ಹರಪನಹಳ್ಳಿ: ಒಂದು ನೋವಿತ್ತು; ಮೌನವಾಗಿ ನಾನು ಅದನ್ನು ಸಿಗರೇಟಿನಂತೆ ಸೇದಿದ್ದೇನೆ.. ಕೆಲವು ಹಾಡುಗಳಿವೆ; ಸಿಗರೇಟಿನಿಂದ ಬೂದಿ ಕೆಡವಿದ ಹಾಗೆ ಕೊಡವಿದ್ದೇನೆ ಎನ್ನುವ ಕವಿಯತ್ರಿ ಅಮೃತಾ ಪ್ರೀತಂ ಅವರ ಕವಿತೆ ಎಂ.ಪಿ.ರವೀಂದ್ರಗೆ ಅಚ್ಚುಮೆಚ್ಚು.
ಅವನ ಬದುಕು ಕೂಡ ಕವಿಯಂತೆ ಆಗಿ ಹೋಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಬಾವುಕರಾದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ 50ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರವೀಂದ್ರ ಇಲ್ಲದೇ ಅವನ ಜನ್ಮ ದಿನವನ್ನು ಆಚರಿಸುತ್ತಿರುವುದು ಇದೇ ಮೊದಲು. ಅವನು ನನ್ನ ಸಹೋದರ ಅನ್ನುವುದಕ್ಕಿಂತ ಉತ್ತಮ ಸ್ನೇಹಿತ ಎನ್ನುವಂತೆ ಒಡನಾಟ ಹೊಂದಿದ್ದ. ಈಚೆಗೆ ಯಾರ ಕೈಗೂ ಸಿಗದೇ ಎಲ್ಲೋ ಹೋಗಿ ನಾಲ್ಕೈದು ಜನರ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ. ಅವನ ಜನ್ಮದಿನ ಬರುತ್ತೆ, ಹೋಗುತ್ತವೆ. ಆದರೆ ಅವನ ನೆನಪು ಮಾಸದೇ ಅಚ್ಚಳಿಯದೆ ಉಳಿದಿದೆ. ನನಗೆ ಕೇವಲ ಒಬ್ಬ ತಮ್ಮನಿದ್ದ. ಆದರೆ ಅವನ ಅಗಲಿಕೆಯ ನಂತರ ಸಾವಿರಾರರು ಸಂಖ್ಯೆಯಲ್ಲಿ ಅಣ್ಣ, ತಮ್ಮ ಸಿಕ್ಕಿದ್ದೀರಿ, ಹೆಚ್ಚಾಗಿ ನಮ್ಮೆಲ್ಲರ ಪ್ರೀತಿ ಸಿಕ್ಕಿದೆ. ಇದು ನಾನು ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯವಿರಬೇಕು. ಜೀವನ ಪೂರ್ತಿ ತಮ್ಮ ಪ್ರೀತಿ, ಪ್ರೋತ್ಸಾಹ ಮರೆಯುವುದಿಲ್ಲ ಎಂದು ಕಣ್ಣೀರು ಸುರಿಸಿದರು.
ಪ್ರತಿಯೊಂದು ಗ್ರಾಮದಲ್ಲಿ 10 ಜನರನ್ನು ಒಳಗೊಂಡ ರವಿ ಯುವ ಶಕ್ತಿ ಪಡೆ ಕಟ್ಟಿದ್ದೀನಿ. ಇದು ಕೇವಲ ಚುನಾವಣೆ ಅಷ್ಟೇ ಸೀಮಿತವಲ್ಲ, ಈ ಮೂಲಕ ಸಾಮಾಜಿಕ ಕೆಲಸ ಮಾಡಬೇಕಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಜವಾಬ್ಟಾರಿ ನಿಮ್ಮೆಲ್ಲರ ಮೇಲಿದೆ. ನಮಗೆ ವಹಿಸಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದೇ ನಾವು ರವೀಂದ್ರಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಜಿಪಂ ಸದಸ್ಯ ಎಚ್.ಬಿ.ಪರುಶುರಾಮಪ್ಪ ಮಾತನಾಡಿ, ಎಂ.ಪಿ. ರವೀಂದ್ರರವರ ಅನೇಕ ಗುಣಗಳು ಕೆಲವರಿಗೆ ಕೊನೆಯವರೆಗೂ ಅರ್ಥವಾಗಲಿಲ್ಲ. ಅದರೆ ಹಿಡಿದ ಹಠ ಸಾಧಿಸುವ ಛಲಗಾರ ಆಗಿದ್ದರು. ಸಮಾಜಮುಖೀ ಅನೇಕ ಹಿರಿಯ ಜನ ನಾಯಕರ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ನಿಜಕ್ಕೂ ಅವರಿಗೆ ಸಿಎಂ ಆಗುವ ಅರ್ಹತೆ ಇತ್ತು. ಅವರು ಹಠವಾದಿ ರಾಜಕಾರಣಿಯಾಗಿದ್ದು, ನೇರ ನುಡಿಯ ಮಾತುಗಳಿಂದ ಅನೇಕರ ವಿರೋಧ ಕಟ್ಟಿಕೊಂಡಿದ್ದರೂ ಸತ್ಯ ಹೇಳಲು ಹಿಂಜರೆಯುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಟ
ನಡೆಸುತ್ತಿದ್ದರೂ ಆರೋಗ್ಯ ವಿಚಾರಿಸಲು ಬಂದ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಹೈ.ಕ ಸೌಲಭ್ಯ ಕೊಡುವಂತೆ ಮನವಿ ಮಾಡಿದ್ದರು. ತಾಲೂಕಿಗೆ 371(ಜೆ) ಕಲಂ ಸೌಲಭ್ಯ ಕಲ್ಪಿಸಿದ್ದರೂ ಜನರು ಅರ್ಥ ಮಾಡಿಕೊಳ್ಳದಿರುವುದು ನೋವಿನ ಸಂಗತಿ ಎಂದು
ತಿಳಿಸಿದರು.
ರವೀಂದ್ರ ಜನ್ಮದಿನ ಅಂಗವಾಗಿ ಸರ್ಕಾರಿ ಮತ್ತು ಖಾಸಗಿ ಅಸ್ಪತೆಯ ರೋಗಿಗಳಿಗೆ ಬ್ರೇಡ್, ಹಣ್ಣು ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು
ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ 30ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ನಂತರ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಲಾಯಿತು.
ರವಿ ಯುವಶಕ್ತಿ ಪಡೆ ಅಧ್ಯಕ್ಷ ಯಡಿಹಳ್ಳಿ ಉದಯಶಂಕರ್, ಟಿ.ವೆಂಕಟೇಶ್, ಅಗ್ರಹಾರ ಅಶೋಕ್, ಸುಷ್ಮಾ ಪಾಟೀಲ್ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಕೆ.ಎಂ.ಬಸವರಾಜಯ್ಯ, ಡಿ.ಅಬ್ದುಲ್ ರಹಿಮಾನ ಸಾಬ್, ಚಿಕ್ಕೇರಿ ಬಸಪ್ಪ, ನೀಲಗುಂದ ವಾಗೀಶ್,
ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಅರುಣ ಪೂಜಾರ್, ಎಸ್.ಜಾಕೀರ್‌ಹುಸೇನ್, ಉಮಾಕಾಂತ್, ಬಾಣದ ಅಂಜಿನಪ್ಪ, ರಾಯದುರ್ಗ ವಾಗೀಶ್, ಮತ್ತೂರು ಬಸವರಾಜ್, ಜಯಲಕ್ಷ್ಮೀ, ಎಲ್.ಬಿ.ಹಾಲೇಶನಾಯ್ಕ, ಎಲ್.ಮಂಜ್ಯನಾಯ್ಕ, ಜೀಷಾನ್ ಇನ್ನಿತರರಿದ್ದರು.