದನ್ನು ನಾನು ಮುಂದುವರಿಸಲು ಬಯಸುತ್ತೇನೆ” ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.