ಹರಪನಹಳ್ಳಿ: ಕಳೆದ ಆರು ವರ್ಷಗಳ ಹಿಂದೆ ವಿಧಾನಸಭೆ ಪ್ರವೇಶಕ್ಕೆ ಅದೃಷ್ಟ ಪರೀಕ್ಷೆ ನಡೆಸಿದ್ದವರು ಈಗ ಹರಪನಹಳ್ಳಿ ಪುರಸಭೆ ಅಭ್ಯರ್ಥಿ!
ನಿಜ. 2013ರ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಆರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಹಾಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಸದಸ್ಯ ಹಾರಾಳು ಎಚ್.ಎಂ.ಅಶೋಕ್ ಪುರಸಭೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಹರಪನಹಳ್ಳಿ ಪಟ್ಟಣದ ಆಚಾರ್ಯ ಬಡಾವಣೆ ನಿವಾಸಿಯಾಗಿರುವ ಇವರು ವಾರ್ಡ್ ನಂ.5ರ ಬಿಜೆಪಿ ಉಮೇದುವಾರ.
ಬಳ್ಳಾರಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರೂ ಆಗಿರುವ ಅಶೋಕ್, ವಿಧಾನಸಭಾ ಚುನಾವಣೆಯಲ್ಲಿ 16,300 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಆರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ದಿ|ಎಂ.ಪಿ. ಪ್ರಕಾಶ್ ಅವರಿಂದ ಪ್ರಭಾವಿತರಾಗಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡ ಅವರು, 2008ರಲ್ಲಿ ಪ್ರಕಾಶ್ ಕಾಂಗ್ರೆಸ್ ಸೇರಿದಾಗ ತಟಸ್ಥರಾಗಿ ಉಳಿದರು. 2012ರಲ್ಲಿ ಶ್ರೀರಾಮುಲು ಅವರು ಬಿಎಸ್ಸಾರ್ ಪಕ್ಷ ಸ್ಥಾಪಿಸಿದಾಗ ಆ ಪಕ್ಷ ಸೇರಿದ್ದರು. ಬಳಿಕ ಈ ಪಕ್ಷ ಬಿಜೆಪಿಯಲ್ಲಿ ವಿಲೀನಗೊಂಡಾಗ ಅಶೋಕ್ ಅವರೂ ಬಿಜೆಪಿ ಸೇರಿದರು.
2007ರಲ್ಲಿ ಹರಪನಹಳ್ಳಿಗೆ ಆಗಮಿಸಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದೇನೆ. ಮೆಡಿಕಲ್ ಕ್ಷೇತ್ರದ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮದಿಂದ ಬಂದ ಆದಾಯದಲ್ಲಿ ಹತ್ತು ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ಪುರಸಭೆ ಚುನಾವಣೆಯಲ್ಲಿ ಮತದಾರರು ಕೈ ಹಿಡಿಯುವ ವಿಶ್ವಾಸವಿದೆ ಎನ್ನುತ್ತಾರೆ ಅವರು.
•
ಎಸ್.ಎನ್.ಕುಮಾರ್ ಪುಣಬಗಟ್ಟಿ