ಬಾಗಲಕೋಟೆ: ನಿತ್ಯ ಟಂಟಂ ಓಡಿಸಿಕೊಂಡು ಉಪಜೀವನ ಸಾಗಿಸುತ್ತಿರುವ ನಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಟಂಟಂ ಚಾಲಕರು ಗುರುವಾರ ಸೇವೆ ಸ್ಥಗಿತಗೊಳಿಸಿ ಬೃಹತ್ ಹೋರಾಟ ನಡೆಸಿದರು.
ಬಾಗಲಕೊಟೆ, ವಿದ್ಯಾಗಿರಿ ಹಾಗೂ ನವನಗರದ ಟಂಟಂ ಚಾಲಕರು ಮೂರು ಕಡೆ ಪ್ರತಿಭಟನೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ನೂರಾರು ಸಂಖ್ಯೆಯಲ್ಲಿದ್ದ ಟಂಟಂ ಚಾಲಕರು, ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ, ಬಡವರ ಹೊಟ್ಟೆ ಮೇಲೆ ಹೊಡೆಯುವ ಪೊಲೀಸರಿಗೆ ದಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಂಟಂ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷರೂ ಆಗಿರುವ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ, ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಟಂಟಂ ಚಾಲಕರಿಗೆ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಬಿಚ್ಚಿಟ್ಟರು.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮನೆ, ಭೂಮಿ ಎಲ್ಲವನ್ನೂ ಕಳೆದುಕೊಂಡು ಸದ್ಯ ನವನಗರದಲ್ಲಿ ವಾಸವಾಗಿದ್ದೇವೆ. ನಗರದಲ್ಲಿ ಯಾವುದೇ ದೊಡ್ಡ ಕಾರ್ಖಾನೆಗಳೂ ಇಲ್ಲ. ಹೀಗಾಗಿ ಟಂಟಂ ಓಡಿಸಿಕೊಂಡೇ ಜೀವನ ನಡೆಸುತ್ತಿದ್ದೇವೆ. ಆದರೆ, ಪೊಲೀಸರು ವಿನಾಕಾರಣ ಕಿರುಕುಳ ನೀಡಿ ದಂಡ ಹಾಕುತ್ತಿದ್ದಾರೆ. ಇದರಿಂದ ಟಂಟಂ ಚಾಲಕರು ನಿತ್ಯ ಗಳಿಸಿದ ಹಣವನ್ನು ಪೊಲೀಸರಿಗೆ ದಂಡದ ರೂಪದಲ್ಲಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ನಿತ್ಯ ಉಪ ಜೀವನ ನಡೆಸುವುದೇ ಟಂಟಂ ಓಡಿಸಿದ್ದರಿಂದ ಬರುವ ಹಣದಲ್ಲೇ ನಾವೆಲ್ಲ ಜೀವನ ನಡೆಸುತ್ತೇವೆ. ಈಗ ಪೊಲೀಸರು ಕೇಸ್ ಹಾಕುತ್ತಿರುವುದರಿಂದ ತೀವ್ರ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ನಮ್ಮ ಮೇಲಾಗುತ್ತಿರುವ ಕಿರುಕುಳ ತಪ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಮೊಹ್ಮದಶಬ್ಬೀರ ಸಣ್ಣಕ್ಕಿ, ಅಡಿವೆಪ್ಪ ಕಟ್ಟಿಮನಿ, ರಮೇಶ ಹೊಸಮನಿ, ಗುರಯ್ಯ ಸಿಕ್ಕೇರಿಮಠ, ರಾಜೇಸಾಬ ನದಾಫ ಪ್ರತಿಭಟನೆಯಲ್ಲಿದ್ದರು.