ಹರಪನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಿರಾಣಿ ಅಂಗಡಿಗಳ ಮುಂದೆ ಮಾರ್ಕ್ ಬಾಕ್ಸ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಗ್ರಾಹಕರಿಗೆ ಸ್ಯಾನಿಟೈಸರ್ ಇಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ದಿನಸಿ ಮಾರಾಟ ಮಾಡಿದಲ್ಲಿ ಲೈಸನ್ಸ್ ರದ್ದು ಮಾಡಿ ಜೈಲಿಗಟ್ಟಲಾಗುವುದು ಎಂದು ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ಎಚ್ಚರಿಕೆ ನೀಡಿದರು.
ಪಟ್ಟಣದ ಜ್ಯೂನಿಯರ್ ಕಾಲೇಜ್ ಆವರಣದಲ್ಲಿ ಆಯೋಜಿಸಿದ್ದ ಕಿರಾಣಿ ಅಂಗಡಿ ಮಾಲೀಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರಿ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಿಗದಿಪಡಿಸಿ ಸಮಯ ಪಾಲನೆ ಮಾಡಬೇಕು. ಪ್ರತಿಯೊಂದು ಅಂಗಡಿಗೆ ಕನಿಷ್ಠ 10 ಮಾರ್ಕ್ ಬಾಕ್ಸ್ ಹಾಕಿಕೊಳ್ಳಬೇಕು. ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿರುವುದರ ಬಗ್ಗೆ ಶಾಸಕರು ಮತ್ತು ಸಾರ್ವಜನಿಕರಿಂದ ಬಗ್ಗೆ ದೂರು ಬಂದಿವೆ. ದರ ಪಟ್ಟಿ ಕುರಿತು ಮುಖ್ಯಾಧಿಕಾರಿ ಅವರೊಂದಿಗೆ ಚರ್ಚೆ ನಡೆಸಬೇಕು. ಇನ್ಮುಂದೆ ಹಾಗಾಗದಂತೆ ನೋಡಿಕೊಳ್ಳಿ ಎಂದರು.
ಡಿವೈಎಸ್ಪಿ ಮಹೇಶ್ ದೊಡ್ಡಮನೆ ಮತ್ತು ಸಿಪಿಐ ಕೆ.ಕುಮಾರ್ ಮಾತನಾಡಿ, 5ರೂ. ವಸ್ತುವನ್ನು 10ರೂ.ಗೆ ಮಾರಾಟ ಮಾಡುವುದು ಕಂಡು ಬಂದಿದೆ. ದಾವಣಗೆರೆ ನಗರದ ದರ ಪಟ್ಟಿಯಂತೆ ಮಾರಾಟ ಮಾಡಬೇಕು. ಬೆಳಗ್ಗೆ 7ರಿಂದ 11 ರವರೆಗೆ ಮಾರಾಟಕ್ಕೆ ಕಾಲಾವಕಾಶ ನೀಡಲಾಗಿದ್ದು, ಗ್ರಾಹಕರು ಕನಿಷ್ಠ 4 ಅಡಿ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಾನವೀಯ ನೆಲೆಗಟ್ಟಿನಲ್ಲಿ ವ್ಯಾಪಾರ ಮಾಡಬೇಕು. ಗ್ರಾಹಕರನ್ನು ದೇವರಂತೆ ಕಾಣಬೇಕು. ತಮ್ಮ ಅಂಗಡಿಯಲ್ಲಿ ರೇಷನ್ ಖರೀದಿಗೆ ಕಡ್ಡಾಯವಾಗಿ ಚೀಟಿಯಲ್ಲಿ ದರ ಬರೆದುಕೊಡಬೇಕು. ಇದರಿಂದ ಪಾರದರ್ಶಕವಾಗಿರಲು ಸಾಧ್ಯವಾಗುತ್ತದೆ. ಕಾನೂನು ಉಲ್ಲಂಘನೆ ಮಾಡುವವರಿಗೆ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಿ.ನಾಗರಾಜ ನಾಯ್ಕ ಮಾತನಾಡಿ, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ದರ ವ್ಯತ್ಯಾಸದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಶೇ.5ರಷ್ಟು ದರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಲೈಸನ್ಸ್ ರದ್ದು ಪಡಿಸಲಾಗುವುದು. ಭಾನುವಾರದಿಂದ ಪುರಸಭೆ ವತಿಯಿಂದಲೇ ದಾವಣಗೆರೆಯಿಂದ ಸಗಟು ವ್ಯಾಪಾರಿಗಳಿಂದ ದರ ಪಟ್ಟಿ ತರಿಸಿಕೊಂಡು ಅದರಂತೆ ಮಾರಾಟ ಮಾಡಲು ಸೂಚನೆ ನೀಡುವುದಾಗಿ ತಿಳಿಸಿದರು.
ಮಾರುಕಟ್ಟೆಯಲ್ಲಿ 100ರೂ ಇದ್ದ ದಿನಸಿಯನ್ನು 150ರೂ ಮಾರಾಟ ಮಾಡಿದ್ದಲ್ಲಿ ತಪ್ಪು. ಆದರೆ ಸಾರಿಗೆ ವೆಚ್ಚ ಕೂಡ ನಾವೇ ಭರಿಸಬೇಕಾಗಿರುವುದರಿಂದ ಒಂದೆರಡು ರೂ. ಹೆಚ್ಚಿಗೆ ಮಾರಾಟ ಮಾಡಲು ಅವಕಾಶ ಕೊಡಬೇಕು. ಗ್ರಾಹಕರಿಗೆ ಎಷ್ಟು ಹೇಳಿದರೂ ಮಾರ್ಕ್ ಬಾಕ್ಸ್‌ನಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಪೊಲೀಸರನ್ನು ಬೀಟ್ ಕಳಿಸಿ ಕೊಡಿ ಎಂದು ವ್ಯಾಪಾರಿಗಳು ಅಧಿಕಾರಿಗಳಲ್ಲಿ ವಿನಂತಿಸಿದರು. ತಹಶೀಲ್ದಾರ್ ಡಾ| ನಾಗವೇಣಿ, ಪಿಎಸ್‌ಐ ಸಿ.ಪ್ರಕಾಶ್, ಪುರಸಭೆ ಆರೋಗ್ಯಾಧಿಕಾರಿ ಮಂಜುನಾಥ, ಮಲ್ಲೇಶ ನಾಯ್ಕ, ಕೊಟ್ರೇಶ್, ರವಿ ಇತರರಿದ್ದರು.