ಹರಪನಹಳ್ಳಿ: ಸರ್ಕಾರಿ ಶಾಲಾ-ಕಾಲೇಜು ಅಂದರೆ ಮಾರುದ್ದ ಹೋಗುತ್ತಿರುವ ಇಂದಿನ ದಿನದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಲು ವಿದ್ಯಾರ್ಥಿಗಳು ಮುಂದೆ ಬರುತ್ತಿದ್ದು, ಪ್ರವೇಶ ಅವಕಾಶಕ್ಕಿಂತ ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ದಾಖಲಾಗಿರುವುದು ತಲೆಬಿಸಿಯಾಗಿದೆ.
ಕಳೆದ 2007ರಲ್ಲಿ ಪಟ್ಟಣದಲ್ಲಿ ಪ್ರಾರಂಭಗೊಂಡಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 2019-20ನೇ ಸಾಲಿನ ಶೈಕ್ಷಣಿಕ ವರ್ಷ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಪಿಎಸ್‌ಇಡಿ ಸೇರಿ ಒಟ್ಟು 300 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಈಗಾಗಲೇ ಇಲ್ಲಿ 418 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಕಾಲೇಜಿಗೆ ಬಂದ ಎಲ್ಲಾ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ಆದೇಶವಿದೆ. ಆದರೆ ದಾವಣಗೆರೆ ವಿಶ್ವವಿದ್ಯಾಲಯ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿ ನೀಡುತ್ತಿಲ್ಲ. ಈ ಸಂಬಂಧ ಕಾಲೇಜು ಮತ್ತು ವಿಶ್ವವಿದ್ಯಾಲಯ ನಡುವೆ ಹಗ್ಗಜಗ್ಗಾಟ ನಡೆದಿದೆ.
ಸರ್ಕಾರಿ ಕಾಲೇಜಿಗೆ ಸೇರಲು ಬಿಎ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದೆ. ದಾವಣಗೆರೆ ವಿಶ್ವವಿದ್ಯಾಲಯ ಹೆಚ್ಚುವರಿ ಪಟ್ಟಿಗೆ ಪ್ರವೇಶ ಮಿತಿಯೊಂದಿಗೆ ಶೇ.25ರಷ್ಟು ಹೆಚ್ಚುವರಿ ಪ್ರವೇಶ ಮಾಡಿಕೊಳ್ಳಲು ಅವಕಾಶ ನೀಡಿದೆ. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಭಾಗಕ್ಕೆ 90 ಮಕ್ಕಳ ದಾಖಲಾತಿಗೆ ಅವಕಾಶವಿದೆ. ಆದರೆ ಈಗಾಗಲೇ 122 ವಿದ್ಯಾರ್ಥಿಗಳು ದಾಖಲಾಗಿದ್ದು, ವಿಶ್ವವಿದ್ಯಾಲಯ ಹೆಚ್ಚುವರಿ ಪಟ್ಟಿಯ ಕೇವಲ 22 ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿರುವುದರಿಂದ ಉಳಿದ 10 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇದಲ್ಲದೇ ಇದೇ ವಿಭಾಗಕ್ಕೆ ಸೇರಲು ಕನಿಷ್ಠ 100 ವಿದ್ಯಾರ್ಥಿಗಳ ಕಾಯುತ್ತಿದ್ದಾರೆ.
ಹೆಚ್ಚುವರಿ ಪಟ್ಟಿಯ 22 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವ ವಿವಿ ಶುಲ್ಕದ ಜತೆಗೆ ಹೆಚ್ಚುವರಿಯಾಗಿ 1 ಸಾವಿರ ರೂ. ಹಾಗೂ ಬಿಬಿಎಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ತಲಾ 1500 ರೂ. ಬಿಸಿಎ ವಿದ್ಯಾರ್ಥಿಗಳಿಗೆ 4000 ರೂ. ಶುಲ್ಕ ಸಂಗ್ರಹಿಸುವಂತೆ ಸೂಚನೆ ನೀಡಿದೆ. ಪ್ರವೇಶ ಮೀತಿ ಹೆಚ್ಚಳಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಿದಲ್ಲಿ ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಆದರೆ ಸರ್ಕಾರಿ ಶಾಲೆ-ಕಾಲೇಜುಗಳಿಗೆ ಮಕ್ಕಳು ದಾಖಲಾಗುವುದು ವಿರಳ ಎನ್ನುವಂತಹ ದಿನದಲ್ಲಿ ಹೆಚ್ಚುವರಿಯಾಗಿ ಮಕ್ಕಳನ್ನು ಸೇರಿಕೊಳ್ಳಬೇಡಿ ಎನ್ನುವ ವಿಶ್ವವಿದ್ಯಾಲಯದ ನಡೆ ನಿಜಕ್ಕೂ ಅಚ್ಚರಿ ಮೂಡಿಸಿದೆ.
ನಂಜುಂಡಪ್ಪ ವರದಿ ಅನ್ವಯ ಹರಪನಹಳ್ಳಿ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು, ಇಲ್ಲಿ ಮಕ್ಕಳು ಅಭ್ಯಾಸ ಮಾಡುವುದೇ ದುಸ್ತರ. ಇಂತಹುದರಲ್ಲಿ ಶುಲ್ಕ ಕೂಡ ಹೆಚ್ಚಳ ಮಾಡಿ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು ಕಡೆ ಮುಖ ಮಾಡದಂತೆ ವಿವಿ ವ್ಯವಸ್ಥಿತ ಸಂಚು ರೂಪಿಸಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಸರ್ಕಾರಿ ಕಾಲೇಜಿಗೆ ಸೇರ ಬಯಸುವ ಎಲ್ಲಾ ಮಕ್ಕಳನ್ನು ದಾಖಲಿಸಿಕೊಳ್ಳಬೇಕು ಎನ್ನುವ ಸರ್ಕಾರದ ಆದೇಶವನ್ನು ಗಾಳಿಗೆ ತೂರಿರುವ ವಿಶ್ವವಿದ್ಯಾಲಯ ಹೆಚ್ಚುವರಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗುವಂತಹ ತೀರ್ಮಾನಕೈಗೊಂಡಿದೆ.
ಹರಪನಹಳ್ಳಿ ಪಟ್ಟಣದಲ್ಲಿ 3 ಖಾಸಗಿ ಪದವಿ ಕಾಲೇಜುಗಳಿದ್ದರೂ ಸಹ ಸರ್ಕಾರಿ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಆಗಮಿಸುತ್ತಿರುವುದುದು ಇಲ್ಲಿಯ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ
ವರ್ಷದಿಂದ ವರ್ಷಕ್ಕೆ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶ ಸಿಗುತ್ತಿಲ್ಲ. 3 ಲ್ಯಾಬ್, 1 ಸಭಾಂಗಣ, 10 ತರಗತಿ ಕೊಠಡಿ, 2 ಶೌಚಾಲಯ, ಸಿಬ್ಬಂದಿ ಮತ್ತು ಕ್ರೀಡಾ ಕೊಠಡಿ ನಿರ್ಮಾಣಕ್ಕೆ ಕಾಲೇಜು ಶಿಕ್ಷಣ ಇಲಾಖೆಯಿಂದ 5.70 ಕೋಟಿ ರೂ. ಹಾಗೂ ಹೈ.ಕ ಪ್ರದೇಶ ಮಂಡಳಿಯಿಂದ 12 ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 2.30 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ. ಶೀಘ್ರವೇದಲ್ಲಿಯೇ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ.
•
ಎನ್.ಎಂ.ನಾಗರಾಜ್,
ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ.