ಹರಪನಹಳ್ಳಿ: ಬ್ರಿಟಿಷರ ವಿರುದ್ಧ ಪ್ರಥಮವಾಗಿ ಹೋರಾಡಿ ಗೆಲವು ಸಾಧಿಸಿದ್ದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮ ಅವರನ್ನು ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತಗೊಳಿಸದೆ ಜ್ಯಾತ್ಯಾತೀತ ವೀರ ಮಹಿಳೆಯಾಗಿ ರೂಪಿಸುವಲ್ಲಿ ಸಮಾಜದ ಮುಖಂಡರು ಪ್ರಯತ್ನಿಸಬೇಕು ಎಂದು ವೀರಶೈವ ಪಂಚಮಸಾಲಿ ಸಂಘದ ತಾಲೂಕು ಖಜಾಂಚಿ ಶಶಿಧರ್ ಪೂಜಾರ್ ಸಲಹೆ ನೀಡಿದರು.
ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಗುರುವಾರ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇವಲ ಒಂದು ಸಮುದಾಯದವರು ಸೇರಿ ಆಚರಿಸುವ ಜಯಂತಿ, ಉತ್ಸವಗಳಿಂದ ಅವರ ಆದರ್ಶ, ತ್ಯಾಗ ಬಲಿದಾನಗಳು ಪಸರಿಸದು. ಆದ್ದರಿಂದ ಸಮಾಜದ ಇತರರನ್ನು ಮನವೂಲಿಸಿ ಪರಸ್ಪರ ಸಭೆ, ಸಮಾರಂಭದಲ್ಲಿ ಭಾಗಿಯಾಗಿ ಸಂತ, ಇತಿಹಾಸಕಾರರ ಧೈರ್ಯ, ಸ್ವಾಭಿಮಾನದ ಗುಣಗಳನ್ನು ತಿಳಿಸಬೇಕು ಕೆಲಸ ನಡೆಯಬೇಕು ಎಂದರು.
ಇತ್ತೀಚೆಗೆ ಇತಿಹಾಸಕಾರರನ್ನು ಅವರ ಸಾಧನೆಗಳನ್ನು ತಿರುಚುವ ಕೆಲಸ ನಡೆಯುತ್ತಿದೆ. ಆಧುನಿಕತೆಗೆ ಮಾರುಹೋಗಿ ಐತಿಹಾಸಿಕ, ಸಾಂಸ್ಕೃತಿಕವಾಗಿ ವಿಮುಕ್ತಿ ಪಡೆದು ಮೊಬೈಲ್ ದಾಸರಾಗುತ್ತಿದ್ದರೆ, ಕುಟುಂಬದ ಹಿರಿಯರು ಜಾಗೃತರಾಗಿ ಹೋರಾಟಗಾರರ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ಜಯಂತಿ ಆಚರಣೆಗಳನ್ನು ಇಂದಿನ ಪೀಳಿಗೆ ವೈಯಕ್ತಿಕ ಜೀವನ ಹಾಗೂ ಸಾಮಾಜಿಕವಾಗಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಮಹತ್ವ ಸಿಗಲಿದೆ. ನಡೆ, ನುಡಿಯಲ್ಲಿ ಮಹಾತ್ಮರ ಆದರ್ಶ, ತ್ಯಾಗ, ಛಲ ದೇಶದ ಅಭಿವೃದ್ಧಿಗಾಗಿ ಬಳಸಿಕೊಂಡರೆ ಸಾರ್ಥಕತೆ ದೊರೆಯಲಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿ, ಆಚರಿಸುವ ಕಾರ್ಯಕ್ರಮದ ಉದ್ದೇಶಗಳು ಅರ್ಥಪೂರ್ಣವಾಗಿರಬೇಕು, ಸಾಧನೆಗಳಿಗೆ ಒಳಪಟ್ಟ ಪ್ರತಿಯೊಬ್ಬ ಮಹನೀಯರ ಆದರ್ಶಗಳನ್ನು ಸಮಾಜದ ಉದ್ದಗಲಕ್ಕೂ ಪಸರಿಸಬೇಕು ಎಂದರು. ರಾಣಿ ಚೆನ್ನಮ್ಮ ವಿಜಯೋತ್ಸವದ ಅಂಗವಾಗಿ ವಿವಿಧ ವಾದ್ಯಗೋಷ್ಠಿಗಳು, ಜಾನಪದ ಕಲಾತಂಡಗಳ ಮೂಲಕ ಚನ್ನಮ್ಮ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಚರಿಸಿತು. ಬೈಕ್ ರ್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಭಾ ಅಜ್ಜಣ್ಣ, ಷಣ್ಮುಖಪ್ಪ, ಉಮಾಕಾಂತ್, ಎಂ.ಶಿವಾನಂದಪ್ಪ, ಅಂಜಿನಪ್ಪ, ಮಹಿಳ ಘಟಕದ ಅಧ್ಯಕ್ಷೆಶ್ರೀಮತಿ, ಕೆ.ಲಿಂಗರಾಜ, ಕೆಂಚಪ್ಪ, ಶಿವಕುಮಾರ್, ಬಿ.ಕೆ.ಕೊಟ್ರೇಶ್, ನಾಗರಾಜ್, ಶಿವಕುಮಾರ್, ಸಿದ್ದಪ್ಪ ಉಪಸ್ಥಿತರಿದ್ದರು.