ಎಚ್.ಡಿ.ಕೋಟೆ: ಮೊರಾರ್ಜಿ ವಸತಿ ಶಾಲೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿಎತ್ತಿದ ನಮ್ಮ ವಿರುದ್ಧ ವಸತಿ ಶಾಲೆಯ ಪ್ರಾಚಾರ್ಯರು ಸೇರಿದಂತೆ ಆಡಳಿತ ಮಂಡಳಿ ವಿನಾಃ ಕಾರಣ ದೂಷಣೆಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 10ನೇ ತರಗತಿ ವಿದ್ಯಾರ್ಥಿ ಶಾಲೆಯ ಮಹಡಿ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ. ತಾಲೂಕಿನ ಕೆ.ಬೆಳತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಿದ್ದಪ್ಪಾಜಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ಸಹ ವಿದ್ಯಾರ್ಥಿಗಳು ಅವನ ಮನವೊಲಿಸಿ ಕರೆತಂದಿದ್ದಾರೆ.
ನಡೆದಿದ್ದು ಇಷ್ಟು: ತಾಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಿನಚರಿಯಂತೆ ಊಟ ತಿಂಡಿ ನೀಡುತ್ತಿಲ್ಲ, ವಾರದಲ್ಲಿ 2ಭಾರಿ ನೀಡಬೇಕಾದ ಮೊಟ್ಟೆ ತಿಂಗಳಿಗೊಮ್ಮೆ ನೀಡುತ್ತಾರೆ. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬದಲಾಗಿ ಬಾಳೆಹಣ್ಣು ನೀಡುತ್ತಿಲ್ಲ, ಕಳೆದ ಒಂದುವರೆ ತಿಂಗಳಿಂದ ರಾತ್ರಿ ಮುದ್ದೆ ರದ್ದು ಪಡಿಸಿದ್ದಾರೆ.
ಶುಚಿತ್ವ ಇಲ್ಲ, ಶಾಲೆಯಲ್ಲಿ ಪ್ರಾಚಾರ್ಯರಾದ ಶ್ರೀದೇವಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದಲೇ ಕೆಲಸ ಕಾರ್ಯ ಮಾಡಿಸುತ್ತಾರೆ. ಶಾಲೆಗೆ ಸುಮಾರು 40ರಿಂದ 50ವಿದ್ಯಾರ್ಥಿಗಳು ಗೈರಾಗುತ್ತಿದ್ದು, ಬಯೋಮೆಟ್ರಿಕ್ ಅವ್ಯವಸ್ತೆಯಿಂದ ಆಹಾರ ದುರುಪಯೋಗ ಪಡಿಸಿಕೊಳ್ಳುತ್ತಿದಾರೆ. ಊಟ ತಿಂಡಿ ಶುಚಿ ರುಚಿ ಇಲ್ಲ. ವಿದ್ಯಾರ್ಥಿಗಳು ನಿಯಮಾವಳಿಯಂತೆ ಆಹಾರ ನೀಡಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಹಿಂಸಿಸುತ್ತಾರೆ.
ವಿದ್ಯಾರ್ಥಿ- ವಿದ್ಯಾರ್ಥಿನಿಯರ ನಡುವೆ ಸಂಬಂಧಕಲ್ಪಿಸಿ ಅಸಭ್ಯವಾಗಿ ಮಾನಾಡುತ್ತಾರೆ ಎಂದು ಪ್ರಾಚಾರ್ಯರನ್ನು ವರ್ಗಾಯಿಸುವವರೆಗೆ ಶಾಲೆಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ತರಗತಿ ಬಹಿಷ್ಕರಿಸಿ ಮಧ್ಯಾಹ್ನದ ತನಕ ಶಾಲೆಗೆ ತೆರಳಲಿಲ್ಲ. ಬಳಿಕ ಮಧ್ಯಾಹ್ನ ವೇಳೆಗೆ ವಿಷಯ ತಿಳಿದು ಮಾಹಿತಿ ಪಡೆದುಕೊಂಡ ಮಾಧ್ಯಮ ಪ್ರತಿನಿಧಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಭೇಟಿ ಮಾಡಿಸುವ ಭರವಸೆ ನೀಡಿದಾಗ ವಿದ್ಯಾರ್ಥಿಗಳು ತರಗತಿ ಹಾಜರಾಗಿದ್ದರು.
ಹೊಂದಾಣಿಕೆ ಕೊರತೆ: ಮೊರಾರ್ಜಿ ವಸತಿ ಶಾಲೆಯ ಪ್ರಚಾರ್ಯರು ಸೇರಿದಂತೆ ಶಿಕ್ಷಕರು ಮತ್ತು ಇರುವ ಸಿಬ್ಬಂ ಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ ಕೊರತೆಯಿದ್ದು, ಆರೋಪ ಪ್ರತ್ಯಾರೋಪಗಳಲ್ಲಿ ವೈಷಮ್ಯದ ದಿನಗಳು ಉರುಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾಮರಸ್ಯ ಮೂಡಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.
ವಿದ್ಯಾರ್ಥಿಗಳಲ್ಲಿ ಕಜ್ಜಿ ಸೋಂಕು: ವಸತಿ ಶಾಲೆಯ ಆಶುಚಿತ್ವದ ಕಾರಣದಿಂದ ಶಾಲೆಯ ಬಹುಸಂಖ್ಯೆ ವಿದ್ಯಾರ್ಥಿಗಳ ದೇಹದಲ್ಲಿ ಕಜ್ಜಿ ಕಂಡು ಬಂದಿದೆ. ಇದು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಸಾಧ್ಯತೆ ಇದೆ. ಕೂಡಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಚಿಕಿತ್ಸೆ ನೀಡಬೇಕಿದೆ.
ಸುಳ್ಳು ಆರೋಪ: ವಿದ್ಯಾರ್ಥಿಗಳು ಮನಬಂದಂತೆ ಸುತ್ತಾಡುತ್ತಾರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಶಾಲೆಯಿಂದ ಹೊರಹೋಗದಂತೆ ವಿದ್ಯಾರ್ಥಿಗಳಿಗೆ ನಿಬಂಧನೆ ಏರಿದ್ದಕ್ಕೆ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೊರಾರ್ಜಿ ಶಾಲೆಯ ಪ್ರಾಚಾರ್ಯೆ ಶ್ರೀದೇವಿ ತಿಳಿಸಿದರು. ಊಟ ತಿಂಡಿಯಲ್ಲಿ ನಿಯಮದಂತೆ ಪಾಲನೆಯಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸುತ್ತಿದ್ದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಾಚಾರ್ಯರ ಸಮ್ಮುಖದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರಾಚಾರ್ಯರ ಹೇಳಿಕೆ ಶುದ್ಧ ಶುಳ್ಳು ಎಂದು ಸ್ಪಷ್ಟಪಡಿಸಿದರು.