Advertisement

ಜಹೀರ್‌ ಬೌಲಿಂಗ್‌ ಕೋಚ್‌ ಆಗಲಿ: ಭಜ್ಜಿ

11:51 AM May 24, 2017 | Team Udayavani |

ಹೊಸದಿಲ್ಲಿ: ಎಡಗೈ ಪೇಸ್‌ ಬೌಲರ್‌ ಜಹೀರ್‌ ಖಾನ್‌ ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಆಗಬೇಕು ಎಂಬುದಾಗಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಸಲಹೆಯೊಂದನ್ನು ಮಾಡಿದ್ದಾರೆ. ತನ್ನ ಅಭಿ ಪ್ರಾಯದ ಪ್ರಕಾರ ಜಹೀರ್‌ ಈ ಹುದ್ದೆಗೆ ಅತ್ಯುತ್ತಮ ಆಯ್ಕೆ ಆಗಲಿದ್ದಾರೆ ಎಂದಿದ್ದಾರೆ.

Advertisement

“ನನ್ನ ಪ್ರಕಾರ ಜಹೀರ್‌ ಖಾನ್‌ ಭಾರತ ತಂಡದ ಫಾಸ್ಟ್‌ ಬೌಲಿಂಗ್‌ ಕೋಚ್‌ ಆಗಲು ಅರ್ಹ ವ್ಯಕ್ತಿ. ಗ್ರೇಟ್‌ ಮೈಂಡ್‌…’ ಎಂಬುದಾಗಿ ಹರ್ಭಜನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. 

ಸದ್ಯ ಅನಿಲ್‌ ಕುಂಬ್ಳೆ ಟೀಮ್‌ ಇಂಡಿಯಾದ ಪ್ರಧಾನ ಕೋಚ್‌ ಆಗಿದ್ದಾರೆ. ಬ್ಯಾಟಿಂಗ್‌ ಕೋಚ್‌ ಆಗಿ ಸಂಜಯ್‌ ಬಂಗಾರ್‌ ಇದ್ದಾರೆ. ಆದರೆ ಬೌಲಿಂಗ್‌ ಕೋಚ್‌ ಹುದ್ದೆ ಖಾಲಿಯಾಗಿಯೇ ಇದೆ. ಕುಂಬ್ಳೆ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಜಹೀರ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಿಸುವುದು ಸೂಕ್ತ ನಿರ್ಧಾರವಾದೀತು ಎಂಬುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹರ್ಭಜನ್‌ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. 

ಜಹೀರ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದರೂ ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕರಾಗಿರುವ ಅವರು ಪ್ರಸಕ್ತ ಐಪಿಎಲ್‌ನಲ್ಲಿ 11 ಪಂದ್ಯಗಳಿಂದ 10 ವಿಕೆಟ್‌ ಹಾರಿಸಿದ್ದಾರೆ. 

38ರ ಹರೆಯದ ಜಹೀರ್‌ ಖಾನ್‌ ಭಾರತವನ್ನು 92 ಟೆಸ್ಟ್‌, 200 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, ಕ್ರಮವಾಗಿ 311 ಹಾಗೂ 282 ವಿಕೆಟ್‌ ಹಾರಿಸಿದ್ದಾರೆ. 2011ರ ವಿಶ್ವಕಪ್‌ ಗೆಲುವಿನಲ್ಲಿ ಜಹೀರ್‌ ಪಾತ್ರ ನಿರ್ಣಾಯಕವಾಗಿತ್ತು.

Advertisement

ಭಜ್ಜಿ ಟ್ವೀಟ್‌ಗೆ ಭಾರೀ ಮೆಚ್ಚುಗೆ
ಭಾರತದ ವೇಗದ ಬೌಲಿಂಗ್‌ ವಿಭಾಗಕ್ಕೆ ಜಹೀರ್‌ ಖಾನ್‌ ಅವರನ್ನು ನೇಮಿಸಿದರೆ ಅತ್ಯುತ್ತಮ ಆಯ್ಕೆಯಾಗಲಿದೆ ಎಂದು ಭಜ್ಜಿ ಟ್ವಿಟರ್‌ಗೆ 3 ಕೋಟಿಗೂ ಹೆಚ್ಚಿನ ಲೈಕ್ಸ್‌ ಬಂದಿದೆ. 5 ಲಕ್ಷಕ್ಕೂ ಹೆಚ್ಚು ರೀ ಟ್ವೀಟ್‌ ಆಗಿದೆ. 

ಇದುವರೆಗೆ ಭಾರತದ ಬೌಲಿಂಗ್‌ ಕೋಚ್‌ ಭರತ್‌ ಲಾಲ್‌ ಬದಲಿಗೆ ಬೇರೆ ಕೋಚ್‌ ಹೆಸರನ್ನು ಬಿಸಿಸಿಐ ಪ್ರಕಟಿಸಿಲ್ಲ. ಚಾಂಪಿಯನ್ಸ್‌ ಟ್ರೋಫಿ ಜೂನ್‌ ಮೊದಲ ವಾರದಿಂದ ಆರಂಭವಾಗಲಿದೆ. 

ವೇಗದ ಬೌಲಿಂಗ್‌ ವಿಭಾಗದಲ್ಲಿ ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.

ಈ ನಡುವೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಹಾಗೂ ನಾಯಕ ವಿರಾಟ್‌ ಕೊಹ್ಲಿ ಅವರು ವೇಗದ ಬೌಲಿಂಗ್‌ ಕೋಚ್‌ಗಾಗಿ ಬಿಸಿಸಿಐ ಆಡಳಿತಾಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next