Advertisement

ಪರಿಶಿಷ್ಟ ಜಾತಿ ವಾರ್ಡ್‌ಗಳ ಮೇಲೆ ಮೂರೂ ಪಕ್ಷದ ಕಣ್ಣು!

01:02 PM May 13, 2019 | Naveen |

ಹರಪನಹಳ್ಳಿ: ಸ್ಥಳೀಯ ಪುರಸಭೆ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿರುವ ಬೆನ್ನಲ್ಲಿಯೇ ಪುರಸಭೆಯ 27 ವಾರ್ಡ್‌ಗಳ ಪೈಕಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮೂರು ವಾರ್ಡ್‌ಗಳೇ ಅತೀ ಹೆಚ್ಚು ಚರ್ಚೆಯಲ್ಲಿವೆ. ಅಲ್ಲದೇ ಈ ಚುನಾವಣೆಯ ಪ್ರಮುಖ ಕೇಂದ್ರ ಬಿಂದುಗಳಾಗಿ ಗುರುತಿಸಿಕೊಂಡಿವೆ.

Advertisement

ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಪರಿಶಿಷ್ಟ ಜಾತಿ ವಾರ್ಡ್‌ಗಳೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ಟಾರ್ಗೆಟ್ ಆಗಿವೆ. ವಾರ್ಡ್‌ ನಂ.3 ಅಗಸನಕಟ್ಟೆ (ಎಸ್ಸಿ ಮಹಿಳೆ), 10 ಶೀಲಾರಗೇರಿ (ಪರಿಶಿಷ್ಟ ಜಾತಿ), 21 ಅಂಬೇಡ್ಕರ್‌ ನಗರ (ಎಸ್‌ಸಿ) ಮೀಸಲಾತಿ ವಾರ್ಡ್‌ಗಳಾಗಿವೆ. ಈ ಹಿನ್ನೆಲೆಯಲ್ಲಿ ಮೂರು ವಾರ್ಡ್‌ಗಳಲ್ಲಿ ಗೆಲ್ಲುವ ಆಕಾಂಕ್ಷಿಗಳಿಗಾಗಿ ಹುಡುಕಾಟ ನಡೆದಿದ್ದು, ಅನ್ಯ ವಾರ್ಡ್‌ಗಳ ನಾಯಕರು ಈ ವಾರ್ಡ್‌ಗಳಿಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಪರಿಶಿಷ್ಟ ಜಾತಿ ವಾರ್ಡ್‌ನಿಂದ ಗೆಲುವು ಸಾಧಿಸಿದವರು ಅಧ್ಯಕ್ಷ ಸ್ಥಾನ ಅಲಂಕರಿಸುವ ಅವಕಾಶವಿರುವುದರಿಂದ ಆಕಾಂಕ್ಷಿಗಳಲ್ಲಿ ಅಳೆದು ತೂಗಿ ಗೆಲ್ಲುವ ಸಾಮರ್ಥಯವಿರುವವರಿಗೇ ಟಿಕೆಟ್ ನೀಡುವ ಲೆಕ್ಕಾಚಾರ ಮೂರು ಪಕ್ಷಗಳದ್ದು. ಪ್ರತಿಯೊಂದು ವಾರ್ಡ್‌ಗೂ ಒಂದೊಂದು ಪಕ್ಷದಿಂದ ನಾಲ್ಕೈದು ಜನ ಆಕಾಂಕ್ಷಿಗಳಾಗಿದ್ದಾರೆ. ಹಳ್ಳಿಗಳಿಂದ ವಲಸೆ ಬಂದು ಪಟ್ಟಣದಲ್ಲಿ ನೆಲೆಸಿರುವವರು ಕೂಡ ಈ ಬಾರಿ ಪಟ್ಟಣದಲ್ಲಿ ಮತದಾನದ ಹಕ್ಕು ಪಡೆದುಕೊಂಡು ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿ ಟಿಕೆಟ್ ಕೇಳುತ್ತಿರುವುದರಿಂದ ಪಕ್ಷಗಳ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.

ವಾರ್ಡ್‌ ನಂ.3 ಅಗಸನಕಟ್ಟೆಯಲ್ಲಿ ಎಸ್ಸಿ ಮಹಿಳೆ ಮೀಸಲಾತಿ ಇರುವುದರಿಂದ ಕಾಂಗ್ರೆಸ್‌ನಿಂದ ಸಿ.ಎಂ.ಸುಮಲತಾ ಶಶಿಕುಮಾರ, ಗೀತಾ ಮಹಾಂತೇಶ, ಶೋಭಾ ಮಂಜುನಾಥ್‌, ಅನಿತಾ ಎಲ್.ಮಂಜ್ಯನಾಯ್ಕ, ಬಿಜೆಪಿಯಿಂದ ಪಿ.ಜಿ.ರುಕ್ಕುಣ್ಮೆಮ್ಮ, ಧನಲಕ್ಷ್ಮಿಚಂದ್ರಪ್ಪ, ಜೆಡಿಎಸ್‌ನಿಂದ ಇಬ್ಬರ ನಡುವೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದೆ. 10ರ ಶೀಲಾರಗೇರಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಓ.ಮಹಾಂತೇಶ್‌, ಬಿಜೆಪಿಯಿಂದ ಜಟ್ಟೆಪ್ಪ ಮತ್ತು ಉಚ್ಚೆಂಗೆಪ್ಪ, ಜೆಡಿಎಸ್‌ ಪಕ್ಷದಿಂದ 2 ಜನರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ವಾರ್ಡ್‌ ನಂ.21 ಅಂಬೇಡ್ಕರ್‌ ನಗರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಪುರಸಭೆ ಸದಸ್ಯ ಎಚ್.ಕೊಟ್ರೇಶ್‌ ಮತ್ತು ಬಿಜೆಪಿಯಿಂದ ಅಂಜಿನಪ್ಪ, ಜೆಡಿಎಸ್‌ ಪಕ್ಷದಿಂದ ಒಬ್ಬರು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದೆ. ಬಹುತೇಕ ಕಡೆ ಬಂಡಾಯ ಅಭ್ಯರ್ಥಿಗಳಿಗೆ ಗಾಳ ಹಾಕಿ ಟಿಕೆಟ್ ನೀಡುವ ಸಾಧ್ಯತೆಗಳು ಹೆಚ್ಚಿವೆ. ಹಾಗೆಯೇ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಬಹುದಾದ ಅಭ್ಯರ್ಥಿಗಳ ವಿರುದ್ಧ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೋಲಿಸಲು ಕೆಲವರು ತೆರೆಮರೆಯಲ್ಲಿ ಒಳ ಸಂಚು ರೂಪಿಸುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಸದ್ಯದ ಪರಿಸ್ಥಿಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿ ಆಯ್ಕೆ ಮಾಡಬೇಕಾದ ಹೊಣೆ ಪಕ್ಷದ ವರಿಷ್ಠರ ಮೇಲಿದೆ.

Advertisement

ಸಚಿವ ಪಿ.ಟಿ.ಪರಮೇಶ್ವರನಾಯ್ಕ ರೀ ಎಂಟ್ರಿ: ಪುರಸಭೆ ಚುನಾವಣೆ ಸಂಬಂಧ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಆಯೋಜಿಸಿದ್ದು, ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಸಭೆಗೆ ಆಗಮಿಸುತ್ತಿದ್ದಾರೆ. ಒಂದು ದಶಕಗಳ ನಂತರ ಪುನಃ ಹರಪನಹಳ್ಳಿ ರಾಜಕಾರಣಕ್ಕೆ ಪರಮೇಶ್ವರ ನಾಯ್ಕ ಎಂಟ್ರಿ ಕೊಡುತ್ತಿದ್ದು, 2008ರಲ್ಲಿ ಪಕ್ಕದ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ನಡೆಸಿದಾಗಿನಿಂದ ಪಿ.ಟಿ.ಪರಮೇಶ್ವರನಾಯ್ಕ ಹರಪನಹಳ್ಳಿ ರಾಜಕಾರಣದಿಂದ ದೂರ ಉಳಿದಿದ್ದರು.

ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್‌ ಅವರ ಪುತ್ರ ಎಂ.ಪಿ.ರವೀಂದ್ರ ಮತ್ತು ಪಿ.ಟಿ.ಪರಮೇಶ್ವರನಾಯ್ಕ ನಡುವಿನ ಮುನಿಸು ಪರಮೇಶ್ವರನಾಯ್ಕ ಅವರ ಬೆಂಬಲಿಗರಿಗೆ ಇಕ್ಕಟ್ಟಿನ ಪರಿಸ್ಥಿತಿ ತಂದಿತ್ತು. ಎಂ.ಪಿ.ರವೀಂದ್ರ ನಿಧನರಾದ ನಂತರ ಅವರ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಪಕ್ಷದ ಸಾರಥ್ಯ ವಹಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಆದರೂ ಪರಮೇಶ್ವರನಾಯ್ಕ ಮತ್ತು ರವೀಂದ್ರ ಬೆಂಬಲಿಗರು ಒಂದೇ ವೇದಿಕೆಯಡಿ ಸೇರುತ್ತಿರಲಿಲ್ಲ. ಇಂದು ನಡೆಯುವ ಸಭೆಯಲ್ಲಿ ಇಬ್ಬರು ನಾಯಕರ ಬೆಂಬಲಿಗರು ಒಂದೇ ವೇದಿಕೆಯಡಿ ಸಮ್ಮಿಲಗೊಳ್ಳುತ್ತಿರುವುದರಿಂದ ಕಾಂಗ್ರೆಸ್‌ ಪಕ್ಷದ ಶಕ್ತಿ ಇನ್ನಷ್ಟು ಬಲಿಷ್ಠಗೊಳ್ಳಲಿದೆ.

ಹರಪನಹಳ್ಳಿ ಕ್ಷೇತ್ರದಲ್ಲಿ ಶಾಸಕರಾಗಿ ಅಡಳಿತ ನಡೆಸಿ ಅನುಭವ ಹೊಂದಿರುವ ಪಿ.ಟಿ. ಪರಮೇಶ್ವರ ನಾಯ್ಕ ತಮ್ಮ ಬೆಂಬಲಿಗರ ಹಿತ ಕಾಯಲು ಪುರಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಹಿಡಿತ ಸಾಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪರಮೇಶ್ವರನಾಯ್ಕ ಮತ್ತು ರವೀಂದ್ರ ಬೆಂಬಲಿಗರು ಪಕ್ಷದ ಹಿತದೃಷ್ಟಿ ಮತ್ತು ಪುರಸಭೆ ಚುನಾವಣೆಯಲ್ಲಿ ಗೆಲುವು ಪಡೆಯಲು ಎಲ್ಲರೂ ಒಂದೇ ವೇದಿಕೆಯಡಿ ಸೇರಲು ಅಡಿ ಇಟ್ಟಿದ್ದಾರೆ.

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next