ಹರಪನಹಳ್ಳಿ: ತಾಲೂಕಿನಲ್ಲಿರುವ ಅನೇಕ ಸರ್ಕಾರಿ ಶಾಲೆಗಳ ಕೊಠಡಿಗಳು ದುರಸ್ತಿ ಭಾಗ್ಯ ಕಾಣದೇ ನರಳುತ್ತಿವೆ. ಮತ್ತೂಂದೆಡೆ ಶಿಕ್ಷಕರ ಕೊರತೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯದೇ ಮಕ್ಕಳು ಖಾಸಗಿ ಶಾಲೆ ಕಡೆ ಮುಖ ಮಾಡುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಇಲ್ಲಿಯ ಸಮಸ್ಯೆಗಳು ನಿವಾರಣೆ ಆಗುವ ಭರವಸೆ ಮೂಡಿದೆ.
ಕಳೆದ 2007 ಸೆ.2ರಂದು ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ ಪರಿಣಾಮ ಇಡೀ ಜಿಲ್ಲಾಡಳಿತವೇ ಗ್ರಾಮಕ್ಕೆ ಆಗಮಿಸಿ ಅನೇಕ ವರ್ಷಗಳಿಂದ ಈಡೇರದ ಮೂಲ ಸೌಕರ್ಯ ಕಲ್ಪಿಸಿದ್ದರು. ಗ್ರಾಮಕ್ಕೆ ತೆರಳು ಸುಸಜ್ಜಿತ ರಸ್ತೆ, ಚರಂಡಿ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗಾಗಿ ಈ ಬಾರಿಯೂ ಗ್ರಾಮ ವಾಸ್ತವ್ಯದ ಭಾಗ್ಯ ತಾಲೂಕಿಗೆ ದೊರಕಿದರೆ ಅನೇಕ ಶಾಲೆಗಳ ಸಮಸ್ಯೆಗಳು ಬಗೆಹರಿಸುವ ಸಾಧ್ಯತೆಗಳಿವೆ.
ದುರಸ್ತಿ ಭಾಗ್ಯ ಕಾಣದ ಕೊಠಡಿಗಳು: 2018-19ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 173 ಕೊಠಡಿಗಳು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕಿದೆ. ಇದಲ್ಲದೇ 81 ಹೊಸ ಕೊಠಡಿಗಳ ನಿರ್ಮಾಣಕ್ಕೆ ಕಳೆದ ಸಾಲಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರೌಢ ಶಾಲೆಗಳಲ್ಲಿ 28 ಕೊಠಡಿ ನೆಲಸಮ ಹಾಗೂ 24 ಹೆಚ್ಚುವರಿ ಕೊಠಡಿ ನಿರ್ಮಿಸಬೇಕಿದೆ. ಒಟ್ಟು 9 ಪ್ರೌಢ ಶಾಲೆಗಳಲ್ಲಿ 10 ಕುಡಿಯುವ ನೀರಿನ ಘಟಕ, 9 ಶಾಲೆಗಳಲ್ಲಿ 21 ಶೌಚಾಲಯ ನಿರ್ಮಾಣವಾಗಬೇಕಿದೆ. ಸರ್ಕಾರಿ ಹಿರಿಯ ಮತ್ತು ಕಿರಿಯ ಶಾಲೆಗಳ ಪೈಕಿ 192 ಶಾಲೆಗಳಿಗೆ ಶೌಚಾಲಯದ ಅಗತ್ಯವಿದೆ. 48 ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ರವಾನಿಸಿದ್ದಾರೆ.
ತಾಲೂಕಿನ ಕಾವಲಹಳ್ಳಿ, ಇಟ್ಟಿಗುಡಿ, ಕಮ್ಮತ್ತಹಳ್ಳಿ ಸರ್ಕಾರಿ ಹಿರಿಯ ಶಾಲೆಗಳಿಗೆ ತಲಾ 1.43 ಲಕ್ಷ ರೂ. ಜಂಬುಲಿಂಗನಹಳ್ಳಿ, ಮಾಚಿಹಳ್ಳಿ, ಬೆಂಡಿಗೇರಿ ತಾಂಡಾ ಶಾಲೆಗಳಿಗೆ ತಲಾ 1.42 ಲಕ್ಷ ರೂ. ಸೇರಿ ಒಟ್ಟು 8.55 ಕೋಟಿ ರೂ. ಅನುದಾನ ಕೊಠಡಿಗಳ ದುರಸ್ತಿಗೆ ಬಿಡುಗಡೆಯಾಗಿದ್ದು, ಕೆಲಸ ಪ್ರಾರಂಭವಾಗಬೇಕಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ನೀಲಗುಂದ, ಪಟ್ಟಣದ ಆಚಾರ್ಯ ಬಡಾವಣೆ, ಮೇನ್ ಶಾಲೆ, ಕಣವೆಹಳ್ಳಿ, ಶಿಂಗ್ರಿಹಳ್ಳಿ, ಎನ್.ಶಿರನಹಳ್ಳಿ, ಚಿಗಟೇರಿ ಮ್ಯಾಸರಹಟ್ಟಿ, ಮದಾಪುರ, ಹುಲಿಕಟ್ಟಿ, ದ್ಯಾಪನಾಯಕನಹಳ್ಳಿ, ಹೊಸಕೋಟೆ, ಜಿಟ್ಟಿನಕಟ್ಟಿ, ಹೊಸ ಓಬಳಾಪುರ, ಮಾದಿಹಳ್ಳಿ, ರಾಮಘಟ್ಟ, ಉಚ್ಚಂಗಿದುರ್ಗ ಶಾಲೆಗಳಿಗೆ ತಲಾ 8.71ಲಕ್ಷ ರೂ.ದಂತೆ ಒಟ್ಟು 1.63 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಿದೆ.
ಸರ್ಕಾರಿ ಕಿರಿಯ ಮತ್ತು ಹಿರಿಯ ಶಾಲೆಗಳ ಪೈಕಿ ಮುಖ್ಯ ಶಿಕ್ಷಕರು-55, ಕನ್ನಡ ಶಿಕ್ಷಕರು-87, ಇಂಗ್ಲಿಷ್-46, ಹಿಂದಿ-3, ಉರ್ದು-7, ವಿಜ್ಞಾನ-ಗಣಿತ-62, ದೈಹಿಕ ಶಿಕ್ಷಣ-2 ಸೇರಿ ಒಟ್ಟು 232 ಶಿಕ್ಷಕರ ಕೊರತೆಯಿದೆ. ಪ್ರೌಢ ಶಾಲೆಗಳ ಪೈಕಿ ಮುಖ್ಯೋಪಾಧ್ಯಾಯ-3, ಕನ್ನಡ-2, ಇಂಗ್ಲಿಷ್-10, ಸಮಾಜ-1, ಗಣಿತ-2, ವಿಜ್ಞಾನ-1, ದೈಹಿಕ-5, ಚಿತ್ರಕಲಾ-2, ತೋಟಗಾರಿಕೆ-ಹೊಲಿಗೆ-5, ಸಂಗೀತಾ-3 ಸೇರಿ ಒಟ್ಟು 35 ಶಿಕ್ಷಕರ ಅವಶ್ಯಕತೆಯಿದೆ.
ಶತಮಾನ ಶಾಲೆಗಳು ಶೋಚನೀಯ: ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜ್(ಪ್ರೌಢ) ಶಾಲೆ, ಪಟ್ಟಣದ ಸರ್ಕಾರಿ ಮೇನ್ ಶಾಲೆ, ಉಚ್ಚಂಗಿದುರ್ಗ, ದುಗ್ಗಾವತ್ತಿ, ತೆಲಿಗಿ, ತೌಡೂರು, ಹಲುವಾಗಲು, ಕಂಚೀಕೆರಿ, ಕುಂಚೂರು, ಹಿರೇಮೇಗಳಗೆರೆ, ಮೈದೂರು, ಬೆಣ್ಣೆಹಳ್ಳಿ, ನೀಲಗುಂದ ಸೇರಿ ಒಟ್ಟು 14 ಗ್ರಾಮಗಳಲ್ಲಿ ಶತಮಾನ ಪೂರೈಸಿರುವ ಶಾಲೆಗಳಿವೆ. ಬಹುತೇಕ ಶಾಲೆಗಳ ಮೇಲ್ಛಾವಣೆ ದುರಸ್ತಿ ಆಗಬೇಕಿದೆ. ಪ್ರತಿಯೊಂದು ಶಾಲೆಯ ದುರಸ್ತಿಗೆ 1 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಇನ್ನೂ ಮಂಜೂರಾಗಿಲ್ಲ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಾಲೆಗಳ ಮೂಲ ಡಿಸೈನ್ ಹಾಗೆ ಉಳಿಸಿಕೊಂಡು ದುರಸ್ತಿ ಕಾರ್ಯ ಮಾಡಲು ತಲಾ 1 ಶಾಲೆ 1 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿದ್ದೇವೆ. ಹಲವು ಶಾಲೆಗಳ ಕೊಠಡಿಗಳ ದುರಸ್ತಿ, ಹೊಸ ಕೊಠಡಿಗಳ ನಿರ್ಮಾಣ ಹಾಗೂ ಶಿಕ್ಷಕರ ಕೊರತೆ ನೀಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಲ್ಲದೇ ತಾಲೂಕಿನಲ್ಲಿ 62 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲು 1 ಶಾಲೆಗೆ ತಲಾ 1 ಲಕ್ಷರೂ ಅನುದಾನ ಕೊಡ ಬಿಡುಗಡೆ ಪ್ರಸ್ತಾವನೆ ಸಲ್ಲಿಸಲಾಗಿದೆ. •
ಮಂಜುನಾಥಸ್ವಾಮಿ, ಬಿಇಒ
•
ಎಸ್.ಎನ್.ಕುಮಾರ್ ಪುಣಬಗಟ್ಟಿ