Advertisement
ಕಳೆದ ಪುರಸಭೆ ಚುನಾವಣೆಯಲ್ಲಿ ಒಟ್ಟು 27 ಸ್ಥಾನಗಳಲ್ಲಿ 7 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ಕಾಂಗ್ರೆಸ್ ಪಕ್ಷವು ಬಿಎಸ್ಸಾರ್, ಕೆಜೆಪಿ, ಪಕ್ಷೇತರ ಬೆಂಬಲದೊಂದಿಗೆ ಪಕ್ಷದ ಆಂತರಿಕ ಒಪ್ಪಂದದಂತೆ 3 ಜನ ಅಧ್ಯಕ್ಷರೊಂದಿಗೆ ಆಡಳಿತ ನಡೆಸಿತ್ತು. ನಂತರ ಬದಲಾದ ರಾಜಕೀಯ ಚಿತ್ರಣದಲ್ಲಿ ಬಿಜೆಪಿ ಅಧಿಕಾರದ ಗದ್ದುಗೇರಿ ಅಧಿಕಾರ ಅವಧಿ ಪೂರ್ಣಗೊಳಿಸಿದೆ. ಇದೀಗ ಪುನಃ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ಪಡೆಯಲು ಹವಣಿಸುತ್ತಿವೆ.
Related Articles
Advertisement
ಹಿರಿಯರು ಮತ್ತು ಯುವಕರನ್ನು ಸಮತೋಲದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅಗಲಿಕೆ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಾಮಿಸಿದೆ. ಬಹುತೇಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಮುಖಂಡರ ಸಭೆ ನಡೆಸಿಯೇ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆಗಳಿವೆ. ಆದರೆ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಮತ ಭುಗಿಲೇಳುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ. ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಕರುಣಾಕರರೆಡ್ಡಿ ಶಾಸಕರಾಗಿರುವುದರಿಂದ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ಅದರ ಸದುಪಯೋಗ ಪಡೆದುಕೊಂಡು ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಸಿದ್ಧತೆ ನಡೆಸಿದೆ. ಅಧಿಕಾರದಿಂದ ವಂಚಿತವಾದ ಕಾಂಗ್ರೆಸ್ ಪಕ್ಷವು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಾರಥ್ಯದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಮತ್ತೂಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಿದ್ದು, ವಾರ್ಡನ ಹಿರಿಯರು, ಪಕ್ಷದ ಪ್ರಮುಖರು ಸೂಚಿಸುವ ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕಿಳಿಸಲು ರಣತಂತ್ರ ರೂಪಿಸುತ್ತಿದೆ.
ಎಸ್.ಎನ್.ಕುಮಾರ್ ಪುಣಬಗಟ್ಟಿ