ಹರಪನಹಳ್ಳಿ: ಐದು ದಶಕಗಳಿಂದ ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸುವ ಕಾಯಕ ಮಾಡುತ್ತಿರುವ ಪಟ್ಟಣದ ಅಶ್ರಯ ಕಾಲೋನಿಯ ನಿವಾಸಿ ಹಗಲು ವೇಷಗಾರ ಮೋತಿ ರಾಮಣ್ಣ (65) ಅವರು 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗರಿಮೆಗೆ ಪಾತ್ರರಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಪುರ ಗ್ರಾಮದವರಾದ ಮೋತಿ ರಾಮಣ್ಣನವರ ಕುಟುಂಬ ಕಳೆದ ಏಳು ದಶಕಗಳ ಹಿಂದೆಯೇ ಹರಪನಹಳ್ಳಿ ತಾಲೂಕಿಗೆ ವಲಸೆ ಬಂದಿದೆ. ತನ್ನ ಅಜ್ಜ ಮತ್ತು ತಂದೆ ಮೋತಿ ಶಂಕ್ರಪ್ಪ ಅವರಿಂದ ಬಳುವಳಿಯಾಗಿ ಬಂದಿರುವ ಕಲೆಯನ್ನು ಕಳೆದ ಐದು ದಶಕಗಳ ಕಾಲ ನಾಡಿನುದ್ದಗಲಕ್ಕೂ ಪರಿಚಯಿಸಿದ್ದಾರೆ.
ರಾಮಣ್ಣನವರಿಗೆ ಒಟ್ಟು 5 ಜನ ಮಕ್ಕಳಿದ್ದು, ಪುತ್ರರಾದ ವೇಷಗಾರ ಮೋತಿ ಮಾರುತಿ, ವೇಷಗಾರ ಚಂದ್ರಪ್ಪ, ವೇಷಗಾರ ಮಂಜುನಾಥ ಅವರು ಸಹ ವಂಶಪಾರಂಪರ್ಯ ಬಣದ ಬದುಕಿನ ಕುಲಕಸುಬು ಮಾಡುತ್ತಿದ್ದಾರೆ. ರಾಮಾಯಣದ ಪಾತ್ರಗಳಾದ ಹನುಮಂತ, ರಾಕ್ಷಿಸಿ, ಜಾಂಬವಂತ, ರಾಮ, ಸೀತೆ ಮುಂತಾದ ಪಾತ್ರಗಳನ್ನು ಮನೆ ಮನೆಗಳಿಗೆ ಸಜೀವವಾಗಿ ತೆರಳಿ ಪ್ರೇಕ್ಷಕರ ಮನ ತಣಿಸುವ ಕೆಲಸ ಮಾಡಿದ್ದಾರೆ. ರಾಮಣ್ಣ ಅವರು ಬಹುತೇಕ ಆಂಜನೇಯ ಪಾತ್ರ ಮಾಡಿದ್ದು, ಭೀಮ, ಅರ್ಜುನ್, ರಾಮ ಲಕ್ಷಣ, ಈಶ್ವರ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ವಂಶಪಾರಂಪರ್ಯವಾಗಿ ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸಿ ಹೊಟ್ಟೆ ಹೊರೆಯುವ ಕಾಯಕವನ್ನು ವೇಷಗಾರರ ಮೋತಿ ರಾಮಣ್ಣ ತಂಡ ಮಾಡಿದೆ.
ಯಾವುದೇ ರೀತಿಯ ವೇದಿಕೆ, ವಿದ್ಯುತ್, ಧ್ವನಿವರ್ಧಕದ ವ್ಯವಸ್ಥೆ ಬೇಕಾಗಿಲ್ಲ, ಬೀದಿಯಲ್ಲಿ, ಮನೆಗಳ ಮುಂದೆ ತಮ್ಮ ಕಲಾಪ್ರದರ್ಶನ ಮಾಡುತ್ತಿದ್ದಾರೆ. ವಿವಿಧ ವೇಷಗಳನ್ನು ಧರಿಸಿ ಪೌರಾಣಿಕ ಪಾತ್ರಗಳನ್ನು ಮನಮುಟ್ಟುವಂತೆ ಅಭಿನಯಿಸುತ್ತಾರೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಬಣ್ಣವನ್ನು ಹಚ್ಚಿಕೊಂಡು ಅದಕ್ಕೆ ತಕ್ಕಂತೆ ನೃತ್ಯ ಸಂಭಾಷಣೆಗಳನ್ನು ಹೇಳುವುದು ಇವರಿಗೆ ಕರಗತವಾಗಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳು, ಶಿಶುನಾಳ ಶರೀಫರ ತತ್ವಪದಗಳು, ದಾಸರ ಕೀರ್ತನೆಗಳನ್ನೂ ಸುಮಧುರವಾಗಿ ಹಾಡುತ್ತಾರೆ. ಇವರಿಗೆ ಪುತ್ರರಾದ ಮೋತಿ ಮಾರುತಿ ಹಾರ್ಮೋನಿಯಂ, ಮೋತಿ ಚಂದ್ರಪ್ಪ ತಬಲಾ ನುಡಿಸುವ ಮೂಲಕ ಬದುಕಿನ ಬಂಡಿ ಸಾಗಿಸಲು ಸಾಥ್ ನೀಡುತ್ತಿದ್ದಾರೆ.
ಜಾನಪದ ಅಕಾಡೆಮಿ ಅಧ್ಯಕ್ಷರಾದ ಜೋಗತಿ ಮಂಜಮ್ಮನವರು ಹಳ್ಳಿಗಾಡಿನಲ್ಲಿ ಎಲೆಮರಿಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿದ್ದಾರೆ. ನನ್ನ ಬಣ್ಣದ ಬದುಕಿನ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನು ಅವರಿಗೆ ಚಿರಋಣಿಯಾಗಿದ್ದೇನೆ.
ಮೋತಿ ರಾಮಣ್ಣ,
ಪ್ರಶಸ್ತಿ ಪುರಸ್ಕೃತ
ಎಸ್.ಎನ್.ಕುಮಾರ್ ಪುಣಬಗಟ್ಟಿ