ಹರಪನಹಳ್ಳಿ: ತಾಲೂಕಿನಾದ್ಯಾಂತ ಬುಧವಾರ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಹಾನಿಗೊಳಗಾದ ಹಲುವಾಗಲು, ತಾವರಗುಂದಿ, ನಿಟ್ಟೂರು, ಅಲಗಿಲವಾಡ ಗ್ರಾಮಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಗಟೇರಿ ಹೋಬಳಿ ಸೇರಿದಂತೆ ಹಲವೆಡೆ ರೇಷ್ಮೆ ಬೆಳೆಯ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಹಲುವಾಗಲು ಗ್ರಾಮದ ಸುತ್ತಮುತ್ತ ಹತ್ತಿ-300 ಎಕರೆ, ಭತ್ತ-500 ಎಕರೆ ಸೇರಿ ಒಟ್ಟು 800 ಎಕರೆ, ತಾವರೆಗುಂದಿಯಲ್ಲಿ ಅಡಿಕೆ, ಮಾವಿನ ಗಿಡ ಬಿದ್ದಿವೆ. ಅಲಗಿಲವಾಡದಲ್ಲಿ 25 ಎಕರೆ ಬಾಳೆ ಬೆಳೆ ಹಾನಿಯಾಗಿದೆ. ಈ ಕುರಿತು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ 2 ದಿನದೊಳಗೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.
ಕಳೆದ ವರ್ಷದ ಕೂಡ ಹಲುವಾಗಲು, ತಾವರಗೊಂದಿ ಭಾಗದಲ್ಲಿ ನೆರೆ ಹಾವಳಿಯಿಂದ ಹಾನಿಯಾದ ಬೆಳೆಗೆ ಪರಿಹಾರ ಕೊಟ್ಟಿಲ್ಲ ಅದನ್ನು ಕೂಡಲೇ ವಿತರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಹಿರೇಮೇಗಳಗೆರೆ ಭಾಗದಲ್ಲಿ ಅಡಿಕೆ, ಭತ್ತ ನಷ್ಟವಾಗಿದೆ. ಸಚಿವರು ಮತ್ತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಶೀಘ್ರವೇ ಪರಿಹಾರ ವಿತರಿಸುವಂತೆ ಮಾತನಾಡುತ್ತೇನೆ. ನಿಟ್ಟೂರು ಬಸಾಪುರದಿಂದ ತಾವರಗುಂದಿ ಗ್ರಾಮದವರೆಗೆ 3 ಕೋಟಿ ಅನುದಾನದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಹಾಗೂ ಹಲುವಾಗಲು ಮತ್ತು ತಾವರಗುಂದಿ ಗ್ರಾಮದ ನನೆಗುದಿಗೆ ಬಿದ್ದ ಸಿ.ಸಿ ರಸ್ತೆ ಪೂರ್ಣಗೊಳಿಸಲು 1 ಕೋಟಿ ಅನುದಾನ ನೀಡಿದ್ದು, ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.
ತಾಪಂ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ತಹಶೀಲ್ದಾರ್ ಡಾ.ಜಿ.ನಾಗವೇಣಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ, ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ಆರ್.ಲೊಕೇಶ್, ಎಸ್ಟಿ ಮೋರ್ಚಾ ಉಪಾಧ್ಯಕ್ಷ ನಿಟ್ಟೂರು ಹಾಲಪ್ಪ, ಎಂ.ಮಲ್ಲೇಶ್, ಬೆಣ್ಣಿಹಳ್ಳಿ ಕರೇಗೌಡ, ಯು.ಪಿ.ನಾಗರಾಜ್, ರಾಘವೇಂದ್ರಶೆಟ್ಟಿ, ಸಂತೋಷ್, ಕೆ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.