ಹರಪನಹಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಬಡವರು ಹಾಗೂ ನಿರಾಶ್ರಿತ ಕುಟುಂಬಗಳಿಗೆ ತಾಲೂಕಿನ ಹಲುವಾಗಲು ಗ್ರಾಮದ ಪ್ರಗತಿಪರ ರೈತ ಕಲ್ಲೇರ ಬಸವರಾಜ್ ಅವರು ತಾವು ಬೆಳೆದ 100 ಕ್ವಿಂಟಲ್ ಜೋಳವನ್ನು ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹಲುವಾಗಲು ಮತ್ತು ಗ್ರಾಪಂ ವ್ಯಾಪ್ತಿಗೆ ಒಳಪಡುವ ಗರ್ಭಗುಡಿ, ಗರ್ಭಗುಡಿ ತಾಂಡಾ, ಕಣವಿ ಮತ್ತು ಒಳತಾಂಡಾ ನಿವಾಸಿಗಳ ಪ್ರತಿ ಕುಟುಂಬಕ್ಕೆ ತಲಾ 5 ಕೆ.ಜಿ. ವಿತರಿಸಲು ಆರಂಭಿಸಿದ್ದಾರೆ. ಪಡಿತರ ಚೀಟಿಯುಳ್ಳ ಅಂದಾಜು 2,200 ಕುಟುಂಬ, ಪಡಿತರ ಇಲ್ಲದಿರುವ 175 ಕುಟುಂಬಗಳಿಗೆ ತಲಾ 5 ಕೆ.ಜಿ. ಜೋಳವನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಕೋವಿಡ್ ತಡೆಗಾಗಿ ಲಾಕ್‌ಡೌನ್ ಘೋಷಿಸಿದ್ದು, ದುಡಿಯುವ ಜನರಿಗೆ ಕೂಲಿ ಕೆಲಸ ಸಿಗುತ್ತಿಲ್ಲ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಮಗೆ ಕಲ್ಲೇರ ಬಸವರಾಜ್ ಅವರು ಸ್ವತಃ ತಾವು ಬೆಳೆದ ಜೋಳವನ್ನು ಹಂಚಿರುವುದು ನಮಗೆ ಅನುಕೂಲವಾಗಿದೆ ಎಂದು ಜೋಳ ಪಡೆದುಕೊಂಡ ನಿರಾಶ್ರಿತರು ತಿಳಿಸಿದರು.
“ಕೋವಿಡ್ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದೆ. ಒಂದೆಡೆ ಕೆಲಸವಿಲ್ಲ. ಮತ್ತೂಂದೆಡೆ ತಿನ್ನಲು ಅನ್ನವಿಲ್ಲ ಎಂಬುವಂತಾಗಿದೆ. ದುಡಿದು ತಿನ್ನುತ್ತಿದ್ದ ಜನ ಇಂದು ಬೇಡುವ ಪರಿಸ್ಥಿತಿ ಎದುರಾಗಿದೆ. ಈ ವರ್ಷ ದೇವರು ನನಗೆ ಹೆಚ್ಚಿನ ಇಳುವರಿ ಕೊಟ್ಟಿದ್ದಾನೆ. ಹಂಚಿ ತಿನ್ನುವುದರಲ್ಲಿ ಇರುವ ಸುಖ ಇನ್ನೊಂದರಲ್ಲಿಲ್ಲ. ಕಷ್ಟದ ಸಮಯದಲ್ಲಿ ನಮ್ಮವರಿಗೆ ನೆರವಾಗಬೇಕು ಎನ್ನುವ ದೃಷ್ಟಿಯಿಂದ ಬೆಳೆದಿದ್ದ ಜೋಳವನ್ನೆಲ್ಲ ವಿತರಿಸುತ್ತಿದ್ದೇನೆ’ ಎಂದು ರೈತ ಕಲ್ಲೇರ ಬಸವರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಹಲುವಾಗಲು ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಪ್ಪ, ಗ್ರಾಪಂ ಸದಸ್ಯ ದ್ಯಾಮಣ್ಣ, ಮುಖಂಡರಾದ ರಂಗಜ್ಜಿ ಹನುಮಂತಪ್ಪ, ಬೆಂಡಾಲಿ ಬಸವರಾಜಪ್ಪ, ಅರಸನಾಳು ಬಸಪ್ಪ, ಅರಿವಿ ಅಂಜಿನಪ್ಪ, ಮಡಿವಾಳರ ನಾಗರಾಜ್, ನಿಟ್ಟೂರು ಸೋಮಣ್ಣ, ಕೋಳಿಕಾಲ್ ರುದ್ರಪ್ಪ, ಎಂ.ಮಹೇಂದ್ರ ಇದ್ದರು.