Advertisement

ತುಂಗಭದ್ರೆ ಒಡಲಲ್ಲೂ ನೀರಿಗೆ ಹಾಹಾಕಾರ

12:48 PM Apr 29, 2019 | Naveen |

ಹರಪನಹಳ್ಳಿ: ದಿನದಿಂದ ದಿನಕ್ಕೆ‌ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದೆ. ಕೆರೆಗಳಲ್ಲಿ ನೀರಿಲ್ಲದಂತಾಗಿದ್ದು, ಕೊಳವೆ ಬಾವಿಗಳಿಂದಲೂ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

Advertisement

ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿದು ಹೋಗುತ್ತಿದ್ದು, ಈಗಲೇ ನೀರಿನ ಹರಿವು ಕಡಿಮೆಯಾಗಿದೆ. ಕೆರೆ, ಹಳ್ಳಗಳು ಬತ್ತಿವೆ. ಅಂತರ್ಜಲ ಮಟ್ಟವೂ ದಿನೇ ದಿನೇ ಕುಸಿಯುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ತಾಲೂಕನ್ನು ಸತತವಾಗಿ ಬರ ಕಾಡುತ್ತಿರುವ ಪರಿಣಾಮ ಗ್ರಾಮಗಳಲ್ಲಿ 500ಕ್ಕಿಂತಲೂ ಹೆಚ್ಚು ಅಡಿಗಳವರೆಗೆ ಕೊಳವೆ ಬಾವಿ ಕೊರೆದರೂ ಹನಿ ನೀರು ಬರದಂತಾಗಿದೆ.

ತಾಲೂಕಿನ ಒಟ್ಟು 8 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ದಿನ 60 ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಇದಲ್ಲದೇ ಬೋರವೆಲ್ ಕೊರೆದರೂ ನೀರು ಲಭ್ಯವಾಗದಂತಹ ಒಟ್ಟು 25 ಗ್ರಾಮಗಳಲ್ಲಿ 34 ಖಾಸಗಿ ಮಾಲೀಕರಿಂದ ನೀರು ಪಡೆದು ಜನರಿಗೆ ನೀಡಲಾಗಿದೆ.

ಸಮಸ್ಯೆಯಿರುವ ಗ್ರಾಮಗಳು: ಅಣಜಿಗೆರೆ, ಹುಣಸಿಕಟ್ಟಿ, ಆಲದಹಳ್ಳಿ, ವಡೇರಹಳ್ಳಿ, ಅರಸೀಕೆರೆ, ತಾಳೇದಹಳ್ಳಿ, ಪಾವನಪುರ, ಹಲೇ ಓಬಳಾಪುರ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಆಗುತ್ತಿದೆ. ಹನುಮನಹಳ್ಳಿ, ಮಾದಿಹಳ್ಳಿ, ಎನ್‌.ಶೀರನಹಳ್ಳಿ, ಯಲ್ಲಾಪುರ, ಉದ್ದಗಟ್ಟಿ, ನೀಲಗುಂದ, ಚನ್ನಹಳ್ಳಿ, ಹಾರಕನಾಳು, ಹುಲಿಕಟ್ಟಿ, ಕಂಡಿಕೇರಿ, ಅರಸೀಕೆರೆ, ಲೋಲೇಶ್ವರ, ಚೆನ್ನಾಪುರ ತಾಂಡಾ, ನಂದಿಬೇವೂರು, ಕೊಂಗನಹೊಸೂರು, ನಂದಿಬೇವೂರು ತಾಂಡಾ, ಜಂಗಮ ತುಂಬಿಗೇರಿ, ಚಿಗಟೇರಿ, ನಿಲುವಂಜಿ, ಹೊಂಬಳಗಟ್ಟಿ, ಬಾಗಳಿ, ಕಡಬಗೆರೆ, ಕ್ಯಾರಕಟ್ಟೆ ಗ್ರಾಮಗಳಲ್ಲಿ ಒಂದೊಂದು ಗ್ರಾಮಗಳಲ್ಲಿ ಇಬ್ಬರು ಮೂರು ಜನ ಖಾಸಗಿ ಮಾಲೀಕರರಿಂದ ಹಣ ಕೊಟ್ಟು ನೀರು ಪಡೆಯಲಾಗುತ್ತಿದೆ.

ತಾಲೂಕಿನಲ್ಲಿ ಈಗಾಗಲೇ 350 ಕೊಳವೆಬಾವಿ ಕೊರೆಸಲಾಗಿದೆ. ಬರ ನಿರ್ವಹಣೆಗೆ 4 ಕೋಟಿ ರೂ., ಜಿಲ್ಲಾಧಿಕಾರಿಗಳ ಅನುದಾನ 50 ಲಕ್ಷ ರೂ., ಜಿಪಂನಿಂದ 50 ಲಕ್ಷ ಸೇರಿ ಒಟ್ಟು 5 ಕೋಟಿ ರೂ. ಹಣ ನೀರಿಗಾಗಿ ಖರ್ಚು ಮಾಡಲಾಗಿದೆ. ಅನುದಾನ ಸಾಲುತ್ತಿಲ್ಲ. ಕೆಲವೆಡೆ ಪೈಪ್‌ ಮತ್ತು ಮೋಟರ್‌ ಅಳವಡಿಕೆ ನಡೆಯುತ್ತಿದೆ. ನೀರಿನ ಸಮಸ್ಯೆ ನೀಗಿಸಲು ಅಧಿಕಾರಿಗಳು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ.

ಕ್ರಮಕ್ಕೆ ಸೂಚನೆ
ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳಿಗೆ ನಿರ್ಲಕ್ಷ್ಯ ತೋರದಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಅನುದಾನ ಬೇಕಿದ್ದರೂ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೇನೆ. ಬೇಸಿಗೆಯಲ್ಲಿ ಯಾವುದೇ ಗಂಭೀರ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಜಿ.ಕರುಣಾಕರರೆಡ್ಡಿ, ಶಾಸಕ
ಮೇವು ಬ್ಯಾಂಕ್‌ ಸ್ಥಾಪಿಸಲು ಪ್ರಸ್ತಾವನೆ
ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳ ರೈತರಲ್ಲಿ ಮೇವು ಸಂಗ್ರಹವಿದ್ದು, ಸದ್ಯ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಕಂಡು ಬಂದಲ್ಲಿ ಸಮರ್ಪಕ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಸಜ್ಜಾಗಿದೆ. ಅಗತ್ಯ ಬಿದ್ದರೆ ತಾಲೂಕಿನಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ| ಜೆ.ಶಿವಕುಮಾರ,
ಸಹಾಯಕ ನಿರ್ದೇಶಕರು. ಪಶು ಸಂಗೋಪನಾ ಇಲಾಖೆ.
ಗಂಭೀರ ಸಮಸ್ಯೆಯಿಲ್ಲ
ಸಮಸ್ಯಾತ್ಮಕ ಗ್ರಾಮಗಳ ಪಟ್ಟ ಮಾಡಿ ಅವುಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ಫೋರ್ಸ್‌ ಸಮಿತಿ ಗಮನಕ್ಕೆ ತಂದು ಎಲ್ಲಿ ತುರ್ತು ಅವಶ್ಯವಿದೆಯೂ ಅಲ್ಲಿ ನೀರಿನ ಕಾಮಗಾರಿ ಕೈಗೊಳ್ಳುತ್ತೇವೆ. ಹರಪನಹಳ್ಳಿ ತಾಲೂಕಿಗೆ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಅದ್ಯತೆ ನೀಡಿದ್ದೇವೆ. ಸದ್ಯ ನೀರಿನ ಗಂಭೀರ ಸಮಸ್ಯೆ ಇಲ್ಲ. ಈಚೆಗೆ ಕೆಲವೊಂದು ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಸಿದರೆ ನೀರು ಸಿಗುತ್ತಿರುವುದರಿಂದ ಸಮಸ್ಯೆ ಇಳಿಮುಖವಾಗಿದೆ.
ಎಂ.ಜಯಪ್ಪ,
ಎಇಇ ನೀರು ಮತ್ತು ನೈರ್ಮಲ್ಯ ಇಲಾಖೆ.
ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ
Advertisement
Advertisement

Udayavani is now on Telegram. Click here to join our channel and stay updated with the latest news.

Next