Advertisement

ಪ್ರಮಾಣಕ್ಕೂ ಮೊದಲು ಕಾಡಿದ ವರುಣ

10:16 AM May 24, 2018 | Team Udayavani |

ಬೆಂಗಳೂರು: ನಗರದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದ ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೂ ಆತಂಕ ತಂದೊಡ್ಡಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದೂವರೆ ಗಂಟೆ ಸುರಿದ ಕಾರಣ ವಿಧಾನಸೌಧ ಆವರಣದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ನಿರ್ಮಿಸಿದ್ದ ವೇದಿಕೆ ಹಾಗೂ ಗಣ್ಯರು ಮತ್ತು ಸಾರ್ವಜನಿಕರಿಗೆ ಹಾಕಲಾಗಿದ್ದ ಆಸನಗಳು ತೊಯ್ದವು.

Advertisement

ಸಮಾರಂಭ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆ ಯಿಂದ ಆಗಮಿಸಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಮಳೆಯಿಂದ ತಪ್ಪಿಸಿಕೊಳ್ಳಲು ವಿಧಾನಸೌಧ ಮುಂಭಾಗ ಅಳವಡಿಸಿದ್ದ ನಾಯಕರ ಕಟೌಟ್‌ ಮತ್ತು ಬ್ಯಾನರ್‌ ತೆಗೆದು ಅದನ್ನೇ ಕೊಡೆಯಂತೆ ಬಳಸಿದರು.

ಮಳೆ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸಮಾರಂಭ ವಿಧಾನಸೌಧ ಮುಂಭಾಗದಿಂದ ಬಾಂಕ್ವೆಟ್‌ ಸಭಾಂಗಣಕ್ಕೆ ಸ್ಥಳಾಂತರ ಮಾಡುವ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸಿದರು. ಆದರೆ, 3.30 ರ ವೇಳೆಗೆ ಮಳೆ ಬಿಡುವು ಕೊಟ್ಟಿದ್ದರಿಂದ ನಿಟ್ಟುಸಿರು ಬಿಟ್ಟ ಅಧಿಕಾರಿಗಳು ವಿಧಾನಸೌಧ ಮುಂಭಾಗವೇ ಕಾರ್ಯಕ್ರಮಕ್ಕೆ ತೀರ್ಮಾನಿಸಿದ್ದರು.

ಮಳೆ ಹಿನ್ನೆಲೆಯಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಕೋಲಾರ -ಚಿಕ್ಕಬಳ್ಳಾಪುರ, ರಾಮನಗರ- ತುಮಕೂರು ಭಾಗಗಳಿಂದ ಬರುತ್ತಿದ್ದ ಕಾರ್ಯಕರ್ತರಿಗೂ ಮಳೆ ನಿರಾಸೆಯುಂಟು ಮಾಡಿತು. ಮಳೆ ಹಿನ್ನಲೆಯಲ್ಲಿ ಹೊರವಲಯ ಹಾಗೂ ನಗರ ಮಧ್ಯ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನಗಳು ವಿಧಾನಸೌಧದತ್ತ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಮಾರ್ಗಮಧ್ಯೆಯೇ ಕಾರ್ಯಕರ್ತರಿದ್ದ ವಾಹನಗಳು ಸಿಲುಕುವಂತಾಯಿತು.

ಇದರ ನಡುವೆಯೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಜಯಘೋಷ ಮುಗಿಲು ಮುಟ್ಟಿತ್ತು. 

Advertisement

ಡಾ.ಜಿ.ಪರಮೇಶ್ವರ್‌ ಅವರು ಪ್ರಮಾಣ ಸ್ವೀಕರಿಸಿದಾಗಲೂ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ ವ್ಯಕ್ತಪಡಿಸಿದರು. ಆದರೆ, ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧ, ರಾಜಭವನ, ಕೆ.ಆರ್‌. ವೃತ್ತ, ಅರಮನೆ ರಸ್ತೆ, ಕಬ್ಬನ್‌ ಪಾರ್ಕ್‌ ಸೇರಿದಂತೆ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ 2ರಿಂದ 3 ಗಂಟೆ ಕಾಲ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. 

ಈಮಧ್ಯೆ, ನಗರದಲ್ಲಿ ಬುಧವಾರ ಆಲಿಕಲ್ಲು ಸಮೇತವಾಗಿ ಸುರಿದ ಭಾರಿ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳಲ್ಲಿ ಮಳೆನೀರು ಮನೆಗಳಿಗೆ ನುಗ್ಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ.

ಬುಧವಾರ ಮಧ್ಯಾಹ್ನ ಆರಂಭವಾದ ಧಾರಾಕಾರ ಮಳೆ ಸಂಜೆವರೆಗೆ ಸುರಿದ ಪರಿಣಾಮ ಹಲವಾರು ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು, ಮರಗಳು ರಸ್ತೆಗೆ ಉರುಳಿದ ಪರಿಣಾಮ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ವಾಹನ ಸವಾರರಿಗೆ ಎದುರಾಗಿತ್ತು. 

ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಟ್ರೀನಿಟಿ ವೃತ್ತ, ಇಂದಿರಾನಗರ 80 ಅಡಿ ರಸ್ತೆ, ಕೆ.ಆರ್‌.ವೃತ್ತ, ಲಿ ಮೆರಿಡಿಯನ್‌, ಸ್ಯಾಂಕಿ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಕಾರ್ಪೊರೇಷನ್‌ ವೃತ್ತ ಸೇರಿದಂತೆ ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು. 

ಮಳೆಯೊಂದಿಗೆ ಬೀಸಿದ ಜೋರಾದ ಗಾಳಿಗೆ 20ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದರಿಂದ ದಟ್ಟಣೆ ಉಂಟಾಗಿತ್ತು. ಇಂದಿರಾನಗರ, ಜೀವನಹಳ್ಳಿ, ಸಿಎಂಆರ್‌ ಕಾನೂನು ಕಾಲೇಜು, ವೈಎಂಬಿಆರ್‌ ಬಡಾವಣೆ, ಕುಮಾರಸ್ವಾಮಿ ಬಡಾವಣೆ ಸೇರಿ ಹಲವೆಡೆ ಮಳ ಬಿದ್ದದ್ದವು.
 
ಹೊಟೆಲ್‌-ರೆಸಾರ್ಟ್‌ಗೆ ತೆರಳಿದ ಕೈ-ದಳ ಶಾಸಕರು ಕುಮಾರಸ್ವಾಮಿ ಹಾಗೂ ಪರಮೇಶ್ವರ್‌ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರು ಮತ್ತೆ ಹೋಟೆಲ್‌ ಹಾಗೂ ರೆಸಾರ್ಟ್‌ಗೆ ತೆರಳಿದ್ದಾರೆ. ಮೇ 25 ರಂದು ಬಹುಮತ ಸಾಬೀತು ಪಡಿಸಲು ದಿನಾಂಕ ನಿಗದಿಯಾಗಿರುವುದರಿಂದ ಅಲ್ಲಿಯವ ರೆಗೂ ಎಲ್ಲ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳಲು ಎರಡೂ ಪಕ್ಷಗಳ ನಾಯಕರು ತೀರ್ಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಶಾಸಕರನ್ನು ಬಹುಮತ ಸಾಬೀತು ಪಡಿಸುವವರೆಗೂ ಹೋಟೆಲ್‌ ಹಾಗೂ ರೆಸಾರ್ಟ್‌ ನಲ್ಲಿಯೇ ಇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ನಂತರ ಖಾಸಗಿ ಬಸ್‌ನಲ್ಲಿ ಕಾಂಗ್ರೆಸ್‌ ಶಾಸಕರನ್ನು ಹೋಟೆಲ್‌ಗೆ ಹಾಗೂ ಜೆಡಿಎಸ್‌ ಶಾಸಕರನ್ನು ರೆಸಾಟ್‌ಗೆ ಕರೆದೊಯ್ಯಲಾಯಿತು. 

ಚಾಲುಕ್ಯ ವೃತ್ತದಿಂದ ನಡೆದು ಬಂದ ದೀದಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲುಕ್ಯ ಸರ್ಕಲ್‌ನಿಂದ ವಿಧಾನಸೌಧದ ಮುಂಭಾಗದ ವೇದಿಕೆವರೆಗೂ ನಡೆದುಕೊಂಡು ಬಂದ ಪ್ರಸಂಗ ನಡೆಯಿತು. ಬೇರೆ ಬೇರೆ ರಾಜ್ಯದ ಗಣ್ಯರೆಲ್ಲರೂ ಏಕ ಕಾಲಕ್ಕೆ ವಿಧಾನಸೌಧಕ್ಕೆ ಆಗಮಿಸಿದ್ದರಿಂದ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಸ್ವಲ್ಪ ಹೊತ್ತು ಟ್ರಾμಕ್‌ ಜಾಮ್‌ ಆಯಿತು. ಈ ಸಂದರ್ಭದಲ್ಲಿ ವಿಧಾನಸೌಧಕ್ಕೆ ಆಗಮಿಸುತ್ತಿದ್ದ ಮಮತಾ ಬ್ಯಾನರ್ಜಿ ಚಾಲುಕ್ಯ ಸರ್ಕಲ್‌ ಬಳಿ ಕಾರಿನಿಂದ ಇಳಿದು ನಡೆದುಕೊಂಡೆ ಪ್ರಮಾಣ ವಚನ ನಡೆಯುವ ವೇದಿಕೆಗೆ ತೆರಳಿದರು. 

ಸಮ್ಮಿಶ್ರ ಸರ್ಕಾರದ ಮುಂದೆ ಅನುದಾನದ ಸವಾಲು
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆ ನಂತರ ಹುಟ್ಟಿಕೊಂಡಿರುವ ಎರಡು ಹೊಸ ವಿವಿಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಪೂರೈಸುವುದು ಸಮ್ಮಿಶ್ರ ಸರ್ಕಾರದ ಮುಂದಿರುವ ಸವಾಲುಗಳಲ್ಲಿ ಒಂದಾಗಿದೆ. 

ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಬೆಂಗಳೂರು ವಿವಿಯನ್ನು ವಿಭಜಿಸಬೇಕೆಂಬ ದಶಕದ ಹೋರಾಟದ ಫ‌ಲವಾಗಿ ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿ ಆಧರಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆಂಗಳೂರು ವಿವಿಯನ್ನು ಮೂರು ಭಾಗಗಳಾಗಿ ವಿಭಜಿಸಿ ಅಧಿಕೃತ ಆದೇಶ ಹೊರಡಿಸಿತ್ತು. ಆದರೆ, ವಿವಿಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಲಿಲ್ಲ. ಸರ್ಕಾರದ ಕೊನೇ ಬಜೆಟ್‌ನಲ್ಲಿ ಕೇಂದ್ರ ವಿವಿ ಅಭಿವೃದ್ಧಿಗೆ 17.50 ಕೋಟಿ ಮೀಸಲಿಟ್ಟರೂ ಹಣ ಬಿಡುಗಡೆ ಮಾಡಲಿಲ್ಲ.

ಸೌಲಭ್ಯಗಳೇ ಇಲ್ಲ: ಪ್ರಸ್ತುತ ಕೇಂದ್ರ ವಿವಿಗೆ ಪ್ರೊ.ಎಸ್‌. ಜಾಫೆಟ್‌ ಹಾಗೂ ಉತ್ತರ ವಿವಿಗೆ ಡಾ.ಟಿ.ಡಿ.ಕೆಂಪರಾಜು ಅವರನ್ನು ಕುಲಪತಿಗಳನ್ನಾಗಿ ನೇಮಿಸಿದ್ದು, ಮೂರೂ ವಿವಿಗಳ ಭೌಗೋಳಿಕ ವ್ಯಾಪ್ತಿ ಮತ್ತು ಒಳಪಡುವ ಕಾಲೇಜುಗಳ ಹಂಚಿಕೆ ಮಾಡಲಾಗಿದೆ. 2018-19ನೇ ಸಾಲಿನಿಂದ ಕೇಂದ್ರ ಮತ್ತು ಉತ್ತರ ವಿವಿಗಳ ಶೈಕ್ಷಣಿಕ ಚುಟುವಟಿಕೆಗಳು ಆರಂಭವಾಗಲಿವೆ. ಕಟ್ಟಡ, ಬೋಧನಾ ವರ್ಗ, ಬೋಧಕೇತರ ಸಿಬ್ಬಂದಿ ಸೇರಿ ಯಾವ ಮೂಲ ಸೌಕರ್ಯವೂ ಸಮರ್ಪಕವಾಗಿಲ್ಲ.

ಬೆಂಗಳೂರು ವಿವಿಯಿಂದ ಕ್ರೋಢೀಕರಿಸಿರುವ ಅನುದಾನದಲ್ಲಿ ಉತ್ತರ ವಿವಿಗೆ 10 ಕೋಟಿ ಹಾಗೂ ಕೇಂದ್ರ ವಿವಿಗೆ 15 ಕೋಟಿ ರೂ. ನೀಡುವಂತೆ ಸರ್ಕಾರ ಆದೇಶಿಸಿತ್ತು. ಆರ್ಥಿಕ ಸಂಕಷ್ಟದ ನಡುವೆಯೇ ವಿವಿ ಹಣ ನೀಡಿದೆ. ಎರಡೂ ವಿವಿಗಳು ಈ ಹಣವನ್ನು ಆಡಳಿತ್ಮಕ ಸಿದ್ಧತೆ, ಸಿಬ್ಬಂದಿ ವೇತನಕ್ಕೆ ಬಳಸಿಕೊಂಡಿವೆ. ಆದರೆ, ವರ್ಷವಿಡೀ ಶೈಕ್ಷಣಿಕ ಚಟುವಟಿಕೆ ನಡೆಸಲು ಗತ್ಯವಿರುವ ಅನುದಾನ ಎರಡೂ ವಿವಿ ಬಳಿ ಇಲ್ಲ.
 
ದೊಡ್ಡ ಮೊತ್ತದ ಅನುದಾನದ ನಿರೀಕ್ಷೆ: ಬೆಂಗಳೂರು ಕೇಂದ್ರ ವಿವಿ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರಕ್ಕೆ 873 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ವಿವಿಯನ್ನು ವಿಶ್ವದರ್ಜೆ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ಕೂಡ ಸಿದ್ಧಪಡಿಸಲಾಗಿದೆ. ಆದರೆ, ಸರ್ಕಾರ ಹಣ ನೀಡಿಲ್ಲ. 873 ಕೋಟಿ ನೀಡಲು ಸಾಧ್ಯವಾಗದೇ ಇದ್ದರೆ ಮೊದಲ ಹಂತದಲ್ಲಿ 500 ಕೋಟಿ ಅಥವಾ 300 ಕೋಟಿ ರೂ. ಹಾಗೂ 300 ಮಂದಿ ಬೋಧಕ, ಬೋಧಕೇತರ ಸಿಬ್ಬಂದಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಎರಡೂ ಮನವಿಗೂ ಸರ್ಕಾರ ಸ್ಪಂದಿಸಿಲ್ಲ. 

ಸರ್ಕಾರದ ಮುಂದಿರುವ ಸವಾಲು: ಬೆಂಗಳೂರು ಕೇಂದ್ರ ವಿವಿಯನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿ ರೂಪಿಸಲು ಬೇಕಾದ ಸಿದ್ಧತೆ ನಡೆಯುತ್ತಿದೆ. ಉತ್ತರ ವಿವಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಅನುದಾನ ಹಂಚಿಕೆ ಜತೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕವೂ ಆಗಬೇಕು. ಮೊದಲ ಹಂತದಲ್ಲಿ ಸರ್ಕಾರ ಎಷ್ಟು ಅನುದಾನ ನೀಡಲಿದೆ ಎಂಬುದರ ಮೇಲೆ ಹೊಸ ಎರಡು ವಿವಿಗಳ ಭವಿಷ್ಯ ನಿರ್ಧಾರವಾಗಲಿದೆ. 

ವಿಶ್ವವಿದ್ಯಾಲಯಗಳ ವ್ಯಾಪ್ತಿ ಹೀಗೆದೆ ಬೆಂಗಳೂರು ವಿವಿ: ಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಆನೇಕಲ್‌, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿನಗರ, ದಾರಸರಹಳ್ಳಿ, ಮಹಾಲಕ್ಷ್ಮೀಬಡಾವಣೆ, ಗೋವಿಂದರಾಜನಗರ, ನೆಲಮಂಗಲ, ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ. 

ಬೆಂಗಳೂರು ಕೇಂದ್ರ: ವಿವಿ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಟಾಳ,
ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್‌, ಜಯನಗರ ಮತ್ತು ರಾಜಾಜಿನಗರ ಸೇರಿದಂತೆ 13 ವಿಧಾನಸಭಾ ಕ್ಷೇತ್ರಗಳು. ಬೆಂಗಳೂರು ಉತ್ತರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ, ಸಿ.ವಿ.ರಾಮನ್‌ ನಗರ, ಕೆ.ಆರ್‌.ಪುರ, ಮಹದೇವಪುರ, ಪುಲಿಕೇಶಿನಗರ, ಸರ್ವಜ್ಞನಗರ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳು.

ಹೊಸ ಸರ್ಕಾರಕ್ಕೆ ಅನುದಾನದ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆದಿದೆ. ನಗರ ಕೇಂದ್ರಿಕೃತ ವಿವಿ ನಿರ್ಮಾಣಕ್ಕೆ  ಹೆಚ್ಚಿನ ಅನುದಾನ ಅಗತ್ಯವಿದೆ. ಉನ್ನತ ಶಿಕ್ಷಣ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. 
  ಪ್ರೊ.ಎಸ್‌.ಜಾಫೆಟ್‌, ಕೇಂದ್ರ ವಿವಿ ಕುಲಪತಿ

ಉತ್ತರ ವಿವಿ ಸಮಗ್ರ ಅಭಿವೃದ್ಧಿಗೆ 300 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹೊಸ ಸರ್ಕಾರಕ್ಕೆ ಪ್ರಸ್ತಾವನೆ
ನೀಡಲಿದ್ದೇವೆ. ಬೆಂಗಳೂರು ವಿವಿಯಿಂದ 10 ಕೋಟಿ ಅನುದಾನ ಬಂದಿರುವುದು ಹೊರತುಪಡಿಸಿ ಬೇರ್ಯಾವ ಅನುದಾನವು ಸರ್ಕಾರದಿಂದ ಬಂದಿಲ್ಲ.
  ಡಾ.ಟಿ.ಡಿ.ಕೆಂಪರಾಜು, ಉತ್ತರ ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next