ಹರಪನಹಳ್ಳಿ: ಪಟ್ಟಣ ಪಂಚಾಯ್ತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯ ನಿವೇಶನ ಮತ್ತು ವಸತಿ ರಹಿತ ಕುಟುಂಬಗಳನ್ನು ರಾಜೀವ್‌ಗಾಂಧಿ ವಸತಿ ನಿಗಮದ ಆನ್‌ಲೈನ್ ಪಟ್ಟಿಯಲ್ಲಿ ಸೇರಿಸಲು ಕಂಪ್ಯೂಟರ್ ಲಾಕ್ ಓಪನ್ ಮಾಡುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಅಖೀಲ ಭಾರತ ಯುವಜನ ಫೆಡರೇಷನ್ ಸಂಘಟನೆ ನೇತೃತ್ವದಲ್ಲಿ ಗುರುವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಭಾರತ ಕಮ್ಯುನಿಷ್ಟ ಪಕ್ಷದ ವತಿಯಿಂದ ನಿವೇಶನ ಮತ್ತು ವಸತಿರಹಿತ ಕುಟುಂಬಗಳಿಗೆ ನ್ಯಾಯ ದೊರಕಿಸಲು ಫೆ. 2ರಿಂದ ಬಳ್ಳಾರಿಯಿಂದ ಬೆಂಗಳೂರುವರೆಗೆ ಕಾಲ್ನಡಿ ಜಾಥಾವನ್ನು ನಡೆಸುತ್ತಿದೆ. ಸರಕಾರವು ರಾಜ್ಯದ ನಿವೇಶನ ಮತ್ತು ವಸತಿರಹಿತ ಕುಟುಂಬಗಳ ಮಾಹಿತಿಯನ್ನು ರಾಜೀವ್‌ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಸಂಗ್ರಹಿಸುತ್ತಿದ್ದು, ಆ ಮೂಲಕ ನಿರಾಶ್ರಿತ ಮತ್ತು ನಿರ್ಗತಿಕ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಒದಗಿಸುತ್ತಿದೆ. ಆದರೆ ಕಳೆದ ವರ್ಷದಿಂದ ಈ ಆನ್‌ಲೈನ್ ಪ್ರಕ್ರಿಯೆ ಸ್ಥಗಿತ ಮಾಡಿರುವುದರಿಂದ ಇನ್ನೂ ಅರ್ಜಿ ಸಲ್ಲಿಸಬೇಕಾದ ಜನರು ಇದರಿಂದ ವಂಚಿತರಾಗಿದ್ದಾರೆ ಎಂದರು.
ಜಾಥಾದ ಮುಖ್ಯ ಉದ್ದೇಶ ವಸತಿ ಮತ್ತು ನಿವೇಶನ ರಹಿತ ಕುಟುಂಬಗಳ ಮಾಹಿತಿಯನ್ನು ರಾಜೀವ್‌ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಪಟ್ಟಿಗೆ ಸೇರಿಸುವುದಾಗಿದೆ. ಇದರ ಫಲವಾಗಿ ರಾಜ್ಯದ ಗ್ರಾಮಾಂತರ ಪ್ರದೇಶಗಳ ನಿವೇಶನ ಮತ್ತು ವಸತಿರಹಿತ ಕುಟುಂಬಗಳ ಆನ್ ಲೈನ್ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಕಳೆದ ಕೆಲವು ದಿನಗಳ ಹಿಂದೆ ವೆಬ್‌ಸೈಟ್ ಲಾಕ್ ಓಪನ್ ಮಾಡಿ ಏ. 15ರ ಗಡವು ನೀಡಿದೆ. ಆದರೆ ಇದನ್ನು ಪಟ್ಟಣ ಪಂಚಾಯ್ತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಗೆ ಒಳಪಡುವ ಜನರಿಗೆ ಅನ್ವಹಿಸದಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕೂಡಲೇ ರಾಜೀವ್‌ಗಾಂಧಿ ವಸತಿ ನಿಗಮದ ಆನ್‌ಲೈನ್ ವೆಬ್‌ಸೈಟ್ ಅನ್‌ಲಾಕ್ ಮಾಡಿ ಎಲ್ಲ ಅರ್ಹ ಬಡವರ ಮಾಹಿತಿಯನ್ನು ದಾಖಲಿಸಬೇಕೆಂದು ಆಗ್ರಹಿಸಿದರು.
ಸಿಪಿಐ ತಾಲೂಕು ಸಹ ಕಾರ್ಯದರ್ಶಿ ಎಚ್. ಎಂ. ಸಂತೋಷ, ರಮೇಶನಾಯ್ಕ, ಮುಖಂಡರಾದ ಮಹಬೂಬ್‌ಭಾಷ, ಸಾವಿತ್ರಮ್ಮ, ಸುನಂದಮ್ಮ, ಪೂರ್ಣಿಮಾ, ಗಿರಿಜಮ್ಮ, ಎಂ. ದುರುಗಮ್ಮ, ಎಂ. ಕೆಂಚಮ್ಮ, ಸಾಕಮ್ಮ, ಶಾಂತಮ್ಮ ಇತರರು ಭಾಗವಹಿಸಿದ್ದರು.