ಹರಪನಹಳ್ಳಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಂಬಂಧಿಸಿದ ಅರ್ಜಿ ಸ್ವೀಕಾರದ ಪ್ರತ್ಯೇಕ ಕೌಂಟರ್ ತೆರೆಯುವುದಿಲ್ಲ, ಬದಲಿಗೆ ನಾನೇ ತಿಂಗಳಿಗೊಮ್ಮ ಭೇಟಿ ನೀಡಿ ಕುಂದುಕೊರತೆಗಳ ಅರ್ಜಿ ಸ್ವೀಕರಿಸುತ್ತೇನೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.
ಪಟ್ಟಣಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿ ಕಂದಾಯ ಇಲಾಖೆ ಸಿಬ್ಬಂದಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಬಳ್ಳಾರಿ ದೂರವಾಗುವ ಹಿನ್ನೆಲೆಯಲ್ಲಿ ಹರಪನಹಳ್ಳಿ ಮಿನಿವಿಧಾನಸೌಧದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕಾರಕ್ಕೆ ಜಿಲ್ಲಾಧಿಕಾರಿಗಳ ಪ್ರತ್ಯೇಕ ಕೌಂಟರ್ ತೆರೆದು ಇಲ್ಲಿಯೇ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡುವುದಾಗಿ ಹಿಂದಿನ ಜಿಲ್ಲಾಧಿಕಾರಿಗಳು ಭರವಸೆ ನೀಡಿರುವುದು ನನ್ನ ಗಮನಕ್ಕೆ ಇಲ್ಲ. ಇಂತಹ ವ್ಯವಸ್ಥೆ ಎಲ್ಲಿಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹರಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲ ಇಲಾಖೆಗಳ ಸಿಬ್ಬಂದಿ ವೇತನಕ್ಕೆ ಬಿಡುಗಡೆ ವಿಳಂಬವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಕಂದಾಯ ಇಲಾಖೆ ಕೋಡ್ ಕೊಟ್ಟು ಅನುದಾನ ಕೂಡ ಬಿಡುಗಡೆಯಾಗಿದೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆ ವೇತನಕ್ಕೆ ಸಂಬಂಧಿಸಿದಂತೆ ಸಿಇಒ ಅವರು ನಾಳೆ ಸಂಜೆವೊಳಗೆ ಸಮಸ್ಯೆ ಪರಿಹಾರ ಮಾಡಲಿದ್ದಾರೆ. ಆರೋಗ್ಯ ಇಲಾಖೆ ಸಂಬಂಧಿಸಿದಂತೆ ಕೆಲವೊಂದು ಪ್ರಕ್ರಿಯೆ ನಡೆಯಬೇಕಾಗಿದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಈಗಾಗಲೇ ಮೇವು ಬ್ಯಾಂಕ್ ತೆರೆಯಲಾಗಿದೆ. ಇದಲ್ಲದೇ ಅಗತ್ಯವಿರುವ ವಿವಿಧ ಗ್ರಾಮಗಳಲ್ಲಿ 60 ಖಾಸಗಿ ಬೋರ್‌ವೆಲ್ ಹಾಗೂ 10 ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆಯಾಗಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್ಗಳು ಅಂತರ್ಜಲ ಹೆಚ್ಚಳವಾಗಿರಬಹುದು. ಹೀಗಾಗಿ ಮುಂದುವರೆಸಬೇಕಾ ಅಥವಾ ಬೇಡವಾ ಎನ್ನುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹರಪನಹಳ್ಳಿ, ಕೊಟ್ಟೂರು, ಹಡಗಲಿ ಮೂರು ತಾಲೂಕುಗಳನ್ನು ಒಳಗೊಂಡ ಕಂದಾಯ ಉಪವಿಭಾಗ ಕಚೇರಿ ಹರಪನಹಳ್ಳಿಯಲ್ಲಿ ಮುಂದುವರೆಸುವ ಕುರಿತು ಇದೀಗ ಆಕ್ಷೇಪಣೆಗೆ ಕಾಲಾವಕಾಶವಿದ್ದು, ಜು. 25ರಂದು ಅಂತಿಮ ಆದೇಶ ಹೊರ ಬೀಳಲಿದೆ ಎಂದು ತಿಳಿಸಿದರು. ನಂತರ ಪಟ್ಟಣದ ಪ್ರವಾಸಿ ಮಂದಿರ ಕಟ್ಟಡ ಹಾಗೂ ಜಾಗವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ತಹಶೀಲ್ದಾರ್ ಡಾ| ನಾಗವೇಣಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.