ಹರಪನಹಳ್ಳಿ: ಲೋಕಸಭಾ ಚುನಾವಣೆಗೆ ಹಗಲಿರುಳು ಶ್ರಮ ಹಾಕಿದ್ದ ನಾಯಕರು ವಿಶ್ರಾಂತಿ ಪಡೆಯಬೇಕು ಎನ್ನುವಷ್ಟರಲ್ಲಿಯೇ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪುನಃ ಅಖಾಡಕ್ಕೆ ಇಳಿಯಬೇಕಾಗಿದೆ. ಸ್ಥಳೀಯ ಪುರಸಭೆಯ 27 ವಾರ್ಡ್‌ಗಳಿಗೆ ಮೇ29ರಂದು ಚುನಾವಣೆ ನಡೆಯಲಿದ್ದು, ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರ ಪರಿಶೀಲನೆ, ಮೇ 20ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 31ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳ ಪುನರ್ ವಿಂಗಡನೆಯಲ್ಲಿ ಸ್ಥಾನಗಳ ಹೆಚ್ಚಳವಾಗಿಲ್ಲ. ಆದರೆ ಈ ಬಾರಿ ಮಹಿಳೆಯರಿಗೆ ಶೇ.40ರಷ್ಟು ಮೀಸಲಾತಿ ದೊರಕಿದ್ದು, ಹೆಚ್ಚಿನ ಸ್ಥಾನ ಪಡೆದು ಪಾರುಪತ್ಯ ಮೆರೆದಿದ್ದಾರೆ. ಪುರಸಭೆಯ ಒಟ್ಟು 12 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಕಳೆದ ಬಾರಿ 8 ಸ್ಥಾನ ಮಾತ್ರ ಮಹಿಳೆಯರಿಗೆ ಮೀಸಲಾಗಿದ್ದು, ಆದರೆ ಈ ಬಾರಿ 4 ಸ್ಥಾನ ಹೆಚ್ಚಳವಾಗಿದೆ. ಮಹಿಳೆಯರು ಸೇರಿ ಒಟ್ಟು 14 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ದೊರಕಿವೆ. 3 ಸ್ಥಾನ ಪರಿಶಿಷ್ಟ ಜಾತಿ, 4 ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಕಳೆದ ಚುನಾವಣೆಯಲ್ಲಿ ಎಸ್ಸಿ-2, ಎಸ್ಟಿ-4 ಸ್ಥಾನಗಳಿದ್ದು, ಈ ಬಾರಿ ಎಸ್ಸಿ ಮೀಸಲಾತಿಯಲ್ಲಿ 1 ಸ್ಥಾನ ಹೆಚ್ಚಾಗಿದೆ.
2014 ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ-10, ಕಾಂಗ್ರೆಸ್-7, ಬಿಎಸ್ಸಾರ್-6, ಜೆಡಿಎಸ್-1, ಕೆಜೆಪಿ-1, ಪಕ್ಷೇತರರು-2 ಸದಸ್ಯರು ಆಯ್ಕೆಯಾಗಿದ್ದರು. ಬಿಎಸ್ಸಾರ್ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪರಿಣಾಮ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ನಂತರ ಬದಲಾದ ರಾಜಕೀಯ ಚಿತ್ರಣದಲ್ಲಿ ಬಿಜೆಪಿಯಿಂದ ಎಚ್.ಕೆ.ಹಾಲೇಶ್ ಅಧ್ಯಕ್ಷರಾಗಿ ಆಡಳಿತಾವಧಿ ಪೂರ್ಣಗೊಳಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷದಿಂದ ಮೂವರು ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದಲ್ಲಿ ಚಿತ್ರಣವೇ ಬದಲಾಗುವ ಸಾಧ್ಯತೆಯಿದೆ.
ಸದ್ಯ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಎಲ್ಲರ ಕಣ್ಣು ಎಸ್ಸಿ ವಾರ್ಡ್‌ಗಳ ಬಿದ್ದಿದೆ. ಪಟ್ಟಣದಲ್ಲಿ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಹಿಡಿತ ಸಾಧಿಸಿದ ಘಟಾನುಘಟಿ ನಾಯಕರ ವಾರ್ಡ್‌ಗಳ ಮೀಸಲಾತಿ ಬದಲಾವಣೆ ಆಗಿರುವುದರಿಂದ ಅನ್ಯ ವಾರ್ಡ್‌ಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ. ಕಳೆದ ಚುನಾವಣೆಯಲ್ಲಿ ವಾರ್ಡ್ ನಂ.22ರಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಗೆಲುವು ಸಾಧಿಸಿದ್ದ ಪುರಸಭೆಯ ಹಾಲಿ ಅಧ್ಯಕ್ಷ ಎಚ್.ಕೆ.ಹಾಲೇಶ್ ಅವರ ವಾರ್ಡ್ ಇದೀಗ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಗಾಜಿಕೇರಿ ವಾರ್ಡ್ ನಂ.27ರಲ್ಲಿ ಅಥವಾ ತೆಕ್ಕದಗರಡಿಕೇರಿ ವಾರ್ಡ್ ನಂ.25ರಲ್ಲಿ ಸ್ಪರ್ಧೆ ಮಾಡುವ ನಿರೀಕ್ಷೆಯಿದೆ.
ಗಾಜಿಕೇರಿ ವಾರ್ಡ್ ನಂ.27ರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಪ್ರಥಮ ಬಾರಿಗೆ ಬಿಎಸ್ಸಾರ್ ಪಕ್ಷದಿಂದ ಎಚ್.ಕೊಟ್ರೇಶ್ ಗೆಲುವು ಸಾಧಿಸಿದ್ದರು. 1 ಬಾರಿ ಪುರಸಭೆ ಅಧ್ಯಕ್ಷರು, 3 ಬಾರಿ ಸದಸ್ಯರಾಗಿದ್ದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಅಂಜಿನಪ್ಪ ಅವರು ಕೊಟ್ರೇಶ್ ವಿರುದ್ಧ ಪರಾಭಗೊಂಡಿದ್ದರು. ಸದ್ಯ ಈ ವಾರ್ಡ್ ಪರಿಶಿಷ್ಟ ಜಾತಿಯಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದರಿಂದ ಎಂ.ವಿ. ಅಂಜಿನಪ್ಪ ಅವರು ಶೀಲಾರಗೇರಿ ವಾರ್ಡ್ ನಂ.10ರಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ವಾರ್ಡ್ ನಂ.23ರ ಕೊರವರಗೇರಿಯ ಸಾಮಾನ್ಯ ವರ್ಗ ಮೀಸಲಾತಿಯಲ್ಲಿ 1 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಪರಿಶಿಷ್ಟ ಪಂಗಡದ ಸದಸ್ಯ ಅರುಣ ಪೂಜಾರ ಅವರ ಹಾಲಿ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ತೆಕ್ಕದಗರಡಿಕೇರಿ ವಾರ್ಡ್ ನಂ.25ರಲ್ಲಿ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ. ಗುಂಡಿನಕೇರಿ ವಾರ್ಡ್ ನಂ.24ರಲ್ಲಿ ಸಾಮಾನ್ಯ ಕ್ಷೇತ್ರದಿಂದ 2 ಬಾರಿ ಗೆಲುವು ಸಾಧಿಸಿದ್ದ ಸದಸ್ಯ ಜಾವೂರ್ ಅವರ ಕ್ಷೇತ್ರ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಬಾಣಗಾರಪೇಟೆ ವಾರ್ಡ್ ನಂ.6 ಹಿಂದುಳಿದ ವರ್ಗ(ಎ) ಮೀಸಲಾತಿಯಲ್ಲಿ ಗೆಲುವು ಪಡೆದಿದ್ದ ಪುರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಮಹಬೂಬ್‌ಸಾಬ್ ಅವರ ವಾರ್ಡ್ ಈ ಬಾರಿ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾಗಿರುವುದರಿಂದ ವಾರ್ಡ್ ಬದಲಾವಣೆ ಅನಿವಾರ್ಯವಾಗಿದೆ. ಮೀಸಲಾತಿ ಬದಲಾವಣೆ ಪರಿಣಾಮ ಘಟಾನುಘಟಿ ನಾಯಕರು ವಾರ್ಡ್‌ಗಳನ್ನು ಬದಲಾಯಿಸುವ ಅನಿವಾರ್ಯತೆ ಬಂದಿದೆ. ಕಳೆದ ಬಾರಿಯ ಮೀಸಲಾತಿ ಪರಿಣಾಮ ಸ್ಪರ್ಧಿಸಲು ಅವಕಾಶ ಸಿಗದಿರುವ ಮತ್ತು ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಅನೇಕರಿಗೆ ಅವಕಾಶದ ಬಾಗಿಲು ತೆರೆದುಕೊಂಡಿದೆ ಎಂದೇ ಹೇಳಲಾಗುತ್ತಿದೆ.
•
ಎಸ್.ಎನ್.ಕುಮಾರ್ ಪುಣಬಗಟ್ಟಿ