ಹರಪನಹಳ್ಳಿ: ತಾಲೂಕಿನ ಹಲವೆಡೆ ಮಂಗಳವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಒಟ್ಟು 37 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 4 ಎಕರೆ ಸಪೋಟ ತೋಟ ಹಾನಿಯಾಗಿದೆ. ಕೆಲವೆಡೆ ಮರಗಳು ಧರೆಗುರಿಳಿದ ವಿದ್ಯುತ್ ಸಂಪರ್ಕ ಕಡಿತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದೆ.
ತೋಗರಿಕಟ್ಟೆ ಗ್ರಾಮದಲ್ಲಿ 7 ಮನೆ, ಕೆಂಗನಹೊಸೂರು-1, ನಂದಿಬೇವೂರು-1, ನಂದಿಬೇವೂರು ತಾಂಡದಲ್ಲಿ ಭಾಗಶಃ ಹಾನಿ-22, ತೀವ್ರ ಹಾನಿ-5 ಸೇರಿ 27, ಸಾಸ್ವಿಹಳ್ಳಿ-1 ಸೇರಿದಂತೆ ಒಟ್ಟು 37 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇದರಲ್ಲಿ 5 ಮನೆಗಳು ತೀವ್ರ ಹಾನಿಯಾಗಿವೆ. 1.85 ಲಕ್ಷರೂ ಅಂದಾಜು ನಷ್ಟವಾಗಿದೆ. ತೊಗರಿಕಟ್ಟೆ ಗ್ರಾಮದಲ್ಲಿ 4 ಎಕರೆ ಸಪೋಟ ತೋಟ ಹಾಳಾಗಿದೆ. ಇ-ಬೇವಿನಹಳ್ಳಿ ಗ್ರಾಮದ ಯಡಿಹಳ್ಳಿ ಬಸವರಾಜ್ ಎಂಬುವವರ ರೇಷ್ಮೆ ಬೆಳೆ ಬೆಳೆಯುವ ಮನೆ ಮೇಲ್ಛಾವಣೆ ಹಾರಿ ಹೋಗಿ ಸಂಪೂರ್ಣ ಹಾಳಾಗಿದೆ. ಸ್ಥಳಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸುಮಾರು 4 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಪಟ್ಟಣದ ಆಚಾರ್ಯ ಬಡಾವಣೆಯಲ್ಲಿ ವಿದ್ಯುತ್ ತಂತಿಯ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಪಟ್ಟಣದ ಪ್ರತಿಷ್ಠಿತ ಬಡಾವಣೆ ಎಂದು ಕರೆಸಿಕೊಳ್ಳುವ ಆಚಾರ ಬಡಾವಣೆಯಲ್ಲಿ ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಶಾಸಕ ಜಿ.ಕರುಣಾಕರರೆಡ್ಡಿ ವಾಸವಿದ್ದು, ಮಂಗಳವಾರ ಸಂಜೆ 4 ಗಂಟೆಯಿಂದ ಬುಧವಾರ ಬೆಳಿಗ್ಗೆ 11ರ ವರೆಗೆ ಇಲ್ಲಿ ನಿವಾಸಿಗಳು ವಿದ್ಯುತ್ ಇಲ್ಲದೇ ಪರದಾಟ ನಡೆಸುವಂತಾಗಿತ್ತು. ರಾತ್ರಿವಿಡೀ ಸೆಖೆಯಿಂದ ನಿದ್ದೆ ಇಲ್ಲದೇ ಕೆಲವರು ಜಾಗರಣೆ ಮಾಡಿದ್ದಾರೆ.
ಬೆಸ್ಕಾಂ ಇಲಾಖೆಯ ಹರಪನಹಳ್ಳಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ವಿವಿಧ ಹಳ್ಳಿಗಳಲ್ಲಿ 100 ವಿದ್ಯುತ್ ಕಂಬಗಳು ಮುರಿದಿದ್ದು, 85ಕ್ಕೂ ಅಧಿಕ ಕಂಬಗಳು ಬಾಗಿರುತ್ತವೆ. 6 ವಿದ್ಯುತ್ ಪರಿವರ್ತಕಗಳು ವಿಫಲವಾಗಿವೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ತಾಲೂಕಿನ ನಾಗರಕೊಂಡ, ಮತ್ತಿಹಳ್ಳಿ ಗ್ರಾಮಗಳ ಸುತ್ತಮುತ್ತ 5-6 ಹಳ್ಳಿಗಳು ಹಾಗೂ ನಂದಿಬೇವೂರು ತಾಂಡ, ಕೂಲಹಳ್ಳಿ, ಬಾಗಳಿ ಗ್ರಾಮಗಳ ಸುತ್ತಮುತ್ತ 8ರಿಂದ 10 ಹಳ್ಳಿಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಬುಧವಾರ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸರಬರಾಜು ನೀಡಲಾಗಿದೆ. ಮಳೆಯಿಂದ 15 ಲಕ್ಷ ರೂ. ಹಾನಿಯಾಗಿರುತ್ತದೆ ಎಂದು ಬೆಸ್ಕಾಂ ಇಲಾಖೆ ಎಇಇ ಜಯ್ಯಪ್ಪ ತಿಳಿಸಿದ್ದಾರೆ.