ಹರಪನಹಳ್ಳಿ: ಇಂದು ಜಗತ್ತಿನಲ್ಲಿ ದೇವರು, ಮಂದಿರ, ಮಸೀದಿ, ಚರ್ಚ್‌ಗಳು ಸಂಘರ್ಷಕ್ಕೆ ಕಾರಣವಾಗುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ಕ್ಯಾರಕಟ್ಟೆ ಗ್ರಾಮದಲ್ಲಿ ಬಸವೇಶ್ವರ ದೇವರ ನೂತನ ರಥದ ಕಳಸಾರೋಹಣ ಹಾಗೂ ಸರ್ವ ಶರಣ ಸಮ್ಮೇಳನ ಉದ್ಘಾಟಿಸಿ ಅವರು ಅಶೀರ್ವಚನ ನೀಡಿ ಮಾತನಾಡಿದರು.
ನ್ಯೂಜಿಲ್ಯಾಂಡ್‌ನಲ್ಲಿ ಮಸೀದಿ ದಾಳಿಯಿಂದ ಶ್ರೀಲಂಕಾದಲ್ಲಿ ಚರ್ಚೆಗಳ ಮೇಲೆ ದಾಳಿ ನಡೆಯುತ್ತಿದೆ. ಜನರ ಆತ್ಮತೃಪ್ತಿ, ಕಲ್ಯಾಣಕ್ಕೆ ನೆರವಾಗಬೇಕಾದವುಗಳು ಬಡಿದಾಡುವಂತೆ ಆಗಿವೆ. ಮಸೀದಿ, ಮಂದಿರ, ಚರ್ಚ್‌ಗಳು ಇಂದು ಶೌಚಾಲಯಕ್ಕಿಂತಲೂ ಕಡೆಯಾಗಿದೆ. ಏಕೆಂದರೆ ಒಂದು ಶೌಚಾಲಯ ಕಟ್ಟಿದ್ದರೆ ಎಲ್ಲರೂ ಹೋಗುತ್ತಾರೆ. ಆದರೆ ಮಂದಿರ ಕಟ್ಟಿದರೆ ಆಯಾ ಧರ್ಮದವರು ಬರುತ್ತಾರೆ. ಎಲ್ಲಾ ಧರ್ಮದ ದೇವರು ಒಬ್ಬನೇ ಎಂಬ ಸರಿಯಾದ ನಂಬಿಕೆ ಇದ್ದಿದ್ದರೆ ಇಂತಹ ಸಂಘರ್ಷಗಳು ಜರುಗುತ್ತಿರಲಿಲ್ಲ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅಧುನಿಕ ಯುಗದಲ್ಲಿಯೂ ಭಕ್ತಿಗೆ ಬರವಿಲ್ಲ ಎಂಬುವುದು ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಗಳೇ ಸಾಕ್ಷಿಯಾಗಿವೆ. ದೇವಾಲಯಗಳನ್ನು ಕಟ್ಟುವುದಷ್ಟೇ ಮುಖ್ಯವಲ್ಲ, ಅಲ್ಲಿ ನಿತ್ಯ ಪೂಜೆ, ಪುನಸ್ಕಾರ ನಡೆಯುವಂತಾಗಬೇಕು ಎಂದರು.
ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಅರಸೀಕೆರೆ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಶ್ರೀಗಳ ನೇತೃತ್ವದಲ್ಲಿ ಇನ್ನೂ ಎರಡು ವರ್ಷದೊಳಗೆ ಕೆರೆಗೆ ನೀರು ತುಂಬಿಸುತ್ತೇವೆ. ಜಗಳೂರು ವಿಧಾನಸಭಾ ಕ್ಷೇತ್ರದ ಬರುಡು ನೆಲದಲ್ಲಿ ಶ್ರೀಗಳು ಭಗೀರಥ ಪ್ರಯತ್ನದ ಫಲವಾಗಿ ಗಂಗೆ ಹರಿಯಲಿದ್ದಾಳೆ. ನಾನು ಕೆಲಸ ಮಾಡದೇ ಓಡಿ ಹೋಗುವವನಲ್ಲ, ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ದೇಗುಲಗಳ ಅಂತರಂಗ ವಿಷಯ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ ಮಾತನಾಡಿ, ದೇವಾಲಯಗಳು ಜನರ ಆಸ್ತಿಕತೆಯ ಪ್ರತೀಕವಾಗಿವೆ. ದೇವರು ಇದ್ದಾನೋ, ಇಲ್ಲವೋ ಯಾರು ನೋಡಿಲ್ಲ, ಆದರೆ ಭಕ್ತರ ನಂಬಿಕೆ ಪ್ರಶ್ನಿಸಲು ಸಾಧ್ಯವಿಲ್ಲ. ದೇವಾಲಯಗಳು ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದ್ದು, ಸಾಹಿತ್ಯದ ಪ್ರಕಾರಗಳು ದೇವಾಲಯಗಳಿಂದಲೇ ಹುಟ್ಟಿಕೊಂಡಿವೆ. ದೇವಸ್ಥಾನಗಳಿಗೆ ಹೋಗುವುದರಿಂದ ಉತ್ಸಾಹ, ಉತ್ತಮ ಗುಣ ಬೆಳಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಬಂದೋಳ್ ಮಂಜುನಾಥ, ಮುಖಂಡರಾದ ಜಿ.ನಂಜನಗೌಡ, ಪಿ.ಮಹಾಬಲೇಶ್ವರಗೌಡ, ಬೆಣ್ಣೆಹಳ್ಳಿ ರೇವಣ್ಣ, ಡಿ.ಸಿದ್ದಪ್ಪ, ಕೆ.ಶಿವಯೋಗಿ, ಬಾಲೇನಹಳ್ಳಿ ಕೆಂಚನಗೌಡ, ಚಟ್ನಿಹಳ್ಳಿ ರಾಜಪ್ಪ, ಒಂಕಾರಗೌಡ, ಕೆ.ಜಿ.ಶರಣಪ್ಪ, ಎನ್.ಜಿ. ಮನೋಹರ ಮತ್ತಿತರರು ಇದ್ದರು.