Advertisement

ಸರಕಾರಿ ಸೌಲಭ್ಯಕ್ಕೆ ಕುತ್ತು ತಂದ ಹೆಬ್ಬೆರಳು!

10:10 AM Jun 27, 2019 | Naveen |

ಎಸ್‌.ಎನ್‌. ಕುಮಾರ್‌ ಪುಣಬಗಟ್ಟಿ
ಹರಪನಹಳ್ಳಿ:
ನಮಿಸುವ ಕೈಗಳಿಗಿಂತ ದುಡಿಯುವ ಕೈಗಳೇ ಶ್ರೇಷ್ಠ ಎನ್ನಲಾಗುತ್ತಿದೆ. ಆದರೆ ಇಲ್ಲಿ ದುಡಿಯುವ ಕೈಗಳೇ ಸರ್ಕಾರಿ ಸೌಲಭ್ಯ ಪಡೆಯಲು ಅಡ್ಡಿಯಾಗುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

Advertisement

ಹೌದು, ತಾಲೂಕಿನ ಅರಸನಾಳು ಗ್ರಾಮದ ಜಿ.ಗಂಗಮ್ಮ(47) ಅವರು ಅನಕ್ಷರಸ್ಥೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನದಲ್ಲಿಯೂ ತನ್ನ ಮೂರು ಹೆಣ್ಣು ಮಕ್ಕಳೊಂದಿಗೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೂವರು ಹೆಣ್ಣು ಮಕ್ಕಳ ಜನನವಾಗಿದ್ದರಿಂದ ಮನನೊಂದು ಕಳೆದ ಒಂದು ದಶಕಗಳ ಹಿಂದೆ ಮನೆಯಿಂದ ಹೋದ ಪತಿ ಮನೆಗೆ ಮರಳಿ ಬಂದಿಲ್ಲ. ಆದರೂ ಧೈರ್ಯ ಕಳೆದುಕೊಳ್ಳದೇ ಯಾರ ಮೇಲೂ ಅವಲಂಬಿತರಾಗದೇ ಕೂಲಿ ಕೆಲಸದಿಂದಲೇ ಜೀವನ ಕಟ್ಟಿಕೊಳ್ಳುತ್ತಿರುವ ಗಂಗಮ್ಮನಿಗೆ ಕೈಗಳೇ ದೊಡ್ಡ ಸಮಸ್ಯೆ ಆಗಿವೆ.

ವಿವಿಧ ಯೋಜನೆಗಳ ಅಕ್ರಮ ತಡೆಗಟ್ಟಲು ಹೆಬ್ಬೆಟ್ಟು ಗುರುತು ನೀಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಆದರೆ ತಮ್ಮ ಹೆಬ್ಬೆಟ್ಟು ಬೆರಳಿನ ಗೆರೆಗಳು ಮೂಡದೇ ಪಡಿತರ, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸ ಸೇರಿದಂತೆ ಸರ್ಕಾರಿ ಸೌಲಭ್ಯ ದೊರೆಯದ ಹಿನ್ನೆಲೆಯಲ್ಲಿ ಗಂಗಮ್ಮ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸುವಂತಾಗಿದೆ. ದುಡಿಯುವ ಕೈಗಳು ಅಕ್ಷಯ ಪಾತ್ರೆ ಆಗುವ ಬದಲು ಗಂಗಮ್ಮನಿಗೆ ಕೈಗಳೇ ಸಮಸ್ಯೆ ತಂದೊಡ್ಡಿವೆ. ನಿರಂತರವಾಗಿ ಪ್ರತಿನಿತ್ಯ ಕೂಲಿ ಕೆಲಸ ಮಾಡುತ್ತಿರುವುದರಿಂದ ಗಂಗಮ್ಮನ ಕೈಬೆರಳುಗಳ ಗೆರೆಗಳು ಸವೆದು ಹೋಗಿರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪಡಿತರ ಅಂಗಡಿಗೆ ಹೋದರೆ ಹೆಬ್ಬೆಟ್ಟು ಮೂಡುತ್ತಿಲ್ಲ ಎಂದು ವಾಪಾಸ್‌ ಕಳಿಸುತ್ತಿದ್ದಾರೆ. ಮಳೆ ಇಲ್ಲದೇ ಬರಗಾಲ ಅವರಿಸಿರುವುದರಿಂದ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಕೆಲಸಕ್ಕೆ ಹೋಗಬೇಕೇಂದರೆ ಅಲ್ಲಿಯೂ ಕೂಲಿ ಹಣ ಪಡೆಯಲು ಹೆಬ್ಬೆಟ್ಟು ಹಾಕಬೇಕು. ನನ್ನದಲ್ಲದ ತಪ್ಪಿಗೆ ತಾನು ಏನು ಮಾಡಬೇಕು ಎಂಬುವುದೇ ತೋಚದಂತಾಗಿ ಕಚೇರಿಯಿಂದ ಕಚೇರಿಗೆ ನಿತ್ಯ ಅಲೆದಾಟ ನಡೆಸುತ್ತಿದ್ದಾರೆ.

ಅಧಾರ ಕಾರ್ಡ್‌ ತಿದ್ದುಪಡಿ ಮತ್ತು ಪಡಿತರ ಸಮಸ್ಯೆ ಬಗೆಹರಿಸಿಕೊಳ್ಳಲು ಕಳೆದ ಒಂದು ತಿಂಗಳಿಂದ ತಹಶೀಲ್ದಾರ್‌ ಕಚೇರಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಗೆ ಗಂಗಮ್ಮ ತಡಕಾಡುತ್ತಿದ್ದಾರೆ. ಹೆಬ್ಬೆಟ್ಟು ಗುರುತು ಮೂಡದಿದ್ದರೇ ನಾವೇನೂ ಮಾಡಲು ಆಗಲ್ಲ ಎಂಬುವುದು ಅಧಿಕಾರಿಗಳ ಸಿದ್ಧ ಉತ್ತರ. ಮೊಬೈಲ್ಗೆ ಸೀಮ್‌ ಖರೀದಿಸಲು ಹೋದರೂ ಹೆಬ್ಬೆಟ್ಟು ಗುರುತು ಕೇಳುತ್ತಾರೆ, ಯಾವುದೇ ಸೌಲಭ್ಯ ಪಡೆಯಬೇಕಾದರೂ ಹೆಬ್ಬೆಟ್ಟು ಗುರುತು ಅವಶ್ಯಕವಾಗಿದೆ. ನಾವು ದುಡಿದು ತಿನ್ನುವುದೇ ತಪ್ಪಾ ಎಂದು ಗಂಗಮ್ಮ ಪ್ರಶ್ನಿಸುತ್ತಾಳೆ.

Advertisement

ನಾವು ಶಾಲೆಯ ಮುಖವನ್ನೇ ನೋಡಿಲ್ಲ, ವಿದ್ಯೆ ಎಲ್ಲಿಂದ ಬರಬೇಕು. ನಾವು ದುಡಿಯದಿದ್ದರೆ ನಮ್ಮ ಹೊಟ್ಟೆ ತುಂಬಲ್ಲ. ಹೀಗಾಗಿ ಕೈಗಳು ಕೆಲಸ ಮಾಡಲೇ ಬೇಕು. ಸರ್ಕಾರ ಎಲ್ಲದ್ದಕ್ಕೂ ಹೆಬ್ಬೆಟ್ಟು ಗುರುತು ಮಾಡಿರುವುದು ಒಳ್ಳೆಯದು ಇರಬಹುದು ಆದರೆ ಬಡವರು ದುಡಿಯದೇ ಇರುವುದಕ್ಕೆ ಆಗುತ್ತದೆಯಾ? ಸರ್ಕಾರಿ ಸೌಲಭ್ಯ ಪಡೆಯಬೇಕಾದರೆ ನಾವು ಕೆಲಸ ಮಾಡದೇ ಇರಬೇಕಾ? ಇದು ನನ್ನೊಬ್ಬಳೇ ಸಮಸ್ಯೆ ಅಲ್ಲ, ಎಲ್ಲಾ ಬಡಜನರ ಸಮಸ್ಯೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹೆಬ್ಬೆಟ್ಟು ಗುರುತು ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನುವುದು ಗಂಗಮ್ಮನ ಅಳಲು.

ಹೆಬ್ಬೆಟ್ಟು ಗುರುತು ಕಡ್ಡಾಯ ಮಾಡಿರುವುದರಿಂದ ದುಡಿಯುವ ಜನರು ನಾನಾ ರೀತಿಯ ತೊಂದರೆ ಅನುಭವಿಸುತ್ತಿವುದರಿಂದ ಹೆಬ್ಬೆಟ್ಟು ಗುರುತು ನಿಯಮ ಬದಲಿಸಬೇಕು. ಅನಕ್ಷರಸ್ಥರ ಹೆಬ್ಬೆಟ್ಟು ಮೂಡುತ್ತಿಲ್ಲ ಎನ್ನುವಂಥ ಕಾರಣ ಕೊಟ್ಟು ಬಡವರಿಗೆ ಪಡಿತರ ವಿತರಣೆ ಮಾಡದೇ ಸಾಗಹಾಕುತ್ತಿದ್ದಾರೆ. ಎಲ್ಲಾ ಸರ್ಕಾರಿ ಸೌಲಭ್ಯಕ್ಕೂ ಹೆಬ್ಬೆಟ್ಟು ಕಡ್ಡಾಯ ಎನ್ನುವ ಬದಲು ಅನಕ್ಷಸ್ಥರ ಮುಖವನ್ನು ಸ್ಕ್ಯಾನಿಂಗ್‌ ಮಾಡುವ ವ್ಯವಸ್ಥೆ ಮಾಡುವುದು ಒಳ್ಳೆಯದು.
ಆಗ್ರಹಾರ ಅಶೋಕ್‌,
ಕೂಲಿ ಕಾರ್ಮಿಕ

ವಯಸ್ಸಾದವರ ಮತ್ತು ಕೂಲಿ ಕಾರ್ಮಿಕರ ಹೆಬ್ಬೆಟ್ಟು ಗುರುತು ಮೂಡುತ್ತಿಲ್ಲ ಎಂದು ಹಲವಾರು ದೂರುಗಳು ಬಂದಿವೆ. ಆದರೆ ಈ ಸಮಸ್ಯೆ ಸರಿಪಡಿಸುವ ವ್ಯವಸ್ಥೆ ನಮಗೆ ಸರ್ಕಾರ ಕಲ್ಪಿಸಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸುತ್ತೇವೆ. ಅವರ ಸಲಹೆಯಂತೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಡಾ.ನಾಗವೇಣಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next